ಕಾಸರಗೋಡು ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡ್ಯಾನ್
ಕಾಸರಗೋಡು: ವಿಧಾನಸಭಾ ಪೂರ್ವಭಾವಿಯಿಗಿ ಕಾಸರಗೋಡು ಜಿಲ್ಲಾಧಿಕಾರಿ ಇಂಬುಶೇಖರ್ ಕೆ. ಅವರನ್ನು ವರ್ಗಾಯಿಸಲಾಗಿದ್ದು, ನೂತನ ಜಿಲ್ಲಾಧಿಕಾರಿಯಿಗಿ ತ್ರಿಶೂರು ಜಿಲ್ಲಾಧಿಕಾರಿಯಾಗಿದ್ದ ಅರ್ಜುನ್ ಪಾಂಡ್ಯನ್ ಅವರನ್ನು ಕಾಸರಗೋಡಿಗೆ ನೇಮಿಸಿ ಆದೇಶವಾಗಿದೆ
ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಅರ್ಜುನ್ ಪಾಂಡ್ಯನ್ ಅವರ ಜೀವನಗಾಥೆ ಯುವ ಪೀಳಿಗೆಗೆ ದೊಡ್ಡ ಪ್ರೇರಣೆ. ಇಡುಕ್ಕಿಯ ಸಾಧಾರಣ ಕೃಷಿಕ ಮತ್ತು ಅಂಗನವಾಡಿ ಶಿಕ್ಷಕಿಯ ಮಗನಾದ ಇವರು, ಬಾಲ್ಯದಲ್ಲಿ ಚಹಾ ಎಲೆಯ ಚೀಲ ಹೊತ್ತು, ಟ್ಯಾಕ್ಸಿ ಚಾಲಕರಾಗಿ ದುಡಿದು ಬಡತನದ ವಿರುದ್ಧ ಹೋರಾಡಿದವರು.
ಬಿ.ಟೆಕ್ ನಂತರ ಐಟಿ ಉದ್ಯೋಗ ಸಿಕ್ಕರೂ, ಸಿವಿಲ್ ಸರ್ವೀಸ್ ಕನಸು ಹೊತ್ತು ಆ ಕೆಲಸ ತೊರೆದರು. ಮೊದಲ ಯತ್ನದಲ್ಲಿ ವಿಫಲರಾದರೂ ಧೃತಿಗೆಡದೆ, ತನ್ನ ತಪ್ಪುಗಳನ್ನು ತಿದ್ದಿಕೊಂಡು ಎರಡನೇ ಯತ್ನದಲ್ಲಿ ಐಎಎಸ್ ಸಾಧಿಸಿದರು.
“ಸುತ್ತಲಿರುವವರು ಅಸಾಧ್ಯ ಎಂದರೂ, ಛಲ ಬಿಡದೆ ಪ್ರಯತ್ನಿಸಿದರೆ ಗೆಲುವು ಖಚಿತ” ಎನ್ನುವುದು ಇವರ ಯಶಸ್ಸಿನ ಮಂತ್ರ.
ಕೇವಲ ಅಧಿಕಾರಿಯಾಗಿ ಮಾತ್ರವಲ್ಲದೆ, ವಿಜ್ಞಾನ ಕೃತಿಗಳ ಸಂಗ್ರಾಹಕ ಮತ್ತು ಓದುಗರಾಗಿರುವ ಇವರು, ತ್ರಿಶೂರಿನಲ್ಲಿ ಸೇವೆ ಸಲ್ಲಿಸಿ ಈಗ ಕಾಸರಗೋಡಿಗೆ ಆಗಮಿಸುತ್ತಿದ್ದಾರೆ. ಕಠಿಣ ಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನವಿದ್ದರೆ ಬಡತನವು ಸಾಧನೆಗೆ ಅಡ್ಡಿಯಾಗದು ಎಂಬುದಕ್ಕೆ ಅರ್ಜುನ್ ಪಾಂಡ್ಯನ್ ಅವರೇ ಸಾಕ್ಷಿ.


















