ಆಳ್ವಾಸ್ ಸ್ಪೋಟ್ಸ್೯ಕ್ಲಬ್ ನ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ರಾಷ್ಟ್ರೀಯ ತಂಡಕ್ಕೆ ಆಯ್ಕೆ
ಮೂಡುಬಿದಿರೆ: ಆಳ್ವಾಸ್ ಸ್ಪೋಟ್ಸ್೯ ಕ್ಲಬ್‌ನ ಪ್ರತಿಭಾನ್ವಿತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ, ಭಾರತದ ರಾಷ್ಟ್ರೀಯ ಕಬ್ಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರು ನವೆಂಬರ್ 15ರಿಂದ 25 ರವರೆಗೆ ಬಾಂಗ್ಲಾದೇಶದ ಡಾಕಾದಲ್ಲಿ ನಡೆಯಲಿರುವ ಎರಡನೇ ಮಹಿಳಾ ಕಬಡ್ಡಿ ವಲ್ಡ್ಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಧನಲಕ್ಷ್ಮೀ ದಕ್ಷಿಣ ಭಾರತದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿದ್ದಾರೆ. ತನ್ನ ಆಲ್‌ರೌಂಡರ್ ಆಟದಿಂದ ತಂಡದಲ್ಲಿ ಬಹುಬೇಡಿಕೆಯ ಕ್ರೀಡಾಪಟುವಾಗಿದ್ದಾರೆ. ಧನಲಕ್ಷ್ಮೀ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯೊಂದಿಗೆ ಡಿಪ್ಲೋಮಾ ಕೋರ್ಸಗಳನ್ನು ಸಂಪೂರ್ಣ ಕ್ರೀಡಾ ದತ್ತು ಶಿಕ್ಷಣ ಯೋಜನೆಯಲ್ಲಿ ಉಚಿತವಾಗಿ ಪಡೆದಿದ್ದಾರೆ. ಇವರು ಜೂನಿಯರ್ ನ್ಯಾಷನಲ್, ಸೀನಿಯರ್ ನ್ಯಾಷನಲ್ ಹಾಗೂ ಫೆಡರೇಷನ್ ಕಪ್‌ನಲ್ಲಿ ಒಟ್ಟು 12 ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಈಗಾಗಲೇ ಸೀನಿಯರ್ ಹಾಗೂ ಜೂನಿಯರ್ ವಿಭಾಗದಲ್ಲಿ 4 ಬಾರಿ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಭಾಗವಹಿಸಿರುತ್ತಾರೆ. ಪ್ರಸ್ತುತ ಗುಜರಾತಿನ ಗಾಂಧಿನಗರದಲ್ಲಿರುವ ಸಾಯ್ ಸೆಂಟರ್‌ನಲ್ಲಿ ಅಂತಿಮ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ದಕ್ಷಿಣಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಸಹಕಾರ ಸ್ಮರಿಸಲಾಗಿದೆ.
ನಮ್ಮ ವಿದ್ಯಾರ್ಥಿನಿ ಧನಲಕ್ಷ್ಮಿ ರಾಷ್ಟ್ರ ತಂಡಕ್ಕೆ ಆಯ್ಕೆಯಾಗಿರುವುದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪರವಾಗಿ ಅಪಾರ ಹೆಮ್ಮೆಯ ಕ್ಷಣ. ಕ್ರೀಡೆ ಮತ್ತು ಶಿಕ್ಷಣದ ಸಮನ್ವಯದ ನಮ್ಮ ‘ಕ್ರೀಡಾ ದತ್ತು ಶಿಕ್ಷಣ ಯೋಜನೆ’ಯ ಯಶಸ್ಸಿಗೆ ಇದು ಶ್ರೇಷ್ಠ ಉದಾಹರಣೆ. ದಕ್ಷಿಣ ಭಾರತದ ಏಕೈಕ ಪ್ರತಿನಿಧಿಯಾಗಿ ಆಕೆಯ ಆಯ್ಕೆ ಪ್ರತಿಭೆ, ಪರಿಶ್ರಮ ಮತ್ತು ಶಿಸ್ತಿನ ಪ್ರತಿಫಲ. ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಾ, ಆಕೆಯು ದೇಶದ ಕೀರ್ತಿಯನ್ನು ವಿಶ್ವ ವೇದಿಕೆಯಲ್ಲಿ ಉನ್ನತ ಮಟ್ಟಕ್ಕೆ ಏರಿಸಲಿ ಎಂಬ ಹಾರೈಕೆ.— ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ


















