ಕೊಕ್ಕಡ: ಕೃಷಿ ತೋಟಕ್ಕೆ ಕಾಡಾನೆ ದಾಳಿ; ಅಡಿಕೆ, ಬಾಳೆ ಕೃಷಿ ಧ್ವಂಸ

ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಸಮೀಪದ ವಡ್ರಳಿಕೆ ಎಂಬಲ್ಲಿ ಕಾಡಾನೆ ಕೃಷಿ ತೋಟಗಳಿಗೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಉಂಟಾಗಿದೆ.

ರಫಾಯಲ್ ಸ್ಟ್ರೆಲ್ಲಾ ಎಂಬವರ ತೋಟಕ್ಕೆ ದಾಳಿ ಮಾಡಿದ ಕಾಡಾನೆ ಅಡಿಕೆ, ಬಾಳೆ ಕೃಷಿಯನ್ನು ಧ್ವಂಸ ಮಾಡಿದ್ದು, ಇದರಿಂದಾಗಿ ಕೃಷಿಕರಿಗೆ ಅಪಾರ ನಷ್ಟ ಉಂಟಾಗಿದೆ.
ಪದೇ ಪದೇ ಈ ರೀತಿಯ ದಾಳಿಯಿಂದ ಕೃಷಿಕರಿಗೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಇಲಾಖೆಯವರು ಪರಿಶೀಲಿಸಿ, ಕೃಷಿ ನಷ್ಟದ ಬಗ್ಗೆ ಸರ್ಕಾರದಿಂದ ಸಿಗುವ ಪರಿಹಾರ ದೊರಕಿಸಿಕೊಡುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
ಕೌಕ್ರಾಡಿ ಗ್ರಾಮದಲ್ಲಿ ಕೃಷಿ ತೋಟಗಳಿಗೆ ಒಂದಲ್ಲ ಒಂದು ಕಡೆ ಕಾಡಾನೆಗಳು ದಾಳಿ ನಡೆಸುತ್ತಿರುವುದು ಕಂಡುಬರುತ್ತದೆ, ಕೃಷಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸಂಬಂಧಪಟ್ಟ ಇಲಾಖೆಯವರು ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.
