ಮಹಿಳಾ ಕ್ರೀಡಾಪಟುಗಳ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳವನ್ನು ಖಂಡಿಸಿ ಪ್ರತಿಭಟನಾ ಪ್ರದರ್ಶನ

ಮಹಿಳಾ ಕ್ರೀಡಾಪಟುಗಳ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಹಾಗೂ ಹಿಂಸೆಯನ್ನು ಖಂಡಿಸಿ,BJP ಸಂಸದ ಬ್ರಿಜ್ ಭೂಷಣ್ ಸಿಂಗ್ ಮತ್ತು BJP ಹರ್ಯಾಣ ಮಂತ್ರಿ ಸಂದೀಪ್ ಸಿಂಗ್ ವಿರುದ್ಧ ಕಠಿಣ ಕ್ರಮ ಜರುಗಿಸಲು ಒತ್ತಾಯಿಸಿ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ದೆಹಲಿಯಲ್ಲಿ ನಡೆಯುತ್ತಿರುವ ಮಹಿಳಾ ಕ್ರೀಡಾಪಟುಗಳ ನ್ಯಾಯಯುತ ಹೋರಾಟವನ್ನು ಬೆಂಬಲಿಸಿ ದೇಶದ ರೈತ ಕಾರ್ಮಿಕ ಕೃಷಿ ಕೂಲಿಕಾರರು, ವಿದ್ಯಾರ್ಥಿ ಯುವಜನ ಮಹಿಳಾ ದಲಿತ ಆದಿವಾಸಿ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಈ ಹೋರಾಟವನ್ನು ಆಯೋಜಿಸಲಾಗಿತ್ತು.

ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ CITU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು, ಪುರುಷ ಪ್ರಧಾನ ವ್ಯವಸ್ಥೆಯೊಳಗಡೆ ಮಹಿಳೆ ತನ್ನ ಎಲ್ಲಾ ಅಡೆತಡೆಗಳನ್ನು ಮೀರಿ ಸಮಾನತೆಗಾಗಿ ಹೋರಾಡುವ ಜೊತೆಗೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆಯ ಗರಿ ಮೂಡಿಸಿದ್ದಾಳೆ.ಅಂತಹ ಮಹಿಳಾ ಸಮುದಾಯಕ್ಕೆ ಪ್ರೋತ್ಸಾಹ ನೀಡುವ ಬದಲು ಅವರ ಮೇಲೆ ವ್ಯಾಪಕವಾದ ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೆ ಸಾಗುತ್ತಿದೆ.ದೇಶದ ಘನತೆ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಮಹಿಳಾ ಕ್ರೀಡಾಪಟುಗಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಹಿಂಸೆಯು ಪ್ರಸ್ತುತ ಭಾರತದಲ್ಲಿ ಮಹಿಳೆಯರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಭೇಟಿ ಬಚಾವೋ ಭೇಟಿ ಪಡಾವೋ ಘೋಷಣೆ ನೀಡಿದ ನರೇಂದ್ರ ಮೋದಿ ಸರಕಾರವು ಕೂಡ ಮಹಿಳಾ ಕ್ರೀಡಾಪಟುಗಳ ಮೇಲಿನ ದೌರ್ಜನ್ಯದ ಬಗ್ಗೆ ಚಕಾರ ಶಬ್ದ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ದೇಶದಲ್ಲಿ ಹಾಕಿ ಬಿಟ್ಟರೆ ವಿವಿಧ ಹಂತದ ಕ್ರೀಡೆಗಳಲ್ಲಿ ಪದಕಗಳ ಸರಮಾಲೆಯನ್ನು ತಂದು ಕೊಟ್ಟ ಹೆಮ್ಮೆ ಕುಸ್ತಿ ಕ್ರೀಡೆಗಿದೆ. ಅದರಲ್ಲೂ ಮಹಿಳಾ ಕುಸ್ತಿ ಕ್ರೀಡಾಪಟುಗಳ ಸಾಧನೆಯನ್ನು ಇಡೀ ದೇಶವೇ ಕೊಂಡಾಡಬೇಕಾಗಿದೆ. ಅಂತಹುದರಲ್ಲಿ ಸಾಧಕಿಯರ ಮೇಲೆಯೇ ಲೈಂಗಿಕ ಕಿರುಕುಳ ನಡೆದರೆ ಕ್ರೀಡಾ ಕ್ಷೇತ್ರದ ಮುಂದಿನ ಪರಿಸ್ಥಿತಿಯೇನು?ಕಳೆದ ಕೆಲವು ತಿಂಗಳಿಂದ ಮಹಿಳಾ ಕ್ರೀಡಾಪಟುಗಳು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೂ ನರೇಂದ್ರ ಮೋದಿ ಸರಕಾರವಂತೂ ದಿವ್ಯ ಮೌನ ವಹಿಸುವ ಮೂಲಕ ತಾನು ಮಹಿಳಾ ವಿರೋಧಿ ಸರಕಾರವೆಂದು ಸಾಬೀತುಪಡಿಸಿದೆ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಸಾಲಿಯಾನ್,DYFI ಜಿಲ್ಲಾಧ್ಯಕ್ಷರಾದ ಬಿ ಕೆ ಇಮ್ತಿಯಾಜ್,ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷರಾದ ಜಯಂತಿ ಶೆಟ್ಟಿಯವರು ಮಾತನಾಡುತ್ತಾ, ಮಾತು ಮಾತಿಗೂ ಮಾತೇ ಎಂದು ಸಂಬೋಧಿಸುವ ಬಿಜೆಪಿ ಸಂಘಪರಿವಾರವು ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ಅತ್ಯಾಚಾರ ನಡೆಸುವ ಮೂಲಕ ಅತ್ಯಾಚಾರಿಗಳ ಪಕ್ಷವಾಗಿ ರೂಪುಗೊಂಡಿದೆ. ಅನ್ಯಾಯಕ್ಕೊಳಗಾದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಬೇಕಾದ ನರೇಂದ್ರ ಮೋದಿ ಸರಕಾರವು ಘಟನೆಯ ಪ್ರಮುಖ ಆರೋಪಿಗಳಾದ ತನ್ನ ಬಾಲಂಗೋಚಿ ಸಂಸದ, ಮಂತ್ರಿಗಳನ್ನು ರಕ್ಷಿಸಲು ಹೊರಟಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕ ರಾದ ಜೆ ಬಾಲಕೃಷ್ಣ ಶೆಟ್ಟಿ,ಯೋಗೀಶ್ ಜಪ್ಪಿನಮೋಗರು,ಸುಕುಮಾರ್, ಪದ್ಮಾವತಿ ಶೆಟ್ಟಿ,ರಾಧಾ ಮೂಡಬಿದ್ರಿ,ಯು ಬಿ ಲೋಕಯ್ಯ, ಜಯಂತ ನಾಯಕ್,ಮುಸ್ತಫಾ,ರೈತ ಸಂಘದ ಜಿಲ್ಲಾ ನಾಯಕರಾದ ಸದಾಶಿವದಾಸ್,DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್,ನವೀನ್ ಕೊಂಚಾಡಿ ತಯ್ಯುಬ್ ಬೆಂಗ್ರೆ,ಮನೋಜ್ ವಾಮಂಜೂರು,ಮಹಿಳಾ ಸಂಘಟನೆಯ ನಾಯಕರಾದ ಭಾರತಿ ಬೋಳಾರ, ಜಯಲಕ್ಷ್ಮಿ, ಭವಾನಿ ವಾಮಂಜೂರು,ಲಕ್ಷ್ಮಿ ಮೂಡಬಿದ್ರಿ,ವಿಲಾಸಿನಿ ತೊಕ್ಕೊಟ್ಟು,ಯೋಗಿತಾ ಉಳ್ಳಾಲ,ಇತರ ಮುಖಂಡರಾದ ಬಿ ಎಂ ಮಾಧವ,ವಾಸುದೇವ ಉಚ್ಚಿಲ್,ದಯಾನಂದ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು