ಬಿಜೆಪಿಯಲ್ಲಿ ಮನೆಯೊಂದು 10 ಬಾಗಿಲು ಎಂಬಂತಾಗಿದೆ : ಮಂಗಳೂರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಟೀಕೆ

ಬಿಜೆಪಿಯಲ್ಲಿ ಮನೆಯೊಂದು ಬಾಗಿಲು ಹತ್ತು ಎಂಬಂತಾಗಿದೆ. ಯಾರು ಏನು ಮಾತನಾಡುತ್ತಾರೆಂದು ಗೊತ್ತಾಗುತ್ತಿಲ್ಲ. ರಾಜ್ಯ ಬಿಜೆಪಿಯ ಪರಿಸ್ಥಿತಿಯನ್ನು ನಿಯಂತ್ರಿಸಲು 56 ಇಂಚಿನ ಎದೆಯವರಿಗೂ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಟೀಕಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಬಿಜೆಪಿಯಲ್ಲಿ ಉದ್ಭವಿಸಿರುವ ಗೊಂದಲಗಳನ್ನು ನಿವಾರಿಸಲು ಕೇಂದ್ರದ ವರಿಷ್ಠರಿಗೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾತು ಮಾತಿಗೂ ಧಮ್ ತಾಕತ್ತಿನ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿಯವರಿಗೆ ಜನ ತಮ್ಮ ಧಮ್ ತಾಕತನ್ನು ಚುನಾವಣೆಯಲ್ಲಿ ತೋರಿಸಿದ್ದಾರೆ. ಕಾಂಗ್ರೆಸ್ ನುಡಿದಂತೆ ನಡೆದಿದೆ. ಜನರು ಸಂತಸದಲ್ಲಿದ್ದಾರೆ. ಇದನ್ನು ನೋಡಲು ಸಾಧ್ಯವಾಗದೆ ಬಿಜೆಪಿ ನಾಯಕರು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಕಾಂಗ್ರೆಸ್‍ನ ಗ್ಯಾರಂಟಿ ಸ್ಕೀಮ್‍ಗಳನ್ನು ವಿರೋಧಿಸಿರುವ ಬಿಜೆಪಿ ನಾಯಕರು ಧಮ್ಮು, ತಾಕತ್ತು ಇದ್ದರೆ ತಮ್ಮ ಪಕ್ಷದವರು ಯಾರೂ ಈ ಯೋಜನೆಗಳನ್ನು ಪಡೆಯಬಾರದೆಂದು ಕಾರ್ಯಕರ್ತರಿಗೆ ಹೇಳಬೇಕು ಎಂದು ಸವಾಲೆಸೆದ ಹರೀಶ್ ಕುಮಾರ್, ಐದು ಕೆಜಿಯನ್ನು ಏಳು ಕೆಜಿ ಮಾಡಿ ಕಾಂಗ್ರೇಸ್ ಸರಕಾರ ನೀಡುತ್ತಿದ್ದುದನ್ನು ಬಿಜೆಪಿ ಸರಕಾರ ಐದು ಕೆಜಿಗೆ ಇಳಿಸಿತ್ತು. ಚುನಾವಣೆಯ ಸಂದರ್ಭ ಕಾಂಗ್ರೆಸ್ ಪಕ್ಷವು, ಸರಕಾರ ಬಂದಲ್ಲಿ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಹೇಳಿತ್ತು. ಹೆಚ್ಚುವರಿ 10 ಕೆಜಿ ನೀಡುವುದಾಗಿ ಎಲ್ಲಿಯೂ ಕಾಂಗ್ರೆಸ್ ಹೇಳಿಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ದೇಶದಲ್ಲೇ ಮೊದಲು ಅನ್ನಭಾಗ್ಯ ಯೋಜನೆ ತಂದಿದ್ದು ಸಿದ್ಧರಾಮಯ್ಯ. ಅದಕ್ಕಾಗಿಯೇ ಅವರನ್ನು ಅನ್ನರಾಮಯ್ಯ ಅನ್ನುತ್ತಾರೆ. ಕಾಂಗ್ರೆಸ್‍ನ ಅನ್ನಭಾಗ್ಯ ಕನ್ನಡಿಗರಿಗೆ ಒಂದು ವರವಾಗಿದೆ. ಅಕ್ಕಿ ಪ್ರಧಾನಿಯವರದ್ದು ಅಂತಾರೆ. ಮೋದಿ ಭತ್ತ ಬೆಳೆಸುತ್ತಾರಾ? ಫುಡ್ ಕಾರ್ಪೊರೇಶನ್ ಕಾಯ್ದೆ ತಂದಿದ್ದು ಯುಪಿಎ ಸರಕಾರ. ಸುಳ್ಳು ಹೇಳುವುದೇ ಬಿಜೆಪಿ ಜಾಯಮಾನ. ಅವರಿಗೆ ಎರಡು ನಾಲಗೆ. ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನವೀನ್ ಡಿಸೋಜಾ, ಶುಭೋದಯ ಆಳ್ವ, ಸಂತೋಷ್ ಶೆಟ್ಟಿ, ನೀರಜ್ ಪಾಲ್, ಉಮೇಶ್ ದಂಡೆಕೇರಿ, ಸುಭಾಷ್ ಕೊಲ್ನಾಡ್, ಚಂದ್ರಕಲಾ, ಟಿ.ಕೆ. ಸುಧೀರ್ ಉಪಸ್ಥಿತರಿದ್ದರು.