ಕಾರ್ಮಿಕರು ದೇಶದ ಬೆನ್ನೆಲುಬು – ಶಾಸಕ ಸಿಮೆಂಟ್ ಮಂಜು
ಆಲೂರು: ಕಾರ್ಮಿಕರು ನಮ್ಮ ದೇಶದ ಬೆನ್ನೆಲುಬು, ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಗುರುವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಬ್ರಿಡ್ಜ್ ಕೋರ್ಸ್ ತರಬೇತಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಫಲಾನುಭವಿಗಳಿಗೆ ಸುರಕ್ಷತಾ ಕಿಟ್ ವಿತರಿಸಿ ಮಾತನಾಡಿದರು.
ದುಶ್ಚಟಕ್ಕೆ ಬಲಿಯಾದ ವ್ಯಕ್ತಿಯ ಆರೋಗ್ಯ ಹಾಳಾಗುವುದಲ್ಲದೆ, ಅವರ ಕುಟುಂಬ ಮತ್ತು ಸಮಾಜದ ಶಾಂತಿ ಸಹ ಹಾಳಾಗುವುದು’ ಆದ್ದರಿಂದ ಕಾರ್ಮಿಕರುದುಶ್ಚಟಗಳಿಂದ ದೂರ ಇದ್ದು ನಿಮ್ಮನ್ನೇ ನಂಬಿರುವ ನಿಮ್ಮ ಕುಟುಂಬಕ್ಕೆ ಆಧಾರವಾಗಿರಬೇಕು ಎಂದು ಕಿವಿಮಾತು ಹೇಳಿದರು.

ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಇ- ಶ್ರಮ್’ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಗೆ ಕಟ್ಟಡ ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು, ಚಾಲಕರು, ಮನೆಗೆಲಸದವರು ಸೇರಿ 379 ವರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಸೇರ್ಪಡೆ ಮಾಡಲಾಗಿದೆ.ವಾರ್ಷಿಕ ಶೈಕ್ಷಣಿಕ ನೆರವು,ವೈದ್ಯಕೀಯ ನೆರವು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆ ಮತ್ತು ಸೌಲಭ್ಯಗಳನ್ನು ಜಾರಿಗೊಳಿಸಿದ್ದರೂ, ಅರ್ಹರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ದೂರುಗಳು ಕಾರ್ಮಿಕರ ವಲಯದಿಂದ ವ್ಯಾಪಕವಾಗಿ ಕೇಳಿ ಬರುತ್ತಿವೆ ಈ ಕುರಿತು ಇಲಾಖೆ ಅಧಿಕಾರಿಗಳು ಕಾರ್ಮಿಕರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಹಾಗಾಗಿ ಆಲೂರು ತಾಲೂಕಿನಲ್ಲಿ ಕಾರ್ಮಿಕ ಕಚೇರಿ ಇಲ್ಲದೆ ಇರುವುದ್ದರಿಂದ ತಾತ್ಕಾಲಿಕವಾಗಿ ಕಚೇರಿ ತೆರೆದು ಕಾರ್ಮಿಕರ ಗುರುತಿನ ಚೀಟಿ ಹಾಗೂ ಗುರುತಿನ ಚೀಟಿಯ ನವೀಕರಣ ಕಾರ್ಯ ಪ್ರಾರಂಭ ಮಾಡುವಂತೆ ಸೂಚನೆ ನೀಡಿದರು.

ಶ್ರಮಿಕ ವರ್ಗವೇ ಪ್ರಸ್ತುತ ದೇಶದ ಸಂಪತ್ತು. ರಕ್ತದ ಜತೆ ಶ್ರಮ ಬೆರೆಸಿ ದೊಡ್ಡ ಕಟ್ಟಡ, ಅಣೆಕಟ್ಟು, ಕೆರೆಗಳನ್ನು ಕಟ್ಟಿದ್ದಾರೆ. ಶ್ರಮಿಕರಿಗೆ ಸರ್ಕಾರದಿಂದ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯ ಒದಗಿಸಲು ಕಾರ್ಮಿಕರ ಜತೆಯಲ್ಲಿ ಸದಾ ಇರುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ಮಾತನಾಡಿ,ವೈದ್ಯಕೀಯ ನೆರವಿಗಾಗಿ ವಾರ್ಷಿಕ ಗರಿಷ್ಠ 25 ಸಾವಿರ ರೂ. ನೀಡಲಾಗುತ್ತದೆ. ಸಾಮಾನ್ಯ ವೈದ್ಯಕೀಯ ತಪಾಸಣೆಗೆ 1 ಸಾವಿರ ರೂ. ನೀಡಲಾಗುತ್ತದೆ. ಅಲ್ಲದೆ ಮಹಿಳಾ ಕಾರ್ಮಿಕರಿಗಾಗಿ ಹೆರಿಗೆ ಸೌಲಭ್ಯದ ನೆರವು ರೂಪದಲ್ಲಿ 10 ಸಾವಿರ ರೂ. ಸಿಗುತ್ತದೆ ಎಂದು ಇಲಾಖೆ ವತಿಯಿಂದ ಸಿಗುವ ಸೌಲಭ್ಯಗಳ ಕುರಿತು ಸಭೆಯಲ್ಲಿ ಕಾರ್ಮಿಕರಿಗೆ ಮಾಹಿತಿ ಒದಗಿಸಿದರು.
ಇದೆ ವೇಳೆ ವಿವಿಧ ಕ್ಷೇತ್ರಗಳ 260 ಕಾರ್ಮಿಕರಿಗೆ ಸುರಕ್ಷಿತ ಕಿಟ್ ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಆಲೂರು ಹಿರಿಯ ಕಾರ್ಮಿಕ ನಿರೀಕ್ಷಕ ಆನಂದ್ ರಾಮ್, ಡಿ.ದೇವರಾಜ್ ಅರಸು ನಿಗಮ ಜಿಲ್ಲಾ ವ್ಯವಸ್ಥಾಪಕ ಟಿ.ರಾಕೇಶ್, .ದೇವರಾಜ್ ಅರಸು ನಿಗಮ ಸಹಾಯಕ ಅಭಿವೃದ್ಧಿ ಅಧಿಕಾರಿ ಎಂ. ಇ ಶೋಭಾ ಮುಖಂಡರಾದ ಕೃಷ್ಣಮೂರ್ತಿ, ವೆಂಕಟೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


















