ಮಾ. 1 ರಿಂದ 3 ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವಾರ್ಷಿಕ ವರ್ಧಂತಿ ಪ್ರಯುಕ್ತ ಮಾತೃ ವೈಭವ
ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವಾರ್ಷಿಕ ವರ್ಧಂತಿಯ ಪ್ರಯುಕ್ತ ಮಾರ್ಚ್ 1 ರಿಂದ 3 ರ ವರೆಗೆ ಕಾಪುವಿನ ಅಮ್ಮನ ಸನ್ನಿದಾನದಲ್ಲಿ ಭಕ್ತರ ಸಹಕಾರದೊಂದಿಗೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ” ಮಾತೃ ವೈಭವ ” ವನ್ನು ವಿಜೃಂಭಣೆಯಿಂದ ಆಚರಿಸಲು ಭಾನುವಾರ ಶ್ರೀಮಾತಾ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಪ್ರಸ್ತಾವನೆಗೈದರು, ದೇಶ ವಿದೇಶಗಳಲ್ಲಿ ನೆಲೆಸಿರುವ ಭಕ್ತರು ಮತ್ತು ಕಾಪುವಿನ ಅಮ್ಮನ ಮಕ್ಕಳೆಲ್ಲರ ಸಹಕಾರದೊಂದಿಗೆ ಕಾಪು ಮಾರಿಯಮ್ಮನ ದೇವಸ್ಥಾನದ ಜೀರ್ಣೋದ್ಧಾರ, ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವೈಭವದಿಂದ ಸಂಪನ್ನಗೊಂಡಿದೆ. ಪ್ರತೀ ವರ್ಷ ಮಾರ್ಚ್ 1, 2, 3 ರಂದು ಪ್ರತಿಷ್ಠಾ ವರ್ಧಂತಿಯನ್ನು
ವಿಜ್ರಂಭಣೆಯಿಂದ ಆಚರಿಸಲು ಎಲ್ಲರೂ ಒಗ್ಗೂಡಿಕೊಂಡು ಮಾತೃ ವೈಭವ ಉತ್ಸವ ಸಮಿತಿಯನ್ನು ರಚಿಸಿ, ವಾರ್ಷಿಕ ಉತ್ಸವವನ್ನು ಆಚರಿಸುವಂತಾಗಬೇಕು ಎನ್ನುವುದು ನಮ್ಮ ಅಭಿಲಾಷೆಯಾಗಿದೆ. ಎಲ್ಲರ ಸಹಕಾರವಿರಲಿ ಎಂದರು.
ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯ ನಡೆದು ಬಂದಿದೆ. ದೇಶ ವಿದೇಶಗಳಲ್ಲಿಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ರಾಜ್ಯ, ಕೇಂದ್ರ ಸರಕಾರಗಳ ಪ್ರತಿನಿಧಿಗಳು, ಎಲ್ಲಾ ರಾಜಕಾರಣಿಗಳೂ ಮಾರಿಗುಡಿಯ ಬಗ್ಗೆ ಧನಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಪ್ರತಿಷ್ಠಾ ವರ್ಧಂತಿಯನ್ನು ವಿಶೇಷವಾಗಿ ಕಾಪುವಿಗೆ ಪ್ರಸಿದ್ಧಿ ತರುವ ಉತ್ಸವವನ್ನಾಗಿ ಆಚರಿಸೋಣ. ಈ ಉತ್ಸವ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೇ ಮಾದರಿಯಾಗಿ ಆಯೋಜನೆಗೊಳ್ಳಬೇಕಿದೆ ಎಂದರು.
ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರವು ಎಲ್ಲರ ಸಹಕಾರದೊಂದಿಗೆ ತಪಸ್ಸಿನ ರೀತಿಯಲ್ಲಿ ಸಂಪನ್ನಗೊಂಡಿದೆ. ಅದರ ವಾರ್ಷಿಕ ವರ್ಧಂತಿಯನ್ನು ವಿಶೇಷ ರೀತಿಯಲ್ಲಿ ಆಚರಿಸುವ ಸಮಿತಿಯ ಉದ್ದೇಶ ಸ್ವಾಗತಾರ್ಹವಾಗಿದೆ. ಭಕ್ತರ ಸಹಕಾರದೊಂದಿಗೆ ವಿಜ್ರಂಭಣೆಯಿಂದ ಆಯೋಜನೆಗೊಳ್ಳುವಂತಾಗಲಿ ಎಂದು ಹಾರೈಸಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಲಾಲಾಜಿ ಆರ್. ಮೆಂಡನ್, ಅನಿಲ್ ಬಲ್ಲಾಳ್ ಕಾಪು ಬೀಡು, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಎಸ್. ಶೆಟ್ಟಿ, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕ್ರಂ ಕಾಪು, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ ಸಾಲ್ಯಾನ್, ಮನೋಹರ ರಾವ್ ಕಲ್ಯ, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತಾ ದೇವಾಡಿಗ ಹಾಗೂ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್ ಸ್ವಾಗತಿಸಿದರು. ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.


















