ಚೆಕ್ ಬೌನ್ಸ್ : ಆರೋಪಿಗೆ ನ್ಯಾಯಾಂಗ ಬಂಧನ
ಮೂಡುಬಿದಿರೆ : ಕಡಿಮೆ ಬಡ್ಡಿಯಲ್ಲಿ ಹೆಚ್.ಡಿ.ಎಫ್.ಸಿ.ಬ್ಯಾಂಕಲ್ಲಿ ಲೋನ್ ಮಾಡಿ ಕೊಡುತ್ತೇನೆಂದು ನಂಬಿಸಿ ವ್ಯಕ್ತಿಯೋರ್ವರಿಂದ ಹಣ ಪಡೆದು ಪರಾರಿಯಾಗಿದ್ದ ವ್ಯಕ್ತಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಟ್ವಾಳ ಕಲ್ಲಡ್ಕ ಬಾಳ್ತಿಲದ ಶರತ್ ಕುಮಾರ್ ಗೆ ಮೂಡುಬಿದಿರೆ ನ್ಯಾಯಾಲಯವು ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
2021 ರಲ್ಲಿ ಶರತ್ ಕುಮಾರ್ ತಾನು ಎಚ್.ಡಿ.ಎಫ್.ಸಿ.ಬ್ಯಾಂಕಲ್ಲಿ ಉದ್ಯೋಗಿಯಾಗಿದ್ದು ಕಡಿಮೆ ಬಡ್ಡಿಯಲ್ಲಿ ಲೋನ್ ಮಾಡಿ ಕೊಡುತ್ತೇನೆಂದು ನಂಬಿಸಿ ಕಲ್ಲಮುಂಡ್ಕೂರಿನ ಸತೀಶ್ ಅಮೀನ್ ಅವರಿಂದ ಹಂತಹಂತವಾಗಿ ಹಣ ಪಡೆದುಕೊಂಡಿದ್ದ. ಆತ ಪಡೆದ ಹಣವನ್ನೂ ವಾಪಾಸು ನೀಡದೆ ಲೋನನ್ನೂ ಮಾಡಿಕೊಡದೆ ಸತಾಯಿಸಿದ್ದ. ಈತನ ವಂಚನೆಯನ್ನರಿತ ಸತೀಶ್ ಅಮೀನ್ ಅವರು 2023 ರಲ್ಲಿ ಆತನ ಚೆಕ್ಕನ್ನು ಬ್ಯಾಂಕ್ ಗೆ ಹಾಕಿದ್ದರು.ಅದು ಬೌನ್ಸ್ ಆಗಿತ್ತು.
ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಆತನಿಗೆ ವಾರಂಟ್ ಆಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.ಬಳಿಕ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಈ ವಾರಂಟ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಆತ ನಿನ್ನೆ ( ಅ.28) ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರಾಗಿದ್ದ.
ಆದರೆ ಆತನ ಮೇಲಿನ ವಂಚನಾ ಆರೋಪಕ್ಕೆ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದು ಅ.31 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.ಸತೀಶ್ ಅಮೀನ್ ಪರ ನ್ಯಾಯವಾದಿ ಶರತ್ ಶೆಟ್ಟಿ ವಾದಿಸಿದ್ದರು.


















