ಸಾಮರಸ್ಯಕ್ಕೆ ಅಡ್ಡಿಪಡಿಸುವ ಸಾಮಾಜಿಕ ಜಾಲತಾಣ ಪೋಸ್ಟ್:ಓರ್ವ ಆರೋಪಿಯ ಬಂಧನ

ಈ ಬಾರಿಯ ಶಿರೂರು ಮಠದ ಪರ್ಯಾಯ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಅರ್ಪಿಸುವ ಸಂಬಂಧ ರಚಿಸಲಾದ ಉಡುಪಿ ಜಿಲ್ಲಾ ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಆಕ್ಷೇಪಾರ್ಹ ಬರಹಗಳನ್ನು ಬೆರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ತಾಲೂಕಿನ ನಿಟ್ಟೆ ಅಂಬಡೆಕಲ್ಲು ನಿವಾಸಿ ಸುಧಾಕರ(37) ಬಂಧಿತ ಆರೋಪಿ. ಈತನನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೊಂದು ಪ್ರಕರಣದ ಆರೋಪಿ ನಿಟ್ಟೆಯ ಸುದೀಪ್ ಶೆಟ್ಟಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಸುದೀಪ್ ಶೆಟ್ಟಿ ಹಾಗೂ ಸುಧಾಕರ್ ಜಾತಿ, ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಪೋಸ್ಟ್ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 196(1), 353(2), 352 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.

Related Posts

Leave a Reply

Your email address will not be published.