ಮಾಜೀ ಮಂತ್ರಿಗೆ ಮಾಜೀ ಮಂತ್ರಿಯ ನುಡಿ ಛಡಿಯೇಟು
ನನ್ನನ್ನು ಗಡಿಪಾರು ಮಾಡುವುದಕ್ಕೆ ಮೊದಲು ನೀನು ಗಡಿಪಾರು ಆಗುವುದರಿಂದ ರಕ್ಷಿಸಿಕೋ ಎಂದು ಮಾಜೀ ಸಚಿವ ಬಿ. ಕೆ. ಹರಿಪ್ರಸಾದ್ ಅವರು ಮತ್ತೊಬ್ಬ ಮಾಜೀ ಮಂತ್ರಿ ಶ್ರೀರಾಮುಲುಗೆ ಎಚ್ಚರಿಕೆ ನೀಡಿದ್ದಾರೆ. ರಾಮುಲು ಅವರೆ ನೀವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಹಲವು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಬರೆದು ಹೇಳಿದ್ದೀರಿ. ಕಳ್ಳ ಗಣಿಗಾರಿಕೆ ಮಾಡಿ, ತೆರಿಗೆ ವಂಚಿಸಿ ದೇಶದ್ರೋಹ ಮಾಡಿದ್ದೀರಿ. ನಿಮ್ಮ ಗೃಹ ಮಂತ್ರಿ ಅಮಿತ್ ಶಾರನ್ನು ಕೋರ್ಟು ಗಡಿಪಾರು ಮಾಡಿದ್ದ ಚರಿತ್ರೆ ಮರೆಯಬೇಡಿ ಎಂದು ವಿಧಾನ ಪರಿಷತ್ ಸದಸ್ಯರಾದ ಹರಿಪ್ರಸಾದ್ ಅವರು ಶ್ರೀರಾಮುಲು ಮತ್ತು ಬಿಜೆಪಿಗೆ ಕಾರವಾಗಿ ಉತ್ತರಿಸಿದ್ದಾರೆ.
ಬಳ್ಳಾರಿಯಲ್ಲಿ ರೆಡ್ಡಿ ಗ್ಯಾಂಗ್ ಜೊತೆ ಸೇರಿಕೊಂಡು ಕಳ್ಳ ಗಣಿಗಾರಿಕೆ ನಡೆಸಿ ದೇಶ ಮತ್ತು ರಾಜ್ಯದ ಬೊಕ್ಕಸಕ್ಕೆ ಕೋಟಿಗಟ್ಟಲೆ ರೂಪಾಯಿ ವಂಚಿಸಿದ ಜನಾರ್ದನ ರೆಡ್ಡಿ ಗುಂಪಿನಲ್ಲಿ ಬಿ. ಶ್ರೀರಾಮುಲು ಒಬ್ಬರು. ಆಗ ಬದುಕಿದ್ದ ಸುಷ್ಮಾ ಸ್ವರಾಜ್ ದೊಡ್ಡ ಜೇಬಿನ ಕೋಟು ಹಾಕಿಕೊಂಡು ಬಳ್ಳಾರಿಗೆ ಬಿಜೆಪಿ ಪರವಾಗಿ ಬರುತ್ತಿದ್ದರು. ಇಲ್ಲಿ ಕಳ್ಳ ಗಣಿಗಾರಿಕೆಯ ಹಣದಿಂದ ವರಮಹಾಲಕ್ಷ್ಮಿ ಪೂಜೆ ನಡೆಯುತ್ತಿತ್ತು. ಅನಂತರ ಕರ್ನಾಟಕ ಲೂಟಿ ಮಾಡಿದ ನಿಧಿಯು ಬಿಜೆಪಿ ಪಕ್ಷದ ನಿಧಿಯಾಗಿ ಹೋಗುತ್ತಿತ್ತು. ಆ ಗುಂಪಿನ ಹಲವರು ಜೈಲಿಗೆ ಹೋದರು. ಕೆಲವರು ಜಾಮೀನಿನಲ್ಲಿ ಹೊರಗೆ. ಮತ್ತೆ ಕೆಲವರನ್ನು ಜನರು ಹಣಕ್ಕೆ ಮರುಳಾಗಿ ಜನಪ್ರತಿನಿಧಿಗಳಾಗಿ ಆರಿಸಿದ್ದೂ ಆಗಿದೆ.
ಈಗ ರಾಮ ಮಂದಿರ ಬಹಳ ಸುದ್ದಿಯಲ್ಲಿರುವ ಕಾಲ. ಅಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪಿಸುತ್ತಾರೆ. ಹಾಗಾಗಿ ಪಕ್ಕದಲ್ಲಿ ಸೀತೆ ಇರಬೇಕಾದ ಅಗತ್ಯ ಇಲ್ಲ. ಪುರಾಣಗಳಲ್ಲಿ ಸೀತೆಯ ಗಡಿಪಾರು ಬಹಳ ಪ್ರಸಿದ್ಧ. ಅಗಸ ಹಳಿದನೆಂದು ಅರಸ ರಾಮ ಸೀತೆಯನ್ನು ಹೇಳದೆಯೇ ಕಾಡಿಗೆ ಗಡಿಪಾರು ಮಾಡಿದ. 70ರ ದಶಕದಲ್ಲಿ ಬ್ಯಾನಿಸ್‍ಮೆಂಟ್ ಸೀತ ಕವಿತೆ ಕ್ಯಾರವಾನ್ ಪತ್ರಿಕೆಯಲ್ಲಿ ಸುದ್ದಿ ಮಾಡಿತ್ತು. 60ರ ದಶಕದಲ್ಲಿ ಹಿಂದಿ ಪತ್ರಿಕೆ ಸರಿತದಲ್ಲಿ ಬಂದಿದ್ದ ಕವಿತೆಯದು. ಆಗ ನಡೆದ ಮೊಕದ್ದಮೆಯಲ್ಲಿ ನ್ಯಾಯಾಲಯಕ್ಕೆ ನೂರಾರು ರಾಮಾಯಣಗಳನ್ನು ತಂದು ರಾಶಿ ಹಾಕಲಾಗಿತ್ತು. ಕವನದ ವಿರುದ್ಧ ಕೋರ್ಟು ಮೆಟ್ಟಿಲು ಹತ್ತಿದ್ದ ರಾಮ ಭಕ್ತರಿಗೆ ಏನೂ ಮಾಡಲಾಗಲಿಲ್ಲ.
ಇಂಗ್ಲಿಷಿನಲ್ಲಿ ಬ್ಯಾನಿಶ್ ಮತ್ತು ಎಕ್ಸೈಲ್ ಎರಡಕ್ಕೂ ಬೇರೆ ಬೇರೆ ಅರ್ಥ ಕೊಡುತ್ತಾರೆ. ಬ್ಯಾನಿಶ್ ಎನ್ನುವುದು ಇನ್ನೆಂದೂ ಬರುವಂತಿಲ್ಲ ಎನ್ನುವುದಾಗಿದೆ. ಸೀತೆಗೆ ಆದುದು ಆ ಬಗೆಯ ಗಡಿಪಾರು. 1957ರ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ ಬಳಿಕ ಕೊನೆಯ ಮೊಗಲ್ ದೊರೆ ಬಹದೂರ್ ಶಾ ಬಂಧಿತರಲ್ಲಿ ಒಬ್ಬರು. ವಿಚಾರಣೆ ನಡೆದು ಅವರನ್ನು ರಂಗೂನ್‍ಗೆ ಈಗಿನ ಯಾಂಗೂನ್‍ಗೆ ಬ್ಯಾನಿಶ್ ಗಡಿಪಾರು ಮಾಡಲಾಯಿತು. ಆಳಿದ ಅರಸನಿಗೆ ಈಗ ಆರಡಿ ಮೂರಡಿ ಸ್ಥಳ ಇಲ್ಲ ಎಂದೆಲ್ಲ ಕವನ ಬರೆಯುತ್ತ ಅವರು ಅಲ್ಲಿ 1962ರಲ್ಲಿ ಸತ್ತರು. ಅಲ್ಲಿ ಅವರ ಸಮಾಧಿ ದರ್ಗಾ ಮನ್ನಣೆ ಪಡೆದಿದೆ.
ಬಿ. ಕೆ. ಹರಿಪ್ರಸಾದ್ ಎತ್ತಿರುವ ಅಮಿತ್ ಶಾ ವಿಷಯವು ಹಿಂದೆ 2010- 12ರ ನಡುವೆ ಅಮಿತ್ ಶಾ ಗುಜರಾತ್ ಪ್ರವೇಶಿಸುವಂತಿಲ್ಲ ಎಂಬ ಕೋರ್ಟು ಕಟ್ಟಲೆಗೆ ಸಂಬಂಧಿಸಿದ್ದಾಗಿದೆ. ಇದು ಎಕ್ಸೈಲ್. ಸೊಹ್ರಾಬುದ್ದೀನ್ ನಕಲಿ ಎನ್‍ಕೌಂಟರ್ ಕೇಸಿನಲ್ಲಿ ಅಮಿತ್ ಶಾ 2010ರ ಅಕ್ಟೋಬರಿನಲ್ಲಿ ಜಾಮೀನು ಪಡೆದರೂ ಗುಜರಾತಿಗೆ ಪ್ರವೇಶಿಸುವಂತಿಲ್ಲ ಎಂಬ ಗಡಿಪಾರು ಶಿಕ್ಷೆಗೆ ಒಳಗಾದರು. ಅದು 2012ರಲ್ಲಿ ಮತ್ತೆ ನೀಗಲ್ಪಟ್ಟ ಮೇಲೆ ಅಮಿತ್ ಶಾ ಮತ್ತೆ ಗುಜರಾತಿ ಆದರು.
ಭಾರೀ ಪ್ರಸಿದ್ಧ ಗಡಿಪಾರು ಎಂದರೆ ನಟ ಚಾರ್ಲಿ ಚಾಪ್ಲಿನ್‍ರದು. ಇದು ಬ್ಯಾನಿಶ್‍ಮೆಂಟ್. ಚಾರ್ಲಿ ಚಾಪ್ಲಿನ್ ಅವರು ತಮ್ಮದೇ ದೇಶ ಇಂಗ್ಲೆಂಡ್ ಪ್ರವಾಸದಲ್ಲಿ ಇದ್ದಾಗ 1952ರ ಸೆಪ್ಟೆಂಬರ್ 19ರಂದು ಅಮೆರಿಕ ಸಂಯುಕ್ತ ಸಂಸ್ಥಾನವು ಮತ್ತೆ ಅಮೆರಿಕಕ್ಕೆ ಹಿಂತಿರುಗದಂತೆ ಗಡಿಪಾರು ಮಾಡಿತು. ಬ್ರಿಟನ್ನಿನಲ್ಲಿ ಹುಟ್ಟಿ ರಂಗ ನಗೆ ನಟನಾಗಿ ಬೆಳೆದ ಚಾರ್ಲಿ ಚಾಪ್ಲಿನ್ 1914ರಲ್ಲಿ ಚಿತ್ರ ನಟರಾಗಿ ಹಾಲಿವುಡ್ ಸೇರಿದವರು ಅಲ್ಲಿನ ನಿವಾಸಿಯೇ ಆಗಿದ್ದರು. ಎರಡು ಮಹಾಯುದ್ಧಗಳ ಸಮಯದಲ್ಲಿ ಅಮೆರಿಕದ ಸೇನೆಗೆ ಚಿತ್ರರಂಗದಿಂದ ಭಾರೀ ನಿಧಿ ಸೇರಿಸಿ ಕೊಡುವಲ್ಲಿ ಚಾರ್ಲಿ ಚಾಪ್ಲಿನ್ ಪಾತ್ರ ಅದ್ಭುತವಾಗಿತ್ತು. ಕಮ್ಯೂನಿಸ್ಟ್ ಸಂಪರ್ಕ ಎಂದು ಚಾಪ್ಲಿನ್‍ರನ್ನು ಹೊರದಬ್ಬಲಾಯಿತು. ಅವರ ಒಂದು ಚಿತ್ರ ಕಿಂಗ್ ಇನ್ ನ್ಯೂಯಾರ್ಕ್‍ನಲ್ಲಿ ಕಮ್ಯೂನಿಸ್ಟ್ ಒಬ್ಬರ ಮಗನಿಗೆ ಚಾರ್ಲಿ ಚಾಪ್ಲಿನ್ ಆಸರೆ ನೀಡುವ ದೃಶ್ಯ ಇದೆ. ಚಾರ್ಲಿ ಚಾಪ್ಲಿನ್‍ರ ಕೊನೆಯ ಹೆಂಡತಿ ಊನಾಗೆ ಕಮ್ಯೂನಿಸ್ಟ್ ಸಂಪರ್ಕ ಇದೆ ಎಂಬ ಆರೋಪವೂ ಗಡಿಪಾರಿಗೆ ಕಾರಣ. ಬ್ರಿಟನ್ ಸಹ ಯುಎಸ್‍ಎ ಪರ ಇದ್ದುದರಿಂದ ಚಾರ್ಲಿ ಚಾಪ್ಲಿನ್ ಮುಂದೆ ಸ್ವಿಜರ್ಲ್ಯಾಂಡ್‍ನ ಮನೋರ್ ಡೆ ಬಾನ್‍ನಲ್ಲಿ ನೆಲೆಸಿದರು. ಅಲ್ಲೇ ಅವರು 1977ರ ಡಿಸೆಂಬರ್ 25ರ ಕ್ರಿಸ್ಮಸ್ ದಿನದಂದು ನಿಧನರಾದರು.
ಇತಿಹಾಸದಲ್ಲಿ ಬಲ್ಗೇರಿಯಾದ ತ್ಸಾರ್ ಅರಸು, ಜಪಾನಿನ ದೊರೆಗಳು, ಪೋಲೆಂಡಿನ ಡ್ಯೂಕ್ ಮೊದಲಾದವರದು ಚಾರಿತ್ರಿಕ ಗಡಿಪಾರುಗಳು ಎನಿಸಿವೆ. ಈಗ ಭಾರತದ ಹಲವರು ಬ್ಯಾಂಕುಗಳಿಗೆ ಟೋಪಿ ಹಾಕಿ ತಮಗೆ ತಾವೇ ಗಡಿಪಾರು ಪರಾರಿ ಶಿಕ್ಷೆ ಕೊಟ್ಟುಕೊಂಡಿದ್ದಾರೆ. ಸ್ವಾಮಿ ನಿತ್ಯಾನಂದರಂತೂ ಕೈಲಾಸ ನಿರ್ಮಾಣ ಮಾಡಿದ್ದಾರೆ ಬಿಡಿ.