ಕಾಡುಪ್ರಾಣಿಗಳ ಹಾವಳಿ ವಿರುದ್ಧ ಕ್ರಮಕ್ಕೆ ಆಗ್ರಹ
ಮಂಡೆಕೋಲು ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಸುಳ್ಯ: ಕಳೆದ ಎರಡು ದಶಕಗಳಿಂದ ಮಂಡೆಕೋಲು ಗ್ರಾಮಸ್ಥರನ್ನು ಕಾಡುತ್ತಿರುವ ಕಾಡಾನೆ ಹಾಗೂ ಇತರ ವನ್ಯಮೃಗಗಳ ಹಾವಳಿ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಸೋಮವಾರ ಮಂಡೆಕೋಲಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ನೂರಾರು ಗ್ರಾಮಸ್ಥರು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಮಾತನಾಡಿ, ಗಡಿನಾಡ ಗ್ರಾಮವಾದ ಮಂಡೆಕೋಲು ಗ್ರಾಮಸ್ಥರು ಕಳೆದ ಹಲವಾರು ವರ್ಷಗಳಿಂದ ಕಾಡುಪ್ರಾಣಿಗಳ ಉಪಟಳದಿಂದ ರೋಸಿ ಹೋಗಿದ್ದಾರೆ. ಈ ಬಗ್ಗೆ ಆಗಾಗ ಗ್ರಾಮಸ್ಥರು ನನ್ನ ಬಳಿಗೂ ದೂರು ತಂದಿದ್ದಾರೆ. ಈ ಹಿಂದಿನ ಅಧಿವೇಶನಗಳಲ್ಲಿ ನಾನು ಸರಕಾರಕ್ಕೆ ಪ್ರಶ್ನೆ ಕೇಳಿ ಕಾಡು ಪ್ರಾಣಿಗಳ ಉಪಟಳಗಳ ಬಗ್ಗೆ ಶಾಸ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದೆ. ಇದೀಗ ಮಂಡೆಕೋಲು ಗ್ರಾಮಸ್ಥರ ಮನವಿ ಮೇರೆಗೆ ಮುಂದಿನ ಬೆಳಗಾವಿ ಅಧಿವೇಶನದಲ್ಲೂ ಈ ಬಗ್ಗೆ ದ್ವನಿ ಎತ್ತಿ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.

ಆನೆ ಹಾವಳಿ ತಡೆಗೆ ಸರಕಾರದಿಂದ ರಣ್ಯ ಇಲಾಖೆ ಮೂಲಕ ಸೋಲಾರ್ ಬೇಲಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಸೂಕ್ತ ಅನುದಾನವೇ ಬರುತ್ತಿಲ್ಲ. ವೈಯಕ್ತಿಕವಾಗಿಯೂ ಸೋಲಾರ್ ಬೇಲಿ ಅಳವಡಿಸಲು ಅವಕಾಶ ಇದ್ದು, ಅದಕ್ಕೆ ಸರಕಾರ ಶೇ.50 ಸಬ್ಸಿಡಿ ನೀಡುತ್ತಿದೆ. ಆದರೆ ಬಡವರೇ ಹೆಚ್ಚಾಗಿರುವ ಗ್ರಾಮದಲ್ಲಿ ಶೇ.50ರಷ್ಟು ಸಬ್ಸಿಡಿ ಪಡೆದೂ ಸೋಲಾರ್ ಬೇಲಿ ಅಳವಡಿಸಲು ಶಕ್ತಿ ಇಲ್ಲ. ಈ ಹಿನ್ನೆಲೆಯಲ್ಲಿ ಸರಕಾರವೇ ಮುಂದೆ ಬಂದು ಕೃಷಿ ಬೆಳೆ ರಕ್ಷಣೆಗಾಗಿ ಸಂಪೂರ್ಣ ಉಚಿತವಾಗಿ ಸೋಲಾರ್ ಬೇಲಿ ಅಳವಡಿಸಬೇಕು. ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಅರಣ್ಯ ಇಲಾಖೆ ಸುಳ್ಯ ವಲಯದ ಎಸಿಎಫ್ ಮಂಜುನಾಥ್ ಮಾತನಾಡಿ, ಗ್ರಾಮಸ್ಥರ ಬೇಡಿಕೆ ಸಕಾಲಿಕವಾಗಿದೆ. ನಮ್ಮ ಇಲಾಖೆ ವತಿಯಿಂದಲೂ ನಾವು ಆಗಾಗ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಇದ್ದೇವೆ. ಒಂದು ಕೀಮೀ ಉದ್ದ ಸೋಲಾರ್ ಅಳವಡಿಸಲು ಸುಮಾರು ಆರೂವರೆ ಲಕ್ಷ ರೂ. ವೆಚ್ಚವಾಗುತ್ತಿದ್ದು, ಅನುದಾನ ಬಂದಂತೆ ಆದ್ಯತೆ ಮೇರೆಗೆ ಸೋಲಾರ್ ಬೇಲಿ ಅಳವಡಿಕೆ ಮಾಡುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಗೆ ಆನೆ ಕಾರ್ಯಪಡೆ ಘೋಷಣೆ ಆಗಿದ್ದು, ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ತಕ್ಷಣ ಕಾರ್ಯಪಡೆ ಜಿಲ್ಲೆಗೆ ಬರಲಿದೆ. ಮುಂದೆ ಕಾರ್ಯಪಡೆ ಮೂಲಕ ಆನೆ ಹಾವಳಿ ತಡೆಯುವ ಪ್ರಯತ್ನ ಮಾಡಲಿದ್ದೇವೆ ಎಂದರು.

ಗ್ರಾಮಸ್ಥರ ಪರವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಮಾತನಾಡಿ, ಮಂಡೆಕೋಲು ಗ್ರಾಮಸ್ಥರು ಕಾಡುಪ್ರಾಣಿಗಳ ಹಾವಳಿಗೆ ತುತ್ತಾಗಿ ರೋಸಿ ಹೋಗಿ ಈಗ ಪ್ರತಿಭಟನೆಗೆ ಇಳಿದಿದ್ದೇವೆ. ಗ್ರಾಮದ ಯಾವುದೇ ರಸ್ತೆಯಲ್ಲಿ ಓಡಾಡದ ಸ್ಥಿತಿ ಇದೆ. ಯಾವುದೇ ಸರಕಾರಗಳು ಗ್ರಾಮಸ್ಥರ ನೋವನ್ನು ಆಲಿಸಿ ಪರಿಹರಿಸುವ ಪ್ರಯತ್ನ ಮಾಡಿಲ್ಲ. ಈ ನಿಟ್ಟಿನಲ್ಲಿ ಆಡಳಿತವನ್ನು ಎಚ್ಚರಿಸಿ ಗ್ರಾಮದಲ್ಲಿ ವನ್ಯ ಮೃಗಗಳ ನಿಯಂತ್ರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಾಶ್ವತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಮಂಡೆಕೋಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶಲ ಉದ್ದಂತಡ್ಕ, ಪ್ರಮುಖರಾದ ಶಿವಪ್ರಸಾದ್ ಉಗ್ರಾಣಿಮನೆ, ಜಯರಾಜ್ ಕುಕ್ಕೇಟಿ, ಬಾಲಚಂದ್ರ ದೇವರಗುಂಡ, ಡಾ.ಅನಂತಪದ್ಮನಾಭ ಭಟ್ ಎರ್ಕಲ್ಪಾಡಿ, ವಿನುತಾ ಪಾತಿಕಲ್ಲು, ಕೃಷ್ಣಪ್ರಸಾದ್ ಭಟ್, ಉದಯ ಆಚಾರ್, ಕೇಶವಮೂರ್ತಿ ಹೆಬ್ಬಾರ್, ಶೇಖರ ಮಣಿಯಾಣಿ ಕಣೆಮರಡ್ಕ, ರಾಜಶೇಖರ ಭಟ್ ಎರ್ಕಲ್ಪಾಡಿ, ಅನಂತಕೃಷ್ಣ ಚಾಕೋಟೆ, ಸಂತೋಷ್ ಚಾಕೋಟೆ, ಶುಭಕರ ಬೊಳುಗಲ್ಲು, ಜನಾರ್ದನ ಬೊಳುಗಲ್ಲು, ಗುರು ಹೆಬ್ಬಾರ್, ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ, ದಾಮೋದರ ಕಲ್ಲಡ್ಕ, ಸುನಿಲ್ ಪಾತಿಕಲ್ಲು, ಪದ್ಮನಾಭ ಪಾತಿಕಲ್ಲು, ಸುಬ್ರಹ್ಮಣ್ಯ ಮಾಸ್ತರ್, ರತ್ನಾಕರ ನಾಯಕ್, ಮುಕುಂದ ದೇವರಗುಂಡ, ಪುರುಷೋತ್ತಮ ಕಾಡುಸೊರಂಜ, ಧನಂಜಯ ಪಡ್ಪು, ದಿನಕರ ಪಡ್ಪು, ರಾಮಚಂದ್ರ ಗೌಡ ಹೊಸೊಕ್ಲು, ದಾಸಪ್ಪ ಗೌಡ ಹೊಸೊಕ್ಲು, ವಸಂತಿ ಉಗ್ರಾಣಿಮನೆ, ಮೋಹಿನಿ ಮಂಡೆಕೋಲು, ಸುದರ್ಶನ ಪಾತಿಕಲ್ಲು, ಲಕ್ಷ್ಮಣ ಉಗ್ರಾಣಿಮನೆ, ಪದ್ಮಾವತಿ ಪೆರಾಜೆ, ರಾಮಕೃಷ್ಣ ರೈ ಪೇರಾಲುಗುತ್ತು, ಜಲಜಾ ದೇವರಗುಂಡ, ವೀಣಾ ದೇವರಗುಂಡ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published.