ತಳ್ಳುಗಾಡಿ ತೆರವುಗೊಳಿಸಿದ ಪಂಚಾಯತ್ ಆಡಳಿತ : ಅಧಿಕ ರಕ್ತದೊತ್ತಡದಿಂದ ಕುಸಿದು ಬಿದ್ದ ವ್ಯಾಪಾರಸ್ಥ

ಬಂಟ್ವಾಳ: ಮಂಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಕ್ಕಾಜೆಯಲ್ಲಿ ಸಂಜೆ ವೇಳೆ ತಳ್ಳುಗಾಡಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ರಾಮಕೃಷ್ಣ ಕಾಮತ್ ಎಂಬವರ ತಳ್ಳುಗಾಡಿಯನ್ನು ಪಂಚಾಯತಿ ಆಡಳಿತ ತೆರವುಗೊಳಿಸಿದ ಘಟನೆ ನಡೆದಿದ್ದು ಈ ಬಗ್ಗೆ ಪಂಚಾಯತಿಗೆ ದಂಡ ಪಾವತಿಸಿ ಗಾಡಿ ಬಿಡಿಸಿಕೊಂಡು ಬರಲು ಹೋಗಿ ವಾಪಸ್ಸು ಬರುತ್ತಿದ್ದ ವೇಳೆ ರಾಮಕೃಷ್ಣ ಕಾಮತ್ ಅವರು ಅಧಿಕ ರಕ್ತದೊತ್ತಡಕ್ಕೆ ಒಳಗಾಗಿ ಕುಸಿದು ಬಿದ್ದು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ರಾಮಕೃಷ್ಣ ಕಾಮತ್ ಅವರು ಕಳೆದ ಕೆಲ ವರ್ಷಗಳಿಂದ ಕುಕ್ಕಾಜೆ ಪೇಟೆಯಲ್ಲಿ ಸಂಜೆಯ ವೇಳೆ ತಳ್ಳುಗಾಡಿ ಇಟ್ಟು ಕ್ಯಾಂಟೀನ್ ನಡೆಸಿಕೊಂಡು ಬರುತ್ತಿದ್ದಾರೆ. ಮಂಚಿ ಗ್ರಾಮಪಂಚಾಯತಿ ಇವರ ಕ್ಯಾಂಟೀನನ್ನು ತೆರವುಗೊಳಿಸಿ ಪಂಚಾಯತಿ ಕಚೇರಿ ಮುಂದೆ ತಂದಿರಿಸಿದೆ. ಈ ಬಗ್ಗೆ ಪಂಚಾಯತಿ ಕಚೇರಿಯಲ್ಲಿ ದಂಡ ಪಾವತಿಸಿ ಗಾಡಿ ಬಿಡಿಸಿಕೊಂಡು ಬರಲು ತನ್ನ ಸಂಬಂಧಿಯೊಂದಿಗೆ ಹೋಗಿದ್ದ ವೇಳೆ ಅಧ್ಯಕ್ಷರ ಜೊತೆ ಮಾತನಾಡುವಂತೆ ಅಧಿಕಾರಿ ಸೂಚಿಸಿದ್ದು ಪಂಚಾಯತಿ ಅಧ್ಯಕ್ಷರು ಹಾಗೂ ರಾಮಕೃಷ್ಣ ಕಾಮತ್ ಅವರು ಸ್ವಜಾತಿ ಹಾಗೂ ಸ್ವಪಕ್ಷೀಯವರಾಗಿದ್ದರೂ ಕೂಡ ಅನಾವಶ್ಯಕವಾಗಿ ಕ್ಯಾಂಟೀನ್ ನಡೆಸಲು ತೊಂದರೆ ನೀಡುತ್ತಿದ್ದುದರಿಂದ ಅವರ ಬಳಿ ಹೋಗುವುದಿಲ್ಲ ಎಂದು ವಾಪಸ್ಸು ಮಂಚಿಗೆ ಬರುತ್ತಿದ್ದ ವೇಳೆ ರಕ್ತದೊತ್ತಡ ಹೆಚ್ಚಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ತಕ್ಷಣ ಅವರನ್ನು ಮಂಗಳೂರಿನ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಮಂಚಿ ಪಂಚಾಯತಿ ಆಡಳಿತದ ವಿರುದ್ದ ಟೀಕೆಗಳು ಕೇಳಿ ಬಂದಿದ್ದು ರಾಮಕೃಷ್ಣ ಕಾಮತ್ ಅವರ ಈ ಪರಿಸ್ಥಿತಿಗೆ ಪಂಚಾಯತಿ ಆಡಳಿತ ಕಾರಣ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ
