ಬೆಂಗಳೂರು: ಕಂಬಳ, ಆಹ್ವಾನ ಪತ್ರಿಕೆಯಿಂದ ಬ್ರಿಜ್ ಭೂಷಣ್‍ನ್ನು ಕೈಬಿಟ್ಟ ಸಂಘಟಕರು
`ಬೆಂಗಳೂರು ಕಂಬಳ’ದಲ್ಲಿ ಭಾರತ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಶರಣ್ ಸಿಂಗ್ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಂಘಟಕರು ಅವರ ಹೆಸರನ್ನು ಆಹ್ವಾನ ಪತ್ರಿಕೆಯಿಂದ ಕೈಬಿಟ್ಟಿದ್ದಾರೆ.
ನ.25 ಮತ್ತು 26ರಂದು ಕಂಬಳ ನಡೆಯಲಿದ್ದು, 25ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕುಸ್ತಿಪಟುಗಳನ್ನು ಬ್ರಿಜ್‍ಭೂಷಣ್ ಸನ್ಮಾನಿಸಬೇಕಿತ್ತು. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಅವರ ಭಾಗವಹಿಸುವಿಕೆಗೆ ವಿವಿಧ ಸಂಘಟನೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು.
ಬ್ರಿಜ್‍ಭೂಷಣ್ ಕುಡುಬಿ ಹಾಗೂ ಸಿದ್ದಿ ಜನಾಂಗದವರಿಗೆ ಗೋವಾದಲ್ಲಿ ಕುಸ್ತಿ ತರಬೇತಿ ನೀಡಿದ್ದರು. ಸಿದ್ದಿ ಜನಾಂಗದ ಮುಖಂಡರು ಮಾಡಿದ್ದ ಮನವಿಯಂತೆ ಅವರನ್ನು ಕಂಬಳಕ್ಕೆ ಆಹ್ವಾನಿಸಲಾಗಿತ್ತು. ಎರಡು ದಿನಗಳ ಹಿಂದೆಯೇ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದರು. ಕೊನೆ ಗಳಿಗೆಯಲ್ಲಿ ಆಹ್ವಾನ ಪತ್ರಿಕೆ ಬದಲಿಸಿ ವಿವಾದಕ್ಕೆ ತೆರೆ ಎಳೆಯಲಾಗಿದೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕರೂ ಆಗಿರುವ ಅಶೋಕ್ ಕುಮಾರ್ ರೈ ಪ್ರತಿಕ್ರಿಯೆ ನೀಡಿದರು.