ಉಳ್ಳಾಲ: ರೋಹಿಣಿ ಸಾಲಿಯಾನ್ ರಚಿತ ದಿವ್ಯಾಂಗನೆ ಕವನ ಸಂಕಲನ ಬಿಡುಗಡೆ
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಸಲಹಾ ಸಮಿತಿಯ ಹಿರಿಯ ಸದಸ್ಯೆ, ಮುಂಬಯಿಯ ಹೈಕೋರ್ಟ್ ನ್ಯಾಯವಾದಿ ರೋಹಿಣಿ ಜೆ.ಸಾಲಿಯಾನ್ ರಚಿತ ದಿವ್ಯಾಂಗನೆ ಕವನ ಸಂಕಲನವನ್ನು ಬಿಡುಗಡೆ ಹಾಗೂ ಕೃತಿಯ ಅರ್ಪಣೆ ಕಾರ್ಯಕ್ರಮ ಮಂಗಳೂರಿನ ಹೊಯಿಗೆಬೈಲ್ ರತ್ನಾ ನಿವಾಸದಲ್ಲಿ ನಡೆಯಿತು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಸಲಹಾ ಸಮಿತಿ ಸದಸ್ಯ ನ್ಯಾಯವಾದಿ ಬಿ.ಮೋಹಿದ್ಧೀನ್ ಮುಂಡ್ಕೂರು ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿ, ಧ್ಯೇಯೋದ್ದೇಶಗಳು ಚೆನ್ನಾಗಿದ್ದರೆ ಸಂಘಸಂಸ್ಥೆಗಳು ಶಾಶ್ವತವಾಗಿ ಉಳಿಯುತ್ತವೆ. ಸಂಸ್ಥೆಯ ಸ್ಥಿರತೆಗೆ ತಾಳ್ಮೆಯೇ ಪ್ರಧಾನವಾದುದು. ಕಪಸಮ ಶತಾಯುಷ್ಯವಾಗಿ ಬೆಳೆಯಲಿ ಎಂದು ಹಾರೈಸುವೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ನ್ಯಾಯವಾದಿ ರೋಹಿಣಿ ಸಾಲಿಯಾನ್ ಮಾತನಾಡಿ ಒಳನಾಡು ಬಿಟ್ಟು ಹೊರನಾಡಲ್ಲಿ ಬೀಡು ಬಿಟ್ಟ ಮುಂಬಯಿ ಕನ್ನಡಿಗರ ಕನ್ನಡಾರಾಧನೆ ಸ್ತುತ್ಯಾರ್ಹ. ಬಹಳಷ್ಟು ಜನ ಬದುಕಿನೊಂದಿಗೆ ಕನ್ನಡದ ಅಭಿಮಾನ ತೋರಿಸಿ ಕನ್ನಡಾಂಭೆಯ ಆರಾಧನೆಗೈದ ಕಾರಣ ಇಲ್ಲಿನ ಕನ್ನಡ ಪತ್ರಿಕಾರಂಗ ಗಟ್ಟಿಯಾಗಿ ನೆಲೆನಿಂತಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮಾತನಾಡಿ ಕಪಸಮ ಸಂಸ್ಥೆಯ ಪಾಲಿಗೆ ಇದೊಂದು ಸುದಿನ. ನ್ಯಾ| ಸಾಲಿಯಾನ್ ಅವರು ಸಂಘಕ್ಕೆ ಶಕ್ತಿ ತುಂಬಿ ತಿದ್ದಿತೀಡಿ ಸಲಹಿದ ಕಾರಣ ಸಂಘವು ಬಲಿಷ್ಠವಾಗಿ ನಿಂತಿದೆ. ಧೀಮಂತ ವ್ಯಕ್ತಿತ್ವದ ಸಾಲಿಯಾನ್ರ ಕವನಗಳನ್ನು ಸಂಘವು ಪ್ರಕಾಶಿಸಿದ್ದು ಇದು ಸಂಘದ ಹಿರಿಮೆಯಾಗಿದೆ ಎಂದರು.
ಪತ್ರಕರ್ತರ ಸಂಘದ ಗೌ| ಪ್ರ| ಕಾರ್ಯದರ್ಶಿ ದಯಾನಂದ್, ಉದ್ಯಮಿ ಸುರೇಶ್ ಕೋಟ್ಯಾನ್, ಮಮತಾ ಕೋಟ್ಯಾನ್, ಸದಸ್ಯ ಅರೀಫ್ ಕಲ್ಕಟ್ಟ ಉಪಸ್ಥಿತರಿದ್ದರು.


















