ಅಕಾಡೆಮಿಯಿಂದ ವಿದ್ಯಾರ್ಥಿಗಳಲ್ಲಿ ತುಳು ಸಾಹಿತ್ಯದ ಅಭಿರುಚಿಗೆ ಪ್ರೇರಣೆ : ಚಿದಂಬರ ಬೈಕಂಪಾಡಿ

ಮಂಗಳೂರು : ತುಳು ಭಾಷೆಯಲ್ಲಿ ಅಪಾರವಾದ ಸಾಹಿತ್ಯವಿದೆ , ಈ ಸಾಹಿತ್ಯ ಕೃತಿಗಳ ಪರಿಚಯ ಮಾಡಿಕೊಳ್ಳಲು ಅಕಾಡೆಮಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ, ಈ ಮೂಲಕ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ಪ್ರೇರಣಾದಾಯಿಯಾಗಿ ಅಕಾಡೆಮಿ ಕೆಲಸ ಮಾಡುತ್ತಿದೆ ಎಂದು ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು ಹೇಳಿದರು

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಸಂತ್ ಕಾರಂದೂರು ಮಾತನಾಡಿ, ವಿದ್ಯಾರ್ಥಿಗಳಿಗೆ ಅಕಾಡೆಮಿ ಒದಗಿಸುತ್ತಿರುವ ಈ ಅವಕಾಶವನ್ನು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಬದುಕನ್ನು ಅರಿತುಕೊಳ್ಳಲು ತುಳು ಪುಸ್ತಕಗಳ ಓದು ಮುಖ್ಯವಾಗಿದೆ, ಈ ಹಿನ್ನೆಲೆಯಲ್ಲಿ ತುಳುವೇತರರೂ ಕೂಡ ತುಳು ನೆಲದ ಸೊಗಡು ಅರಿಯಲು ಕನ್ನಡ, ಇಂಗ್ಲೀಷ್, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ತುಳು ಕುರಿತು ಪುಸ್ತಕಗಳು ಅಕಾಡೆಮಿಯ ಲ್ಲಿ ಇವೆ ಎಂದರು.ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕರ್ಕೇರ, ಪ್ರಾಂಶುಪಾಲ ಡಾ.ಜಯಪ್ರಕಾಶ್ ಶುಭ ಕೋರಿದರು.ಗ್ರಂಥಪಾಲಕರಾದ ದಿವ್ಯಾ ಎಸ್., ವಿದ್ಯಾರ್ಥಿನಿ ಶ್ರೀ ದಿವ್ಯಾ, ಉಪನ್ಯಾಸಕರಾದ ವಸಂತ್, ಸುಪ್ರಜಾ ಉಪಸ್ಥಿತರಿದ್ದರು.ಅಕಾಡೆಮಿ ಸದಸ್ಯ ಬಾಬು ಕೊರಗ ಪಾಂಗಾಳ ಕಾರ್ಯಕ್ರಮ ನಿರೂಪಿಸಿದರು, ರಿಜಿಸ್ಟ್ರಾರ್ ಪೂರ್ಣಿಮಾ
ಸ್ವಾಗತಿಸಿದರು. ವಿದ್ಯಾರ್ಥಿ ಸುಮಿತ್ ವಂದಿಸಿದರು.

Related Posts

Leave a Reply

Your email address will not be published.