ಹಣವಂತರ ನಡುವಣ ಹೆಣವಂತ ಸಮುದಾಯ

ಭಾರತದಲ್ಲಿ ಅತೀ ಸಿರಿವಂತರ ಸಂಖ್ಯೆಯು 13,230ಕ್ಕೆ ಏರಿಕೆಯಾಗಿದೆ. 141 ಕೋಟಿ ಜನಸಂಖ್ಯೆಯ ದೇಶದಲ್ಲಿ ಇದು ದೊಡ್ಡ ಸಂಖ್ಯೆಯೇನೂ ಅಲ್ಲ. ಆದರೆ ಅಭಿವೃದ್ಧಿಶೀಲ ಹೆಸರು ಹಲಗೆ ಕಳಚಿಕೊಳ್ಳಲಾಗದ, 40 ಕೋಟಿಯಷ್ಟು ಬಡವರನ್ನು ಹೊಂದಿರುವ ಭಾರತದಲ್ಲಿ ಬಡವರ ಸಂಖ್ಯೆ ಇಳಿಸಲು ಸಾಧ್ಯವಾಗಿಲ್ಲ. ಬದಲಿಗೆ ಜನಸಂಖ್ಯೆ ಏರಿದಂತೆಯೇ ಬಡವರ ಸಂಖ್ಯೆಯೂ ಏರುತ್ತ ನಡೆದಿದೆ. 1970ನೇ ಇಸವಿಯಲ್ಲಿ ತಿಂಗಳಿಗೆ 300 ರೂಪಾಯಿ ಗಳಿಸುತ್ತಿದ್ದ ವ್ಯಕ್ತಿಯು ಈಗ ತಿಂಗಳಿಗೆ 13,000 ಗಳಿಸುತ್ತಿದ್ದಾನೆ ಎಂದರೂ ಅದು ಬಡತನ ನಿವಾರಣೆ ಅಲ್ಲ. ಭಾರತದಲ್ಲಿ ಬದುಕುವ ದರ ಕಳೆದ 50 ವರುಷಗಳಲ್ಲಿ ನೂರಾರು ಪಟ್ಟು ಹೆಚ್ಚಾಗಿದೆ. ಹಾಗಾಗಿ ಹೆಸರಿಗೆ ಕಿಸೆಯಲ್ಲಿ ಕಾಸು ಕಾಣಿಸುವ ಬಡವರ ಸಂಖ್ಯೆಯು ಭಾರತದಲ್ಲಿ ಅಧಿಕವಾಗಿದೆ. ಹೊರಗೆ ಬೃಂದಾವನ, ಒಳಗೆ ಗೋಳಿ ಸೊಪ್ಪಿನ ಕತೆಯಿದು.

ಭಾರತದಲ್ಲಿ ಹಣವಂತರಿಗೇನೂ ಕೊರತೆಯಿಲ್ಲ. ಎಲ್ಲೋ ದೋಚಿ ಎಲ್ಲೋ ಪ್ರಚಾರಕ್ಕಾಗಿ ದಾನ ಮಾಡುವವರಿಗೂ ಕೊರತೆಯಿಲ್ಲ. ಆದರೆ ಬಡತನ ಹೋಗಲಾಡಿಸಲು ಅವರು ತಯಾರಿಲ್ಲ. ಅವರ ಸುಲಭ ವಿಶ್ಲೇಷಣೆ ಎಂದರೆ ಬಡವರು ಇಲ್ಲವಾದರೆ ನಮಗೆ ಸೇವೆ ಮಾಡುವವರು ಯಾರು? ಬಡತನ ನಿವಾರಣೆ ಎಂದರೆ ಕೆಲಸ ಮಾಡುವವರೇ ಇಲ್ಲದಂತೆ ಮಾಡುವುದು ಎಂದು ಅರ್ಥವಲ್ಲ. ಆಗಲೂ ಕೆಲಸ ಮಾಡುವವರು ಇರುತ್ತಾರೆ. ಬಡತನ ನಿವಾರಣೆ ಎಂದರೆ ದುಡಿಯುವ ವರ್ಗವು ಸಾಲಗಾರನಾಗದಂತೆ, ಅರೆ ಹೊಟ್ಟೆ ತಿನ್ನದಂತೆ, ಪೌಷ್ಟಿಕ ಆಹಾರ ಸಿಗಲು ಬಳಲದಂತೆ ಮಾಡುವುದಾಗಿದೆ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ, ಕುಟುಂಬಕ್ಕೆ ಸುಲಭ ಆರೋಗ್ಯ ಸೇವೆ ದಕ್ಕುವಂತೆ ಮಾಡುವುದಾಗಿದೆ. ಸರಕಾರದ ಗ್ಯಾರಂಟಿಗಳಿಂದ ಕೆಲಸಕ್ಕೆ ಜನ ಸಿಗುವುದಿಲ್ಲ ಎಂಬ ಆರೋಪವೂ ಇದೆ. ಸತ್ಯ ಏನೆಂದರೆ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಮೋದಿಯವರು ಹೇಳಿದ್ದÀ ವರುಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ನಿರೀಕ್ಷೆಯಲ್ಲಿ ಯುವ ಸಮುದಾಯವು ಮುದುಕರಾಗುತ್ತ ಸಾಗಿದೆ. ಅವರ ಪಕ್ಷದವರೇ ವಾರ್ಷಿಕ ಉದ್ಯೋಗ ಸೃಷ್ಟಿ 2 ಲಕ್ಷವನ್ನೂ ಮುಟ್ಟಿಲ್ಲ.

ಭಾರತದಲ್ಲಿ 2028ರಲ್ಲಿ ಇದ್ದ ಅತ್ಯಂತ ದೊಡ್ಡ ಶ್ರೀಮಂತರ ಸಂಖ್ಯೆಯು 6 ಶೇಕಡಾ ವೃದ್ಧಿ ಕಂಡು 13,263 ಮುಟ್ಟಿದೆ ಎಂದು ಅಲ್ಟ್ರಾ ಹೈ ನೆಟ್‍ವರ್ಕ್ ಇಂಡಿವಿಜುವಲ್ಸ್ ವರದಿ ಮಾಡಿದೆ. ಇವರು ಶ್ರೀಮಂತರು ಎಂದರೆ ಬರೇ ಸಿರಿವಂತರಲ್ಲ. ಅಲ್ಟ್ರಾ ಹೈ ನೆಟ್‍ವರ್ಕ್ ಶ್ರೀಮಂತರು ಎಂದರೆ ಇವರ ಸಂಪತ್ತು ಒಟ್ಟು 3 ಕೋಟಿ ಡಾಲರ್ ಎಂದರೆ 25,000 ಕೋಟಿಗಿಂತಲೂ ಹೆಚ್ಚು ಇರಬೇಕು. ರಿಯಲ್ ಎಸ್ಟೇಟ್ ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆಯು 2024ರ ಭಾರತದ ಹಣದ ಮೂಟೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2022ರಲ್ಲಿ 12,495 ಇದ್ದ ಅತಿ ಭಾರತೀಯ ಶ್ರೀಮಂತರ ಸಂಖ್ಯೆಯು 2023ರಲ್ಲಿ 6.1 ಶೇಕಡಾ ಅಧಿಕಗೊಂಡು 13,263 ಮುಟ್ಟಿದೆ ಎಂಬುದು ವರದಿಯ ಸಾರಾಂಶ. ಭಾರತದಲ್ಲಿ ಕುಬೇರರು ವರುಷದಿಂದ ವರುಷಕ್ಕೆ ಏರುತ್ತಿದ್ದಾರೆ. ಆದರೆ ಅವರು ವೈಯಕ್ತಿಕ ಬೆಳವಣಿಗೆ ಮೀರಿ ಸಾಮಾಜಿಕ ಸಂಪತ್ತಾಗಿ ಕಂಡು ಬರುತ್ತಿಲ್ಲ.

2022 ಮತ್ತು 2023ನ್ನು ಹೋಲಿಸಿದರೆ ಅತಿ ಶ್ರೀಮಂತರ ಪ್ರಮಾಣ ಏರಿಕೆಯಲ್ಲಿ ಟರ್ಕಿ ಮೊದಲ ಸ್ಥಾನದಲ್ಲಿದೆ. ಅಲ್ಲಿ ಅತಿ ಶ್ರೀಮಂತರ ಪ್ರಮಾಣವು ಒಂದು ವರುಷದಲ್ಲಿ 9.7 ಶೇಕಡಾ ಆಗಿದೆ. ಈ ಸಂದರ್ಭದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 7.9 ಶೇಕಡಾ ಏರಿಕೆ ಮತ್ತು ಭಾರತದಲ್ಲಿ 6.1 ಶೇಕಡಾ ಏರಿಕೆಯಾಗಿದೆ. ಈ ಮೂರು ದೇಶಗಳು ಒಂದು ವರುಷದ ಅತಿ ಶ್ರೀಮಂತರ ಏರಿಕೆ ದರದಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಇವೆ. ತೆಂಕಣ ಕೊರಿಯಾದಲ್ಲಿ 5.6 ಶೇಕಡಾ, ಸ್ವಿಜರ್‍ಲ್ಯಾಂಡಿನಲ್ಲಿ 5.2 ಶೇಕಡಾದಷ್ಟು ವಾರ್ಷಿಕ ಅತಿ ಸಿರಿವಂತರ ಏರಿಕೆ ದರ ಕಂಡುಬಂದಿದೆ. ಈ ಎಲ್ಲ ಭಾರೀ ಕುಬೇರರಲ್ಲಿ 90 ಶೇಕಡಾಕ್ಕೂ ಹೆಚ್ಚು ಜನರು ಇನ್ನೊಂದು ವರುಷದಲ್ಲಿ ನಮ್ಮ ಸಂಪತ್ತು ಇನ್ನೂ 10 ಶೇಕಡಾ ಏರಿಕೆ ಕಾಣುತ್ತದೆ ಎಂದು ಹೇಳಿದ್ದಾರೆ. ಇವರಿಗೆ ಇಷ್ಟು ಭರವಸೆ ಇರುವುದೇ ಇವರ ಸಂಪಾದನೆಯ ದಾರಿಯ ಬಗೆಗೆ ಆಲೋಚನೆ ಮಾಡುವಂತೆ ಮಾಡುತ್ತದೆ.

ಕಳೆದ ವರುಷ ಜಾಗತಿಕವಾಗಿ ಭಾರೀ ಶ್ರೀಮಂತರ ಸಂಖ್ಯೆಯು 4.1 ಶೇಕಡಾದಷ್ಟು ಏರಿಕೆಯಾಗಿದೆ. ಒಟ್ಟು ಸಂಖ್ಯೆಯು 6,26,619 ಮುಟ್ಟಿದೆ. 2028ಕ್ಕೆ ಈ ಸಂಖ್ಯೆಯು ಇನ್ನೂ 28 ಶೇಕಡಾ ವೃದ್ಧಿ ಕಂಡು 8.3 ಲಕ್ಷಕ್ಕೆ ಏರಬಹುದು ಎಂದು ಅಂದಾಜು ಮಾಡಲಾಗಿದೆ. ಭಾರತದ ಒಟ್ಟು ಅತಿ ಕುಬೇರರ ಸಂಖ್ಯೆಯು 2028ರ ಹೊತ್ತಿಗೆ ಎಲ್ಲ ದೇಶಗಳನ್ನೂ ಮೀರಿದ ಸಂಖ್ಯೆಯಲ್ಲಿ ಇರುತ್ತದೆ ಎನ್ನಲಾಗಿದೆ. ಆದರೆ ಬಡವರ ಸಂಖ್ಯೆ ಇಲ್ಲವಾಗುತ್ತದೆ ಎಂಬ ಯಾವುದೇ ಅಂದಾಜು ಲಭ್ಯವಿಲ್ಲ. ಭಾರತ ಮತ್ತು ಅಭಿವೃದ್ಧಿಶೀಲ ದೇಶಗಳ ಅತಿ ದೊಡ್ಡ ಸಮಸ್ಯೆ ಅಪೌಷ್ಟಿಕತೆ. ಭಾರತದ ಜನಸಂಖ್ಯೆಯಲ್ಲಿ 31.52 ಶೇಕಡಾ ಜನರು ಅಪೌಷ್ಟಿಕತೆ ಮತ್ತು ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ನೆತ್ತರುಹೀನತೆಯಿಂದ ಬಳಲುತ್ತಿರುವವರನ್ನೂ ತೆಗೆದುಕೊಂಡರೆ ಭಾರತದಲ್ಲಿ ಅಪೌಷ್ಟಿಕ ಸಮಾಜವು 39.11 ಶೇಕಡಾ ಇದೆ.

ಜನರಲ್ಲಿ ಮಣ್ಣಿನ ಬಟ್ಟಲಿನ ಬದಲು ಉಕ್ಕಿನ ಗಟ್ಟಿ ಬಟ್ಟಲು ಬಂದಿದೆ. ಆದರೆ ತಟ್ಟೆಗೆ ಬೀಳುವ ಆಹಾರವು ಸತ್ವಯುತವಾದುದಲ್ಲ ಎನ್ನುವುದು ಇದರ ತಾತ್ಪರ್ಯವಾಗಿದೆ. ಅಪೌಷ್ಟಿಕತೆಯು ಜಗತ್ತಿನ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಏನೋ ತಿನ್ನುತ್ತಾರೆ. ಅದು ದೇಹಕ್ಕೆ ಅಗತ್ಯದ ಆಹಾರಾಂಶಗಳನ್ನು ಒದಗಿಸುವುದಿಲ್ಲ. ಮೊದಲನೆಯದಾಗಿ ಭಾರತದಲ್ಲಿ ಯಾವುದೇ ಗಣತಿಯು ಎಲ್ಲರನ್ನೂ ಒಳಗೊಳ್ಳುವುದಿಲ್ಲ. ಅಪೌಷ್ಟಿಕತೆಯ ಲೆಕ್ಕ ಮಾಡುವಾಗ ಯಾವುದಾದರೂ ಒಂದು ನಗರದ ಸ್ಲಂನಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಪರಿಗಣಿಸಿ ಅದರ ಮೇಲೆ ಒಟ್ಟಾರೆ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ.

ಮುಖ್ಯವಾಗಿ ಭಾರತದಲ್ಲಿ ಸೂಕ್ತವಾದ ಪೌಷ್ಟಿಕ ಆಹಾರ ಸಿಗದವರು ಎಂದರೆ ಕಾಡು ಮತ್ತು ಕಾಡಿನಂಚಿನಲ್ಲಿ ವಾಸಿಸುವ ಬುಡಕಟ್ಟು ಜನರು ಆಗಿದ್ದಾರೆ. ಚುನಾವಣೆಯ ಹೊರತಾಗಿ ಇವರ ಬಗೆಗೆ ನಮ್ಮ ಜನರಿಗೆ ಆಸಕ್ತಿ ಕಡಿಮೆ. ಮಿಶನರಿಗಳು ಹೋಗಿ ಏನಾದರೂ ಕೆಲಸ ಮಾಡಲು ನೋಡಿದರೆ ಮತಾಂತರದ ಬೊಬ್ಬೆ ಹಾಕುತ್ತಾರೆ. ಅಂದರೆ ಅಪೌಷ್ಟಿಕ ಜನ ಸಮುದಾಯದ ಪರ ಇವರು ದುಡಿಯುವುದಿಲ್ಲ; ಬೇರೆಯವರು ದುಡಿಯಲು ಬಿಡುವುದಿಲ್ಲ. ಒಟ್ಟಿನಲ್ಲಿ ಭಾರತದಲ್ಲಿ ಹಣವಂತರ ಸಂಖ್ಯೆ ಹೆಚ್ಚುತ್ತಿದೆ ಹಾಗೆಯೇ ಹೆಣವಂತರ ಎಂದರೆ ಜೀವಂತ ಶವಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಮೊದಲು ಭಾರತದಲ್ಲಿ ಬಡವ ಬಲ್ಲಿದ ಆದಾಯ ಹಂಚಿಕೆಯ ಅಂತರ ಇಳಿಸಬೇಕಾಗಿದೆ. ಅದರ ಜೊತೆಗೆ ಆಹಾರ ಭದ್ರತೆಯಡಿ, ಪೌಷ್ಟಿಕ ಆಹಾರ ಭದ್ರತೆಯನ್ನೂ ಒದಗಿಸಬೇಕು.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.