ಕಾಂಗ್ರೆಸ್ ಗೆಲ್ಲುವುದೇ ಗ್ಯಾರೆಂಟಿ ಇಲ್ಲ : ಬಿಜೆಪಿ ರಾಜ್ಯಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಟೀಕೆ

ಕಾಂಗ್ರೆಸ್ ಗೆಲ್ಲುವುದೇ ಗ್ಯಾರೆಂಟಿ ಇಲ್ಲ, ಹೀಗಾಗಿ ಗ್ಯಾರೆಂಟಿಗಳನ್ನು ಕೊಡುತ್ತ ಹೋಗುತ್ತಾರೆ. ಇವು ಧಾರವಾಹಿಗಳಿದ್ದ ಹಾಗೆ, ವಾರ ವಾರ ಬಿಡುಗಡೆಯಾಗುತ್ತ ಹೋಗುತ್ತವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಐದನೇ ಗ್ಯಾರೆಂಟ್ ಘೋಷಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ‘ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಸೇವೆಯ ಭರವಸೆ ನೀಡಿದ್ದಾರೆ. ರಾಜ್ಯದ ಬಜೆಟ್ ಗಾತ್ರ ಎಷ್ಟು ಅಂತ ಮೊದಲು ಲೆಕ್ಕ ಹಾಕಲಿ, ಅದರಲ್ಲಿ ಈ ಯೋಜನೆಗಳಿಗೆ ಎಷ್ಟು ಹಣ ತೆಗೆದಿಡುತ್ತಾರೆ ಎಂದು ಮೊದಲು ಹೇಳಲಿ. ಇದೊಂದು ಅವೈಜ್ಞಾನಿಕ ಭರವಸೆಯಾಗಿದೆ’ ಎಂದಿದ್ದಾರೆ.

ರಾಜಸ್ಥಾನ, ಹಿಮಾಚಲದಲ್ಲಿ ಘೋಷಣೆ ಮಾಡಿದ ಭರವಸೆಗಳನ್ನ ಕಾಂಗ್ರೆಸ್ ಈವರೆಗೆ ಈಡೇರಿಸಿಲ್ಲ. ಈ ಹಿಂದೆ ಕರ್ನಾಟಕದಲ್ಲಿ ಘೋಷಣೆ ಮಾಡಿದ ಭರವಸೆಗಳನ್ನು ಐದು ವರ್ಷದ ಆಡಳಿತ ಅವಧಿಯಲ್ಲಿ ಈಡೇರಿಸಿಲ್ಲ. ಕರ್ನಾಟಕದಲ್ಲಿ ಈ ಹಿಂದೆ ಕಾಂಗ್ರೆಸ್ ತುಷ್ಟೀಕರಣ ರಾಜನೀತಿ ಅನುಸರಿಸಿತ್ತು. 3,000 ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಅವರಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇರಲಿಲ್ಲ. ಗರೀಬಿ ಹಠಾವೊ ಹೆಸರಿನಲ್ಲಿ ದೇಶದಲ್ಲಿ 10 ಚುನಾವಣೆಗಳನ್ನು ಎದುರಿಸಿದೆ. ಗರೀಬಿ ಹಠಾವೊ ಹೆಸರಿನಲ್ಲಿ ಆಡಳಿತ ಮಾಡಿರುವ ಡಿಕೆ ಶಿವಕುಮಾರ್, ಸಿದ್ದರಾಮಯ್, ಮಲ್ಲಿಕಾರ್ಜುನ ಖರ್ಗೆ ಈಗ ಧನಿಕರಾಗಿದ್ದಾರೆ. 60 ವರ್ಷಗಳಲ್ಲಿ ಕೊಡದೆ ಇರುವಂತಹ ಯೋಜನೆಯನ್ನು ಈಗ ಎಲ್ಲಿಂದ ಕೊಡುತ್ತಾರೆ? ಸುಳ್ಳು ಹೇಳಿ, ಜನರಿಗೆ ವಂಚನೆ ಮಾಡಿ ಅಧಿಕಾರ ಪಡೆಯಬಹುದು ಎಂದು ಕಾಂಗ್ರೆಸ್ ಅಂದುಕೊಂಡಿದೆ. ಇವರ ಸುಳ್ಳು ಗ್ಯಾರೆಂಟಿಗಳು ಜನರಿಗೆ ಗೊತ್ತಾಗಿದೆ ಎಂದಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ‘ವಿಷ ಸರ್ಪ’ ಪದ ಬಳಕೆ ಮಾಡಿದ್ದು, ಕ್ಷಮೆಯಾಚಿಸಬೇಕು. ದೇಶ ಕಂಡ ಶ್ರೇಷ್ಠ ನಾಯಕ ನರೇಂದ್ರ ಮೋದಿ ಅವರನ್ನು ದೇಶದ ಜನರು ಗೌರವಿಸುತ್ತಾರೆ. ಇಂತಹ ಒಬ್ಬ ಶ್ರೇಷ್ಠ ನಾಯಕನ ಬಗ್ಗೆ ಕೆಟ್ಟ ಪದಗಳಿಂದ ದೂಷಣೆ ಮಾಡುವುದು ಕಾಂಗ್ರೆಸ್‌ನ ರಾಜಕಾರಣದ ನೀತಿ ಎಂದು ಅವರು ಟೀಕಿಸಿದ್ದಾರೆ.

Related Posts

Leave a Reply

Your email address will not be published.