ಬಂಟ್ವಾಳ|| ಪಾಳುಬಿದ್ದಿರುವ ಹಳೆಯ ತಾಲೂಕು ಕಚೇರಿ: ನಿರ್ವಹಣೆಯಿಲ್ಲದ ಕಟ್ಟಡದ ಸುತ್ತಮುತ್ತ ಪೊದೆಗಳ ರಾಶಿ
ಬಂಟ್ವಾಳ: ಬಿ.ಸಿ.ರೋಡಿನ ಸಿವಿಲ್ ನ್ಯಾಯಾಲಯದ ಬಳಿ ತಾಲೂಕು ಕಚೇರಿ ಎನ್ನುವ ಕಟ್ಟಡವೊಂದಿದೆ. ಯಾರಾದರೂ ಸಾರ್ವಜನಿಕರು ಇದೇ ತಾಲೂಕು ಕಚೇರಿ ಎಂದು ಈ ಕಟ್ಟಡದ ಸುತ್ತ ಸುತ್ತುತ್ತಿದ್ದರೆ ದಿನವಿಡಿ ಸುತ್ತುತಲೇ ಇರಬೇಕಾಗುತ್ತದೆ. ತಾಲೂಕು ಕಚೇರಿ ಇಲ್ಲಿಂದ ಸ್ಥಳಾಂತರಗೊಂಡರೂ ಹಳೆ ಕಟ್ಟಡ ಇನ್ನೂ ಅದೇ ಹೆಸರಿನಲ್ಲಿ ಉಳಿದಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದೆ.
ಬಿ.ಸಿ.ರೋಡಿನಲ್ಲಿದ್ದ ಹಳೇ ತಾಲೂಕು ಕಚೇರಿಯನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಮಿನಿವಿಧಾನ ಸೌಧ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭ ಹಳೇ ಉಪನೋಂದಾಣಿ ಕಚೇರಿ ಬಳಿ ತಾತ್ಕಲಿಕವಾಗಿ ಕಟ್ಟಡವೊಂದನ್ನು ನಿರ್ಮಿಸಿ ತಾಲೂಕು ಕಚೇರಿಯನ್ನು ಆರಂಭಿಸಲಾಯಿತು. ಮಿನಿವಿಧಾನ ಸೌಧ ನಿರ್ಮಾಣಗೊಂಡ ಬಳಿಕ ತಾಲೂಕು ಕಚೇರಿ ಕಾರ್ಯ ಚಟುವಟಿಕೆಗಳು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡಿತು.
ತಾತ್ಕಲಿಕ ಕಟ್ಟಡ ತಾಲೂಕು ಕಚೇರಿ ಎನ್ನುವ ಹೆಸರಿನಲ್ಲಿ ಅಲ್ಲೆ ಉಳಿದಿರುವುದರಿಂದ ಈಗಲೂ ದೂರದೂರುಗಳಿಂದ ಬಿ.ಸಿ.ರೋಡಿಗೆ ಬರುವ ಕೆಲವು ಸಾರ್ವಜನಿಕರು ಬಾಗಿಲು ಮುಚ್ಚಿರುವ ಈ ಕಚೇರಿಯಲ್ಲೇ ತಾಲೂಕು ಕಚೇರಿ ಇದೇ ಎಂದು ಹುಡುಕಾಡುತ್ತಿರುತ್ತಾರೆ.
ತಾಲೂಕು ಕಚೇರಿ ಮಿನಿವಿಧಾನ ಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ಈ ಕಟ್ಟಡ ನಿಷ್ಪ್ರಯೋಜಕವಾಗಿದೆ. ಕಟ್ಟಡದೊಳಗೆ ತುಂಬಿದ ಸಿಮೆಂಟ್ ಚೀಲಗಳು, ಹಳೆ ಕಡತಗಳು, ರಟ್ಟಿನ ಪೆಟ್ಟಿಗೆಗಳು, ಕಸದ ರಾಶಿ ತುಂಬಿಕೊಂಡಿದೆ. ಕಾಗದಪತ್ರಗಳೆಲ್ಲ ಗೆದ್ದಲುಗಳಿಗೆ ಆಹಾರವಾಗಿದೆ. ಇದರೊಳಗೆ ಹಾವು, ಚೇಳು ಮೊದಲಾದ ವಿಷ ಜಂತುಗಳು ಇದ್ದರೂ ಕೂಡ ಅಚ್ಚರಿಯೇನಿಲ್ಲ. ಪ್ರಸ್ತುತ ಈ ಕಟ್ಟಡದ ಒಂದು ಪಾರ್ಶ್ವದ ಗೋಡೆಗೆ ನಿತ್ಯ ಮೂತ್ರಾಭಿಷೇಕವಾಗುತ್ತಿರುತ್ತದೆ. ಉಚಿತ ಮೂತ್ರ ವಿಸರ್ಜನೆಗಾಗಿ ಜನರು ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದು ಈ ಕಟ್ಟಡದ ಸುತ್ತ ದುರ್ವಾಸನೆ ತುಂಬಿ ಕೊಂಡಿದೆ.
ನಿರ್ವಹಣೆಯಿಲ್ಲದೆ ಈ ಕಟ್ಟಡದ ಸುತ್ತಮುತ್ತ ಪೆÇದೆಗಳು ತುಂಬಿ ಕೊಂಡಿದೆ. ತಾಲೂಕು ಕಚೇರಿ ಕಾರ್ಯಚಟುವಟಿಕೆಗಳು ಮಿನಿವಿಧಾನ ಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ಈ ಕಟ್ಟಡದ ಬಾಗಿಲುಗಳಿಗೆ ಭದ್ರವಾಗಿ ಬೀಗ ಜಡಿಯಲಾಗಿದ್ದು ಅಧಿಕಾರಿಗಳು ಮತ್ತೆ ಇತ್ತ ಸುಳಿದಿಲ್ಲ. ಕಟ್ಟಡದ ಒಳಗೆ ರಾಶಿ ರಾಶಿ ಕಾಗದಗಳು ತುಂಬಿಕೊಂಡಿದೆ. ನಗರ ಮಧ್ಯೆ ತಾತ್ಕಲಿಕವಾಗಿ ನಿರ್ಮಿಸಿರುವ ಕಟ್ಟಡ ಪಾಳುಬಿದ್ದು ವ್ಯರ್ಥವಾಗುವ ಬದಲು ಯಾವುದೇ ಇಲಾಖೆ ಅಥವಾ ಸಂಘ ಸಂಸ್ಥೆಗಳ ಬಳಕೆ ನೀಡಿದರೆ ಕಟ್ಟಡವೂ ಉಳಿಯಬಹುದು ಅದರ ಸುತ್ತಮುತ್ತ ಮೂರ್ತವಿಸರ್ಜನೆ ಮಾಡಿ ದುರ್ವಾಸನೆ ಬೀರುವ ಬದಲು ಪರಿಸರವೂ ಸ್ವಚ್ಛವಾಗಿರಬಹುದು ಎನ್ನುವುದು ನಾಗರಿಕರ ಅನಿಸಿಕೆ.