ಮೂಡುಬಿದಿರೆ ತಾಲೂಕು ಮಟ್ಟದ ಕ್ರೀಡಾಕೂಟ: ಆಳ್ವಾಸ್ ಚಾಂಪಿಯನ್- 139 ಪದಕಗಳ ಸಾಧನೆ
ಮೂಡುಬಿದಿರೆ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಪ್ರಾಂತ್ಯ ಸರ್ಕಾರಿ ಪ್ರೌಢಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ 2025-26ನೇ ಸಾಲಿನ ಕ್ರೀಡಾಕೂಟದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಗಳು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ.
ಆಳ್ವಾಸ್ ಶಾಲೆಗಳು 14 ವರ್ಷ ಮತ್ತು 17 ವರ್ಷ ವಯೋಮಿತಿಯ ಎರಡೂ ವಿಭಾಗಗಳಲ್ಲಿ (ಬಾಲಕರು ಮತ್ತು ಬಾಲಕಿಯರು) ಪ್ರಾಬಲ್ಯ ಮೆರೆದು ಸಮಗ್ರ ಪ್ರಶಸ್ತಿಯನ್ನು ಗೆದ್ದಿದೆ. ಆಳ್ವಾಸ್ ವಿದ್ಯಾರ್ಥಿಗಳು ಒಟ್ಟು 58 ಚಿನ್ನ, 50 ಬೆಳ್ಳಿ ಮತ್ತು 31 ಕಂಚು ಪದಕಗಳನ್ನು ಗಳಿಸುವ ಮೂಲಕ ಒಟ್ಟಾರೆ 139 ಪದಕಗಳ ಸಾಧನೆ ಮಾಡಿದ್ದಾರೆ.
ಎರಡು ದಿನಗಳಹ ನಡೆದ ಈ ಕ್ರೀಡಾಕೂಟದ ಸಮಾರೋಪ ಸಮಾರಂಭವು ಬುಧವಾರ ಸಂಜೆ ನಡೆಯಿತು. ಆತಿಥೇಯ ಪ್ರಾಂತ್ಯ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷರಾದ ಜಿತೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ವಿನಯ ಕುಮಾರ್, ಗ್ರೇಡ್ 1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಚಂದ್ರ ಅಂಬೂರಿ, ಗ್ರೇಡ್ 2 ಸಂಘದ ಅಧ್ಯಕ್ಷೆ ವಿನ್ನಿಫ್ರೆಡ್ ಗ್ರೇಸಿ ಪಿಂಟೋ, ಪ್ರಾಂತ್ಯ, ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ಸಾಲ್ಯಾನ್, ಎಸ್ಡಿಎಂಸಿ ಅಧ್ಯಕ್ಷ ಭಾಸ್ಕರ್, ನಿವೃತ್ತ ದೈ.ಶಿ.ಶಿ. ಜಗದೀಶ ಅಜ್ರಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಡಾ. ರಾಮಕೃಷ್ಣ ಶಿರೂರು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ದೊರೆಸ್ವಾಮಿ ಕೆ.ಎನ್., ಗೌರಮ್ಮ ಗೋವರ್ಧನ ಹೊಸ್ಮನಿ , ದೈಹಿಕ ಶಿಕ್ಷಣ ಪರಿವೀಕ್ಷಕ ನವೀನ್ ಆರ್. ಪುತ್ರನ್ ಮತ್ತು ಆತಿಥೇಯ ಪ್ರೌಢಶಾಲಾ ಮುಖ್ಯ ರಾಮಚಂದ್ರ ನಾಯಕ್ ಉಪಸ್ಥಿತರಿದ್ದರು.
ಶಾಲಾ ದೈಹಿಕ ಶಿಕ್ಷಕ ನವೀನ್ ಚಂದ್ರ ಅಂಬೂರಿ ನಿರೂಪಿಸಿದರು.


















