ಬಂಟ್ವಾಳ: ಸಾರ್ವಜನಿಕ ಕುಂದು ಕೊರತೆಗಳಿಗೆ ಸ್ಪಂದಿಸುವಲ್ಲಿ ಜಿಲ್ಲಾಡಳಿತ ವಿಫಲ: ಪ್ರಭಾಕರ ಪ್ರಭು ಆರೋಪ

ಬಂಟ್ವಾಳ: ಸಾರ್ವಜನಿಕರಿಗೆ ಅತ್ಯಾವಶ್ಯಕವಾಗುವ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ತುಂಬಾ ವಿಳಂಬವಾಗುತ್ತಿದ್ದು, ಜನಸಾಮಾನ್ಯರು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಮೇಲೆ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ನೊಂದವರು ಜಿಲ್ಲಾಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಪ್ರಭಾರಕ ಪ್ರಭು ಆರೋಪಿಸಿದರು.
ಅವರು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಾರ್ವಜನಿಕರ ಕುಂದು ಕೊರತೆ ನಿವಾರಿಸುವಲ್ಲಿ ಕಂದಾಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸರಕಾರಿ ಜಮೀನು ದಾರ್ಖಾಸು ಮಂಜೂರಾತಿದಾರರು ತಮ್ಮ ಜಮೀನಿನ ಪ್ಲೋಟಿಂಗ್ ಬಗ್ಗೆ 1-5 ಅರ್ಜಿ ಸಲ್ಲಿಸಿ ಹತ್ತು ವರ್ಷಗಳಾದರೂ ಸಹ ಇನ್ನೂ ಮುಕ್ಕಿ ಸಿಕ್ಕಿಲ್ಲ. ಅಂಕಿ ಅಂಶಗಳ ಪ್ರಕಾರ ಬಂಟ್ವಾಳ ತಾಲೂಕಿನಲ್ಲಿ 2013 ರಿಂದ 2023 ರವರೆಗೆ 1-5 ಪ್ಲೋಟಿಂಗ್ ಮಾಡುವ 371 ಪ್ರಕರಣಗಳು ಬಾಕಿ ಉಳಿದು ಗೆದ್ದಲು ತಿನ್ನುತ್ತಿದೆ. 2014ರಲ್ಲಿ ಸಲ್ಲಿಸಿದ 45 ಪ್ರಕರಣಗಳು ಬಾಕಿ ಇದೆ. 2015ರಲ್ಲಿ 59 ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಬಾಕಿ ಇವೆ. ಈ ಬಾಕಿ ಪ್ರಕರಣಗಳಿಗೆ ಬಂಟ್ವಾಳ ತಾಲೂಕಿನಲ್ಲಿ ಸೇವೆ ಸಲ್ಲಿಸಿದ ತಹಶೀಲ್ದಾರರು, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಂಗಳೂರು ಸಹಾಯಕ ಆಯುಕ್ತರು ಕಾರಣ ಎಂದು ಆರೋಪಿಸಿದರು.
ಸಾರ್ವಜನಿಕರು ದೂರು ಅರ್ಜಿ ಕೊಟ್ಟ ತಕ್ಷಣವೇ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿ ತನಿಖೆಗೆ ಸಮಿತಿ ರಚಿಸಿ ತನಿಖೆ ಮಾಡುವ ಜಿಲ್ಲಾಧಿಕಾರಿಗಳು ಮಂಗಳೂರು ಸಹಾಯಕ ಆಯುಕ್ತರು 1-5 ಪ್ಲೋಟಿಂಗ್ ಪ್ರಕರಣ ವಿಲೇವಾರಿಗೆ ಯಾಕೆ ಸಮಿತಿ ರಚಿಸಿ ಕಡತ ವಿಲೇವಾರಿ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು ಕುಕ್ಕಿಪಾಡಿ ಗ್ರಾಮದ ಲೀಲಾವತಿ ನಾರಾಯಣ ಶೆಟ್ಟಿ ಎಂಬುವವರು ಪ್ಲೋಟಿಂಗ್ಗೆ (1-5)ಅರ್ಜಿ ಕೊಟ್ಟು 6 ವರ್ಷಗಳಾಗಿದ್ದೂ, ಕಂದಾಯ ಇಲಾಖೆಯ ಜನಸಂಪರ್ಕ ಸಭೆಯಲ್ಲಿಅರ್ಜಿಕೊಟ್ಟು, ಹಲವು ಬಾರಿ ತಾಲೂಕು ಕಛೇರಿ ಮಂಗಳೂರು ಕಛೇರಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕಳೆದ 10 ವರ್ಷಗಳಲ್ಲಿ ಬಂಟ್ವಾಳ ತಾಲೂಕು ಕಛೇರಿಯ ಜಮಾಭಂದಿ, ವಾರ್ಷಿಕ ತಪಾಸಣೆಯನ್ನು ಜಿಲ್ಲಾಧಿಕಾರಿಗಳು,ಸಹಾಯಕ ಆಯುಕ್ತರು ಮಾಡಿಲ್ಲ, ಜಿಲ್ಲೆಯಲ್ಲಿ ವಾರ್ಷಿಕವಾಗಿ ಮರಳು ಸಾಗಾಟ ಪರವಾನಿಗೆ ಮತ್ತು ನಿರ್ಮಾಣವಾಗುತ್ತಿರುವ ಕಟ್ಟಡಗಳ ಬಗ್ಗೆ ತುಲನೆ ಮಾಡಿ ನೋಡಿದಾಗ ಶೇ 60ರಷ್ಟು ಮರಳು ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಟವಾಗುತ್ತಿರುವುದಾಗಿದೆ. ಈ ಬಗ್ಗೆ ಜಿಲ್ಲಾಡಳಿತವು ಏನು ಕ್ರಮ ಕೈಗೊಂಡಿದೆ. ವಾರ್ಷಿಕವಾಗಿ ಎಷ್ಟು ಮರಳಿನ ಬೇಡಿಕೆಯಿದೆ. ಜಿಲ್ಲೆಯಲ್ಲಿ ಲಭ್ಯವಿರುವ ಮರಳಿನ ದಿಣ್ಣೆಗಳು ಎಷ್ಟು ಇವೆ. ಬೇಡಿಕೆಗೆ ಅನುಗುಣವಾಗಿ ಯಾವ ರೀತಿಯಲ್ಲಿ ಹೇಗೆ ಅನುಮತಿ ನೀಡಬಹುದು ಎಂಬ ಯೋಜನೆ ರೂಪಿಸಬೇಕು ಎಂದು ಪ್ರಭಾಕರ ಪ್ರಭು ಆಗ್ರಹಿಸಿದರು.

Related Posts

Leave a Reply

Your email address will not be published.