ರಾಜ್ಯ ಮಟ್ಟದ ವೇಯ್ಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್: ಆಳ್ವಾಸ್‌ಗೆ ಸಮಗ್ರ ತಂಡ ಪ್ರಶಸ್ತಿ
ಮೂಡುಬಿದಿರೆ: ಕರ್ನಾಟಕ ರಾಜ್ಯ ಮಟ್ಟದ ಜೂನಿಯರ್, ಸಬ್ ಜೂನಿಯರ್ (ಬಾಲಕ-ಬಾಲಕಿಯರು) ಮತ್ತು ಸೀನಿಯರ್ (ಪುರುಷ ಮತ್ತು ಮಹಿಳೆಯರು) ವೇಯ್ಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಆಳ್ವಾಸ್ ಕಾಲೇಜು ಸ್ಪರ್ಧಿಗಳು, ಸ್ಪರ್ಧೆಯಲ್ಲಿನ ಎಲ್ಲ ಆರು ವಿಭಾಗಗಳಾದ ಜೂನಿಯರ್ ಬಾಲಕರು, ಜೂನಿಯರ್ ಬಾಲಕಿಯರು, ಸಬ್ ಜೂನಿಯರ್ ಬಾಲಕರು, ಸಬ್ ಜೂನಿಯರ್ ಬಾಲಕಿಯರು, ಸೀನಿಯರ್ ಪುರುಷರು ಮತ್ತು ಸೀನಿಯರ್ ಮಹಿಳೆಯರ ವಿಭಾಗಗಳಲ್ಲಿ ತಂಡ ಪ್ರಶಸ್ತಿ ಪಡೆದು ಸಮಗ್ರ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು.
ವೈಯಕ್ತಿಕ ಪ್ರಶಸ್ತಿಗಳ ಗರಿ:ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್‌ನ ಮಾನಸ ಅವರು ‘ಬೆಸ್ಟ್ ಲಿಫ್ಟರ್’ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು. ಅದೇ ರೀತಿ, ಮಹಿಳಾ ವಿಭಾಗದಲ್ಲಿ ಆಳ್ವಾಸ್‌ನ ತನುಷ ಸಹ ‘ಬೆಸ್ಟ್ ಲಿಫ್ಟರ್’ ವೈಯಕ್ತಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಈ ರಾಜ್ಯ ಮಟ್ಟದ ವೇಯ್ಟ್‌ಲಿಫ್ಟಿಂಗ್ ಪಂದ್ಯಾವಳಿಯನ್ನು ಕರ್ನಾಟಕ ರಾಜ್ಯ ವೇಯ್ಟ್‌ಲಿಫ್ಟಿಂಗ್ ಅಸೋಸಿಯೇಷನ್ ಮತ್ತು ಸ್ಪೋರ್ಟ್ಸ್ ಎಂಡ್ ಆರ್ಟ್ಸ್ ಅಸೋಸಿಯೇಷನ್ ಸುಳ್ಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅವರು ಅಭಿನಂದಿಸಿದ್ದಾರೆ.


















