ಸಜೀಪಮುನ್ನೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಿಂದ ಅಧಿಕಾರ ದುರುಪಯೋಗ: ಕಾನೂನು ಕ್ರಮಕ್ಕೆ ಎಸ್‌ಡಿಪಿಐ ಬೆಂಬಲಿತ ಸದಸ್ಯರ ಆಗ್ರಹ
ಬಂಟ್ವಾಳ: ಸಜೀಪಮುನ್ನೂರು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಯು ಅಧಿಕಾರ ದುರುಪಯೋಗ ಪಡಿಸುತ್ತಿದ್ದು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಕರ್ತವ್ಯದಿಂದ ವಜಾಗೊಳಿಸುವಂತೆ ಸಜೀಪಮುನ್ನೂರು ಗ್ರಾ.ಪಂ.ನ ಎಸ್‌ಡಿಪಿಐ ಬೆಂಬಲಿತ ಸದಸ್ಯರು ಆಗ್ರಹಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಸ್ಥಳೀಯ ನಾಯಕ ಮುಬಾರಕ್ ಕಾರಾಜೆ ಮಾತನಾಡಿ ಎಸ್ಡಿಪಿಐ ಬೆಂಬಲಿತ ೮ ಮಂದಿ ಸದಸ್ಯರನ್ನು ಪಂಚಾಯತಿ ಕಾರ್ಯ ಚಟುವಟಿಕೆಯಲ್ಲಿ ಯಾವುದೇ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ವರ್ತಿಸುತ್ತಿರುವುದರಿಂದ ಗ್ರಾಮದ ಅಭಿವೃದ್ದಿಗೆ ತೊಡಕುಂಟಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಈಗಾಗಲೇ ಬಂಟ್ವಾಳ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ದೂರು ನೀಡಲಾಗಿದೆ. ಆದರೂ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಅ.೨೧ರಂದು ಕರೆದಿದ್ದ ಸಾಮಾನ್ಯ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಿ, ಮೊಬೈಲ್ ಸಂದೇಶದ ಮೂಲಕ ಮಾಹಿತಿಯನ್ನು ಪಂಚಾಯತಿ ಸದಸ್ಯರಿಗೆ ತಿಳಿಸಿದ್ದಾರೆ. ಆದರೆ ಅದೇ ದಿನ ಉಳಿದ ಸದಸ್ಯರನ್ನು ಸೇರಿಸಿಕೊಂಡು ಸಾಮಾನ್ಯ ಸಭೆ ನಡೆಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಇದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಮಾಡಿದ ಅನ್ಯಾಯ ಎಂದು ತಿಳಿಸಿದ ಅವರು ೮ ಮಂದಿ ಸದಸ್ಯರ ಅನುಪಸ್ಥಿತಿಯಲ್ಲಿ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ರದ್ದು ಪಡಿಸಬೇಕು ಮತ್ತು ಈ ರೀತಿ ಪಕ್ಷಪಾತ ಧೋರಣೆಯನ್ನು ತೋರ್ಪಡಿಸುತ್ತಿರುವ ಪಂಚಾಯತಿ ಅಭಿವೃದ್ದಿ ಅಧಿಕಾರಿಯನ್ನು ವಜಗೊಳಿಸಬೇಕು ತಪ್ಪಿದ್ದಲ್ಲಿ ಅ. ೩೦ ರಂದು ಸಜೀಪಮುನ್ನೂರು ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಪಂಚಾಯತಿ ಸದಸ್ಯರಾದ ಸಿದ್ದೀಕ್ ನಂದಾವರ, ಜಮಾಲ್ ನಂದಾವರ, ನೌರಿನ್ ಆಲಂಪಾಡಿ, ಫೌಝಿಯ ಆಲಂಪಾಡಿ, ವಹೀದಾ, ಸಾಜಿದ, ರಝೀಯ, ಸಬಿನ ಉಪಸ್ಥಿತರಿದ್ದರು.