ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಶ್ರೀ ಮಾರಿಯಮ್ಮನ ಕ್ಷೇತ್ರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ

ಕಾಪು:ಕರ್ನಾಟಕ ಸರಕಾರದ ಮಾಜಿ ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಅವರು ಇಂದು ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಕ್ಷೇತ್ರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವಿಯ ದರುಶನ ಪಡೆದರು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.

ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ದೇವಳದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿಯವರ ಸಮಕ್ಷಮದಲ್ಲಿ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಅವರನ್ನು ಗೌರವಿಸಲಾಯಿತು.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಐತಿಹ್ಯ ಇರುವಂತೆ ಹಿಂದೆ ವಿಜಯನಗರ ಸಾಮ್ರಾಜ್ಯದಲ್ಲಿ ಕೆಳದಿಯ ಅರಸರ ದಂಡನ್ನ ಆಶೀರ್ವದಿಸಿ ದಂಡಿನ ಮಾರಿಯಾಗಿ, ಸೈನ್ಯಕ್ಕೆ ರಕ್ಷಣೆಯನ್ನ ಮತ್ತು ಜಯವನ್ನು ಒದಗಿಸಿಕೊಟ್ಟ ತಾಯಿ ಕಾಪುವಿನಲ್ಲಿ ನೆಲೆಸಿ ಭಕ್ತರನ್ನ ಹರಸುತ್ತಾ ಬಂದಿದ್ದಾರೆ, ಸಮಿತಿಯವರು ದೇವಳವನ್ನು ಜೀರ್ಣೋದ್ಧಾರ ಮಾಡಿ ಆ ತಾಯಿಯ ಸೇವೆಯನ್ನು ಮಾಡ್ತಾ ಇದ್ದಾರೆ, ನಾನು ಈಗಾಗಲೇ ಬರಬೇಕಿತ್ತು ಕಾರ್ಯದ ಒತ್ತಡದಿಂದ ಸಾಧ್ಯವಾಗಿಲ್ಲ, ಇಂದು ತಾಯಿಯನ್ನು ಕಾಣುತ್ತಿರುವುದು ನನ್ನ ಪರಮ ಸೌಭಾಗ್ಯ, ಕುಟುಂಬದ ಜೊತೆ ಮತ್ತೊಮ್ಮೆ ತಾಯಿಯ ದರುಶನ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದರು ಮತ್ತು ನಾಡಿನ ಸಮಸ್ತ ಜನತೆಗೂ ದೀಪಗಳ ಹಬ್ಬ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಜಿತೇಂದ್ರ ಶೆಟ್ಟಿ ಉದ್ಯಾವರ, ಅನಿಲ್ ಕುಮಾರ್ ಕಾಪು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.