ಸೌಕೂರು, ಸೌಪರ್ಣಿಕ ಏತ ನೀರಾವರಿ ಯೋಜನೆಯ ವಿದ್ಯುತ್ ಬಿಲ್ ಪಾವತಿಸಲು ಹಣ ಬಿಡುಗಡೆಗೆ ಬಿಜೆಪಿ ರೈತಮೋರ್ಚಾ ಆಗ್ರಹ

ಉಪ್ಪುಂದ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೌಕೂರು ಹಾಗೂ ಸೌಪರ್ಣಿಕ ಏತ ನೀರಾವರಿ ಯೋಜನೆಯು ಸಾವಿರಾರು ಹೆಕ್ಟೆರ್ ಪ್ರದೇಶಗಳಿಗೆ ನಿರೋದಗಿಸುವ ಒಂದು ಉತ್ತಮ ಯೋಜನೆಯಾಗಿದ್ದು ಇದರಿಂದ ನೂರಾರು ರೈತ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ. ಯೋಜನೆಯ ವಿದ್ಯುತ್ ಸ್ಥಾವರಗಳ ವಿದ್ಯುತ್ ಬಿಲ್ ಪಾವತಿಸುವಲ್ಲಿ ವಾರಾಹಿ ವಿಭಾಗದಿಂದ ಅನುದಾನದ ಕೊರತೆ ನೆಪವೊಡ್ಡಿ ಮೆಸ್ಕಾಂಗೆ ಕೋಟ್ಯಂತರ ರೂಪಾಯಿ ಬಿಲ್ ಬಾಕಿ ಇರಿಸಿಕೊಂಡಿರುವುದು ಸರಿಯಲ್ಲ. ತಕ್ಷಣವೇ ವಿದ್ಯುತ್ ಬಿಲ್ ಪಾವತಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರೈತಮೋರ್ಚಾ ಆಗ್ರಹಿಸಿದೆ.


ಮೆಸ್ಕಾಂ ಬಿಲ್ ಪಾವತಿ ಮಾಡದೇ ಇರುವುದರಿಂದ ವಿದ್ಯುತ್ ಸ್ಥಾವರಗಳ ವಿದ್ಯುತ್ ಸಂಪರ್ಕ ವನ್ನು ಕಡಿತ ಗೊಳಿಸಲಾಗಿದ್ದು ಸದ್ಯದ ಪರಿಸ್ಥಿತಿ ಹಾಗೂ ವಿಶೇಷವಾಗಿ ಮುಂದಿನ ಬೇಸಿಗೆಯಲ್ಲಿ ರೈತರಿಗೆ ತೀವ್ರ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ಕೂಡಲೇ ವಾರಾಹಿ ಯೋಜನೆ ವಿಭಾಗವು ಎಚ್ಚೆತ್ತು ಕೊಂಡು ಮೆಸ್ಕಾಂ ಗೆ ಬಾಕಿ ಇರುವ ವಿದ್ಯುತ್ ಬಿಲ್ ಅನ್ನು ಪಾವತಿಸಬೇಕು. ಸೌಪರ್ಣಿಕ ಏತ ನೀರಾವರಿ ಯೋಜನೆಯಡಿಯಲ್ಲಿ ಬಾಕಿ ಇರುವ 1.09 ಕೋಟಿ ರೂ., ಹಾಗೂ ಠೇವಣಿ ಮೊತ್ತ 1.03 ಲಕ್ಷ ಸೇರಿ ಒಟ್ಟು 1.10 ಕೋಟಿ ಹಾಗೂ ಸೌಕೂರು ಏತ ನೀರಾವರಿ ಯೋಜನೆಯಲ್ಲಿ ಬಾಕಿ ಇರುವ 2.04 ಕೋಟಿ ರೂ., ಹಾಗೂ ಠೇವಣಿ ಮೊತ್ತ 4.30 ಲಕ್ಷ ಸೇರಿ ಒಟ್ಟು 2.08 ಕೋಟಿ ಮೊತ್ತವನ್ನು ಮೆಸ್ಕಾಂ ಗೆ ವಾರಾಹಿ ವಿಭಾಗದಿಂದ ಬಾಕಿ ಇರಿಸಿಕೊಳ್ಳಲಾಗಿದೆ. ತಕ್ಷಣವೇ ಈ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.


ಸರಕಾರದಲ್ಲಿ ಅನುದಾನದ ಕೊರತೆ ಹಾಗೂ ಸರಕಾರಿ ಇಲಾಖೆಗಳ ಹೊಂದಾಣಿಕೆ ಹಾಗೂ ಸಮನ್ವಯದ ಕೊರತೆಯಿಂದಾಗಿ ನೀರಾವರಿ ಯೋಜನೆಗಳು ಕ್ಷೇತ್ರದಲ್ಲಿ ಹಳ್ಳ ಹಿಡಿಯುತ್ತಿದ್ದು,ರೈತರಿಗೆ ಯಾವುದೇ ಪ್ರಯೋಜನ ಇಲ್ಲದಂತಾಗುತ್ತಿದೆ. ವಾರಾಹಿ ಯೋಜನೆ ವಿಭಾಗವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ರೈತರ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ. ಇದರಿಂದಾಗಿ ರೈತರು ಆತಂಕದಿಂದ ದಿನ ದೂಡುವಂತಾಗಿದೆ. ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಈ ವಿಚಾರವನ್ನು ಈಗಾಗಲೇ ತಾಲೂಕು ಕೆ.ಡಿ.ಪಿ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ ಹಾಗೂ ಬಾಕಿ ವಿದ್ಯುತ್ ಬಿಲ್ ಪಾವತಿಗೆ ಕ್ರಮ ವಹಿಸಲು ಇಲಾಖೆಗೆ ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಕಡಿತ ಆಗಿ ರೈತರಿಗೆ ತೊಂದರೆ ಆಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅದಾಗ್ಯೂ ಅಧಿಕಾರಿಗಳು ಬೇಜವಾಬ್ದಾರಿ ನಡವಳಿಕೆ ತೋರುವುದು ಸರಿಯಲ್ಲ. ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಬೇಕು. ಈ ವಿಚಾರವಾಗಿ ಬೈಂದೂರು ಬಿಜೆಪಿ ರೈತ ಮೋರ್ಚವು ಶಾಸಕರ ಮಾತನ್ನು ಮತ್ತೊಮ್ಮೆ ಪುನರುಚ್ಚರಿಸುತ್ತದೆ. ವಾರಾಹಿ ಇಲಾಖೆಯು ಕೂಡಲೇ ಮೆಸ್ಕಾಂಗೆ ಬಾಕಿ ಇರಿಸಿ ಕೊಂಡಿರುವ ಕೋಟ್ಯಂತರ ಬಿಲ್ ಬಾಕಿಯನ್ನು ಪಾವತಿಸಬೇಕು. ಹಾಗೂ ರೈತರ ನೀರಾವರಿ ಜಮೀನುಗಳಿಗೆ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಇಲ್ಲವಾದರೆ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದೆ. ರೈತ ಮೋರ್ಚ ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷರಾದ ಪ್ರಕಾಶ್ ಚಂದ್ರ ಶೆಟ್ಟಿ ಕವ್ರಾಡಿ , ರೈತ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ , ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಮೋಹನ್ ಚಂದ್ರ ಉಪ್ಪುಂದ, ಬೈಂದೂರು ಮಂಡಲ ಕೋಶಾಧಿಕಾರಿಗಳಾದ ಗಣೇಶ್ ಗಾಣಿಗ ಉಪ್ಪುಂದ ಮೊದಲಾದವರು ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published.