ಬಂಟ್ವಾಳ: ಅಪಘಾತದಲ್ಲಿ ಅಯ್ಯಪ್ಪ ವೃತಧಾರಿ ಬಾಲಕ ಮೃತ್ಯು
ಬಂಟ್ವಾಳ: ಶಬರಿಮಲೆ ಯಾತ್ರೆ ಕೈಗೊಂಡು ದೇವರ ದರ್ಶನ ಮುಗಿಸಿ ವಾಪಸು ಮನೆಗೆ ಬರುವ ವೇಳೆ ಲಾರಿ ಡಿಕ್ಕಿಯಾಗಿ ಬಂಟ್ವಾಳದ ಅಯ್ಯಪ್ಪ ವೃತಧಾರಿ ಬಾಲಕನೋರ್ವ ಮೃತಪಟ್ಟ ಘಟನೆ ಕೇರಳ ರಾಜ್ಯದ ಕ್ಯಾಲಿಕಟ್ ಸಮೀಪದ ಕೋಟೆಕಲ್ ಎಂಬಲ್ಲಿ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ.ಕುರಿಯಾಳ ಗ್ರಾಮದ ದುರ್ಗಾನಗರ ಸಮೀಪದ ಕೊಪ್ಪಳ ನಿವಾಸಿ ಅಶೋಕ್ ಪೂಜಾರಿ ಅವರ ಪುತ್ರ ಲಕ್ಷ್ಮೀಶ ಪೂಜಾರಿ(15) ಅಪಘಾತದಲ್ಲಿ ಮೃತಪಟ್ಟ ಬಾಲಕ.
ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿಗಳಾದ ಅಶೋಕ್ ಪೂಜಾರಿ, ಸಂತೋಷ್ ಪೂಜಾರಿ, ಸಚಿನ್, ಗೋಪಾಲಪೂಜಾರಿ, ಲಕ್ಷ್ಮೀಶ ಪೂಜಾರಿ, ಕಿರಣ್, ವರದ್ ರಾಜ್ ಇನ್ನೋವಾ ಕಾರಿನಲ್ಲಿ ಕುರಿಯಾಳದಿಂದ ಕಳೆದ ಶಬರಿಮಲೆಗೆ ತೆರಳಿದ್ದರು. ಸಿದ್ದಕಟ್ಟೆ ಶಾಲೆಯ ೯ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಲಕ್ಷ್ಮೀಶ ಆತನ ತಂದೆ ಅಶೋಕ್ ಪೂಜಾರಿ ಜೊತೆ ತೆರಳಿದ್ದು, ದೇವರ ದರ್ಶನ ಮುಗಿಸಿ ವಾಪಸು ಜ.೯ ರಂದು ಬರುತ್ತಿದ್ದ ವೇಳೆ ಕೊಟೆಕಲ್ ಎಂಬಲ್ಲಿ ಇವರ ಕಾರು ಕೆಟ್ಟುಹೋಗಿದೆ ಎಂಬ ಕಾರಣಕ್ಕಾಗಿ ಅಶೋಕ್ ಪೂಜಾರಿ ಒಬ್ಬರು ಕಾರಿನೊಳಗೆ ಕುಳಿತು ಕೊಂಡು ಉಳಿದಂತೆ ಚಾಲಕ ಸೇರಿ ಏಳು ಮಂದಿ ಕೂಡ ಕಾರಿನ ಎದುರು ಬೊನೆಟ್ ಓಪನ್ ಮಾಡಿ ಕಾರು ರಿಪೇರಿಯಲ್ಲಿ ತೊಡಗಿದ್ದರು. ಸುಮಾರು ೨ ಗಂಟೆ ವೇಳೆಗೆ ಲಾರಿಯೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿ ರಿಪೇರಿ ಮಾಡುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದಲ್ಲಿ ನಿಂತಿದ್ದ ಎಲ್ಲರೂ ರಸ್ತೆಗೆ ಎಸೆಯಲ್ಪಟ್ಟಿದ್ದು ಅದೇ ಲಾರಿಯ ಅಡಿಗೆ ಬಾಲಕ ಲಕ್ಷ್ಮೀಶ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ವರದರಾಜ್ ಎಂಬವರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರು ಸಣ್ಣಪುಟ್ಟ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


















