ಆತೂರು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಅಚ್ಚರಿ : ಗಾಳಿಯ ವಿರುದ್ಧ ದಿಕ್ಕಿನಲ್ಲಿ ಸಾಗಿದ ಗಂಧದ ಕಡ್ಡಿಯ ಹೊಗೆ

ಕಡಬ: ಗಾಳಿ ಇರುವ ದಿಕ್ಕಿನಲ್ಲಿಯೇ ಹೊಗೆ ಸಾಗುವುದು ಸಾಮಾನ್ಯ. ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ್ದ ಗಂಧದ ಕಡ್ಡಿಯ ಹೊಗೆಯು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ಈ ಮೂಲಕ ನೆರೆದಿದ್ದ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಈ ಘಟನೆ ನಡೆಸಿದೆ. ವಿಶೇಷ ಪೂಜೆಯ ಸಂದರ್ಭದಲ್ಲಿ ದೇವರಿಗಾಗಿ ಹಚ್ಚಿದ ಗಂಧದ ಕಡ್ಡಿಯಿಂದ ಹೊರಹೊಮ್ಮಿದ ಹೊಗೆ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ಇದನ್ನು ಗಮನಿಸಿದ ಭಕ್ತರು ಹಾಗೂ ದೇವಸ್ಥಾನ ಅರ್ಚಕರು ಅಚ್ಚರಿಗೊಂಡಿದ್ದಾರೆ.
ದೇವರ ವಿಗ್ರಹವಿರುವ ಗರ್ಭಗುಡಿಯ ಮೂರು ಪಾರ್ಶ್ವದಲ್ಲೂ ಗೋಡೆಯಿದ್ದು, ಗೋಡೆಯಲ್ಲಿ ಯಾವುದೇ ರೀತಿಯ ಗಾಳಿ ಹರಿದಾಡುವ ವ್ಯವಸ್ಥೆ ಇಲ್ಲ. ಕೇವಲ ಬಾಗಿಲಿನ ಮೂಲಕವೇ ಗಾಳಿ ಗರ್ಭಗುಡಿಯ ಒಳಗಡೆ ಪ್ರವೇಶಿಸಲು ಅವಕಾಶವಿದೆ. ಈ ಕಾರಣಕ್ಕಾಗಿ ದೇವರ ಬಾಗಿಲ ಬಳಿ ಹಚ್ಚಿದ ಗಂಧದ ಕಡ್ಡಿಯ ಹೊಗೆ ಗಾಳಿಯ ಮೂಲಕ ಗರ್ಭಗುಡಿಯ ಒಳಗೆ ಹೋಗಬೇಕಾಗಿತ್ತು. ಆದರೆ, ಇಲ್ಲಿ ಹಚ್ಚಿದ ಕಡ್ಡಿಯ ಹೊಗೆ ಮಾತ್ರ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿತ್ತು.
ಮಳೆಗಾಗಿ ನಡೆದಿದ್ದ ವಿಶೇಷ ಪೂಜೆಯಲ್ಲಿ ಈ ಅಚ್ಚರಿ
ಕಳೆದ ಕೆಲವು ವರ್ಷಗಳಿಂದ ಏಪ್ರಿಲ್ ಬಂತೆಂದರೆ ಕಾಣದ ಉರಿ ಬಿಸಿಲಿನ ದಗೆ ದಗದಗಿಸುತ್ತಿದೆ. ಮಳೆಯಿಲ್ಲದೆ ಬಿಸಿನ ತಾಪಕ್ಕ ಜನ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಜನ ದೇವರ ಮೊರೆ ಹೋಗುತ್ತಿದ್ದಾರೆ. ಬಿಸಿಯಿಂದ ನೀರಿನ ಮೂಲಗಳೆಲ್ಲಾ ಬತ್ತಿ ಹೋಗಿದೆ. ಕೃಷಿಕರಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಲು ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಸಮಸ್ಯೆ ನೀಗಿಸಿ ವರುಣ ದೇವರ ಕೃಪೆಗೆ ಜನ ಮೊರೆ ಹೋಗುತ್ತಿದ್ದಾರೆ. ಅಲ್ಲಲ್ಲಿ ದೇವರಿಗೆ ಸಿಯಾಳಾಭಿಷೇಕ ನಡೆಯುತ್ತಿದೆ. ಇದೇ ರೀತಿ ವರುಣ ದೇವರ ಕೃಪೆಗಾಗಿ ಕೊಯಿಲ ಗ್ರಾಮದ ಆಸ್ತಿಕ ಬಾಂಧವರು ಶನಿವಾರ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ದೇವರಿಗೆ ಸೀಯಾಳಾಭಿಷೇಕ ಮತ್ತು ವಿಶೇಷ ಪೂಜೆಯನ್ನು ನೆರವೇರಿಸಿದ್ದರು.
ಮಳೆ ಸೇರಿದಂತೆ ಎದುರಾಗಿರುವ ಬರದ ಕುರಿತು ದೇವರಗೆ ಗಂಧದ ಕಡ್ಡಿಯನ್ನೂ ಹಚ್ಚಲಾಗಿತ್ತು. ಇದೇ ಗಂಧದ ಕಡ್ಡಿ ಇದೀಗ ಭಕ್ತರ ಪಾಲಿಗೆ ದೇವರ ಅಭಯ ಎನ್ನುವ ನಂಬಿಕೆಯನ್ನು ಭರಿಸುವಂತೆ ಮಾಡಿದೆ ಎನ್ನುತ್ತಾರೆ ಸ್ಥಳೀಯ ಅರ್ಚಕರು. ಇತ್ತ ಭಕ್ತರು ಕೂಡಾ ಇದು ದೇವರ ಇಚ್ಛೆ ಮತ್ತು ದೇವರ ಅಭಯ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.