ಉಡುಪಿ ಜಿಲ್ಲಾ ಯುವ ಉತ್ಸವ 2023 : ಸಚಿವೆ ಶೋಭಾ ಕರಂದ್ಲಾಜೆ ಭಾಗಿ
ಉಡುಪಿ : ನೆಹರು ಯುವ ಕೇಂದ್ರ ಉಡುಪಿ ಇದರ ಆಶ್ರಯದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಪೂರ್ಣಪ್ರಜ್ಞ ಕಾಲೇಜಿನ ಆಡಿಟೋರಿಯಂನಲ್ಲಿ ಜಿಲ್ಲಾ ಯುವ ಉತ್ಸವ ಕಾರ್ಯಕ್ರಮವನ್ನು ಜೂನ್ 14 ರಂದು ಜರುಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಕೃಷಿ ಮತ್ತು ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು, ಯುವ ಜನತೆ ತಾವು ಬೆಳೆಯುವುದರ ಜೊತೆಗೆ ದೇಶದ ಬೆಳವಣಿಗೆಯ ಸಂಕಲ್ಪ ಮಾಡಬೇಕು. ಮೊದಲು ಭಾರತ ದೇಶವನ್ನು ಭೀಕ್ಷುಕರ ದೇಶ, ಬಡವರ ದೇಶ, ಹಾವಾಡಿಗಾರ ದೇಶವೆಂದು ವಿದೇಶಿಗರು ಕರೆಯುತ್ತಿದ್ದರು. ವಿದೇಶಗಳಲ್ಲಿ ನಮ್ಮ ದೇಶದ ಪ್ರಧಾನಿಗಳಿಗೆ ಗೌರವ ಸಿಗುತ್ತಿರಲಿಲ್ಲ. ಅಂತಹ ಭಾರತವನ್ನು 9 ವರ್ಷಗಳಲ್ಲಿ ಇಡೀ ಜಗತ್ತಿನಲ್ಲಿ ಗೌರಯುತ ಸ್ಥಾನಕ್ಕೆ ತಂದು ನಿಲ್ಲಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.

ಉಡುಪಿ ವಿಧಾನಸಭಾ ಶಾಸಕ ಯಶ್ ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಜ್ಜರಕಾಡು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ, ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ಜಿಲ್ಲಾ ಯುವ ಅಧಿಕಾರಿ ಯಶವಂತ್ ಉಪಸ್ಥಿತರಿದ್ದರು.

















