ಕಣ್ಣಿಗೆ ಕಾಣುವ ದೇವತಾ ಮನುಷ್ಯ ಬಿ.ರಮಾನಾಥ ರೈಯವರನ್ನು ಬೆಂಬಲಿಸಬೇಕು : ನ್ಯಾಯವಾದಿ ಚಂದ್ರಶೇಖರ ಪೂಜಾರಿ

ಬಂಟ್ವಾಳ: ಜಾತ್ಯಾತೀತ ಶಕ್ತಿಗಳು ಒಂದಾಗಿ ಕೋಮುವಾದಿ ಪಕ್ಷಗಳನ್ನು ಸೋಲಿಸಿಬೇಕು, ಕಣ್ಣಿಗೆ ಕಾಣುವ ದೇವತಾ ಮನುಷ್ಯ-ಅಭಿವೃದ್ಧಿಯ ಹರಿಕಾರ ಬಿ.ರಮಾನಾಥ ರೈಯವರನ್ನು ಬೆಂಬಲಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಚಂದ್ರಶೇಖರ್ ಪೂಜಾರಿ ಕರೆ ನೀಡಿದ್ದಾರೆ. ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಮುವಾದಿ ಪಕ್ಷಗಳಾದ ಬಿಜೆಪಿ ಮತ್ತು ಎಸ್.ಡಿ.ಪಿ.ಗೆ ಮತ ಹಾಕಿದರೆ ಕೋಮುಶಕ್ತಿಗಳು ವಿಜೃಂಭಿಸುತ್ತದೆ. ಮತದಾರರು ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ದೇಶದಲ್ಲಿ ಅಭಿವೃದ್ಧಿ ಮೂಲಕ ಜನಮನ್ನಣೆ ಗಳಿಸಿರುವ ಕಾಂಗ್ರೇಸ್ ಪಕ್ಷ ಮಾತ್ರ ಜನರ ಹಿತವನ್ನು ಕಾಪಾಡುತ್ತದೆ. ಸಂವಿಧಾನದ ರಕ್ಷಣೆ ಕಾಂಗ್ರೇಸ್ ಪಕ್ಷದಿಂದ ಮಾತ್ರ ಸಾಧ್ಯವಾಗುತ್ತದೆ. ಎಲ್ಲಾ ಜನರು ಪರಸ್ಪರ ಒಂದಾಗಿ ನೆಮ್ಮದಿಯಿಂದ ಬದುಕಿದರೆ ಮಾತ್ರ ದೇಶ ಉಳಿಯುತ್ತದೆ. ಆದರೆ ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದೆ. ರಾಜ್ಯದ ಪ್ರಜ್ಞಾವಂತ ಜನತೆ ಈ ಬಾರಿ ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಚಂದ್ರಶೇಖರ ಪೂಜಾರಿ ಹೇಳಿದರು.

ರಮಾನಾಥ ರೈಯವರು ಜಾತ್ಯಾತೀತ ಸಿದ್ಧಾಂತದಡಿ ಎಲ್ಲರನ್ನೂ ಸಮಾನವಾಗಿ ಕಂಡವರು. ನಿರಂತರ ಜನರೊಂದಿಗಿದ್ದು ಜನತೆಯ ಸೇವೆಯನ್ನು ಸುದೀರ್ಘ ಕಾಲದಿಂದ ಪ್ರಾಮಾಣಿಕವಾಗಿ ಮಾಡುತ್ತಾ ಬಂದವರು. ಅಭಿವೃದ್ಧಿಯಲ್ಲಿ ಬಂಟ್ವಾಳ ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸಿರುವ ರಮಾನಾಥ ರೈ ಅವರನ್ನು ಎಲ್ಲರೂ ಬೆಂಬಲಿಸುವ ಮೂಲಕ ಕೋಮುವಾದಿ ಶಕ್ತಿಗಳನ್ನು ದುರ್ಬಲಗೊಳಿಸಬೇಕು ಎಂದು ಚಂದ್ರಶೇಖರ ಪೂಜಾರಿ ಹೇಳಿದರು.

ಬಿಜೆಪಿಯೆಂದರೆ ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರಿಗಳ ಗುಂಪು. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಬಿಜೆಪಿ. ಬಿಜೆಪಿ ಆಡಳಿತದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರವೇ ವಿಜೃಂಭಿಸುತ್ತದೆ. ಇದರಿಂದಾಗಿ ಬಂಟ್ವಾಳದಲ್ಲಿ ಬಿಜೆಪಿ ಬೇಡ ಎಂಬ ನಿರ್ಧಾರಕ್ಕೆ ಮತದಾರರು ಬಂದಿದ್ದು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮಾನಾಥ ರೈ ಅವರನ್ನು ಬಹುಮತದಿಂದ ಚುನಾಯಿಸಲು ತೀರ್ಮಾನಿಸಿದ್ದಾರೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿದ್ದೇವೆ ಎಂದು ಹೇಳುವ ಬಿಜೆಪಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಟ್ಟಿ ನೀಡಲಿ, ರೈ ಅವಧಿಯಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಗಳ ಪಟ್ಟಿ ನಾವು ನೀಡಲು ಸಿದ್ಧ ಎಂದು ಸವಾಲೆಸೆದ ಪೂಜಾರಿ ಬಿಜೆಪಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಬಹುತೇಕ ಎಲ್ಲವನ್ನೂ ಅನುಷ್ಠಾನಕ್ಕೆ ತಂದಿದೆ. ಹಾಗಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಎಲ್ಲರೂ ಒಂದಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಪಕ್ಷ ಪ್ರಮುಖರಾದ ಜೊಸ್ಮಿನ್ ಡಿಸೋಜ, ರಿಯಾಜ್ ಹುಸೇನ್, ಜೆಸಿಂತಾ ಡಿ.ಸೋಜ, ನಾರಾಯಣ ನಾಯ್ಕ್, ಸದಾಶಿವ ಬಂಗೇರ, ಉಮೇಶ್ ಸಪಲ್ಯ, ಪರಮೇಶ್ವರ ಮೂಲ್ಯ, ಮಹಮ್ಮದ್ ನಂದರಬೆಟ್ಟು ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

Related Posts

Leave a Reply

Your email address will not be published.