ಸುಳ್ಯ ಶಾಸಕರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ
ಫೇಸ್‌ಬುಕ್ ಪೋಸ್ಟ್‌ಗೆ ಬಿಜೆಪಿ ತೀವ್ರ ಆಕ್ರೋಶ – ಮಂಡಲ ಬಿಜೆಪಿ ಖಂಡನೆ, ಉಗ್ರ ಪ್ರತಿಭಟನೆ ಎಚ್ಚರಿಕೆ
ಸುಳ್ಯ : ಸುಳ್ಯದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀರಾ ಅವಮಾನಕರ ಹಾಗೂ ಅಸಹ್ಯಕರ ಪೋಸ್ಟ್ ಹಾಕಿರುವ ಪ್ರಕರಣವನ್ನು ಸುಳ್ಯ ಮಂಡಲ ಬಿಜೆಪಿ ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದೆ. ಬಿಲ್ಲವ ಸಂದೇಶ್ ಎನ್ನುವ ಫೇಸ್‌ಬುಕ್ ಖಾತೆಯಲ್ಲಿ ಶಾಸಕರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ರೀತಿಯಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿರುವುದು ಸಮಾಜದ ಶಾಂತಿ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆ ತರುವಂತದ್ದು ಎಂದು ಬಿಜೆಪಿ ಆರೋಪಿಸಿದೆ.
ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಅತ್ಯಂತ ಕಡುಬಡ ಕುಟುಂಬದಿಂದ ಬಂದವರಾಗಿದ್ದು, ತಮ್ಮ ಸಂಘಟನಾ ಶಕ್ತಿ ಹಾಗೂ ಕ್ರಿಯಾಶೀಲತೆಯಿಂದ ತಾಲೂಕು ಪಂಚಾಯತ್ ಸದಸ್ಯೆ, ಜಿಲ್ಲಾ ಪಂಚಾಯತ್ ಸದಸ್ಯೆ ಆಗಿ ಜನಸೇವೆ ಸಲ್ಲಿಸಿ ಇಂದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶಾಸಕರಾಗಿ ಆಯ್ಕೆಯಾದ ದಿನದಿಂದಲೇ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದು, ವಿರೋಧ ಪಕ್ಷದ ಶಾಸಕರಾಗಿದ್ದರೂ ಸಚಿವರನ್ನು ಭೇಟಿಯಾಗಿ, ಮನವಿ ಸಲ್ಲಿಸಿ, ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ದಲಿತ ಸಮುದಾಯದ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿರುವ ಅವರು, ಸುಳ್ಯದ ಅಂಬೇಡ್ಕರ್ ಭವನ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೂಡ ನಿರಂತರ ಪ್ರಯತ್ನ ನಡೆಸುತ್ತಿರುವುದನ್ನು ಮಂಡಲ ಬಿಜೆಪಿ ಸ್ಮರಿಸಿದೆ. ಇಂತಹ ಜನಪರ ಕಾರ್ಯಗಳಲ್ಲಿ ತೊಡಗಿರುವ ದಲಿತ ಮಹಿಳಾ ಶಾಸಕರನ್ನು ವೈಯಕ್ತಿಕ ದ್ವೇಷದಿಂದ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸುವುದು ಹೀನ ಹಾಗೂ ರೋಗಗ್ರಸ್ತ ಮನಸ್ಥಿತಿಯ ಪ್ರತಿಫಲನವಷ್ಟೇ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಪ್ರಕರಣದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಸುಮೋಟೋ ಪ್ರಕರಣ ದಾಖಲಿಸಿ, ಸಂಬಂಧಿಸಿದ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಮಂಡಲ ಬಿಜೆಪಿ ಆಗ್ರಹಿಸಿದೆ.
ಈ ರೀತಿಯ ಸಮಾಜವಿರೋಧಿ ಕೃತ್ಯಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.


















