ಶೋಷಣೆಯಿಲ್ಲದ ಸಮಾಜ ಕಟ್ಟುವುದು ಭಗತ್ ಸಿಂಗ್ ಕನಸು- ಶ್ರೀನಾಥ್ ಕುಲಾಲ್

ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ಕ್ರಾಂತಿಕಾರಿ ಭಗತ್ ಸಿಂಗ್ ಮತ್ತಾತನ ಸಂಗಾತಿ ರಾಜ್ ಗುರು, ಸುಖದೇವರಂತಹ ಕ್ರಾಂತಿಕಾರಗಳ ಆಶಯ ಇವತ್ತಿಗೂ ಈಡೇರಲಿಲ್ಲ. ಸ್ವಾತಂತ್ರ್ಯ ಅಂದರೆ ಕೇವಲ ಯಜಮಾನರ ಬದಲಾವಣೆಯಲ್ಲ ಬದಲಾಗಿ ಶೋಷಣೆರಹಿತ ಸಮಾಜ ಕಟ್ಟುವುದು ಭಗತ್ ಸಿಂಗರ ಕನಸಾಗಿತ್ತು ಎಂದು ಡಿವೈಎಫ್ಐ ದ.ಕ ಜಿಲ್ಲಾ ಮುಖಂಡರಾದ ಶ್ರೀನಾಥ್ ಕುಲಾಲ್ ಇಂದು 23-3-2023 ಡಿವೈಎಫ್ಐ ಮಂಗಳೂರು ನಗರ ಸಮಿತಿ ಭಗತ್ ಸಿಂಗರ ಹುತಾತ್ಮ ದಿನದ ಅಂಗವಾಗಿ ನಿರುದ್ಯೋಗದ ವಿರುದ್ಧ ಸೌಹಾರ್ದ ಭಾರತಕ್ಕಾಗಿ ನಗರದ ಹ್ಯಾಮಿಲ್ಟನ್ ವೃತ್ತದ ಬಳಿಯಿಂದ ಕ್ಲಾಕ್ ಟವರ್ ವರೆಗೆ ನಡೆದ ಭಗತ್ ಸಿಂಗ್ ಹುತಾತ್ಮ ಜ್ಯೋತಿ ಮೆರವಣೆಗೆಯನ್ನು ಉದ್ದೇಶಿಸಿ ಮಾತನಾಡಿದರು.

 ದೇಶದಲ್ಲಿ ಅನ್ಯಾಯದ ಬುನಾದಿಯ ಮೇಲೆ ರಚಿತವಾಗಿರುವ ಈ ಅಸಮಾನ ವ್ಯವಸ್ಥೆಯನ್ನು ಸರಿಪಡಿಸುವುದು ಭಗತ್ ಸಿಂಗರ ಉದ್ದೇಶವಾಗಿತ್ತು. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ನಮ್ಮನಾಳುವ ಬಿಜೆಪಿ ಸರಕಾರ ಅಸಮಾನತೆಯ ಸಮಾಜವನ್ನೇ ನಿರ್ಮಾಣಮಾಡುತ್ತಿದ್ದಾರೆ. ಜಾತಿತಾರತಮ್ಯ, ಕೋಮುದ್ರುವೀಕರಣ, ಮತಾಂದತೆಯ ರಾಜಕಾರಣ ನಡೆಸಿ ಅರಾಜಕತೆಯನ್ನು ಸೃಷ್ಟಿಸಿ ಮನುಷ್ಯ ಮನುಷ್ಯರ ನಡುವೆ ದ್ವೇಷ ಹರಡುವುದರ ಜೊತೆಗೆ ಸಮಾಜವನ್ನು ವ್ಯವಸ್ಥಿತವಾಗಿ ಒಡೆಯಲಾಗುತ್ತಿದೆ. ಇನ್ನು ಆಳುವ ಸರಕಾರಗಳ ತಪ್ಪಾದ ನೀತಿಗಳಿಂದ ವಿದೇಶಿ ಬಂಡವಾಳಶಾಹಿ ಕಂಪೆನಿಗಳಿಗೆ ನೀಡಿದ ಮುಕ್ತ ಮಾರುಕಟ್ಟೆ ವ್ಯವಸ್ಥೆಯು ನಿರುದ್ಯೋಗ, ಬಡತನ, ಹಸಿವಿನಂತಹ ಪ್ರಮಾಣವನ್ನು ಹೆಚ್ಚಿಸಿದೆ. ಭಗತ್ ಸಿಂಗರ ಕನಸು ಈಡೇರಬೇಕಾದರೆ ಖಾಸಗೀಕರಣ, ಉದಾರಿಕರಣ, ಜಾಗತೀಕರಣದ ವಿರುದ್ಧದ ಹೋರಾಟವನ್ನು ಗಟ್ಟಿಗೊಳಿಸಬೇಕೆಂದು ಹೇಳಿದರು.

ಡಿವೈಎಫ್ಐ ನಗರ ಕೋಶಾಧಿಕಾರಿ ತಯ್ಯೂಬ್ ಬೆಂಗರೆ ಮಾತನಾಡುತ್ತಾ ಇಂದಿನ ಯುವತಲೆಮಾರಿಗೆ ಭಗತ್ ಸಿಂಗರ ಹೋರಾಟದ ಆಶಯಗಳನ್ನು ತಿಳಿಸುವ ಮತ್ತು ಅವರ ಕನಸಿನ ಭಾರತವನ್ನು ಕಟ್ಟುವ ಇತಿಹಾಸಗಳ ಕುರಿತು ತಿಳಿಸಬೇಕಾಗಿದೆ. ಆದರೆ ದುರಂತ ಏನೆಂದರೆ ಇಲ್ಲಿ ಭಗತ್ ಸಿಂಗ್ ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಮಹಾನ್ ಕ್ರಾಂತಿಕಾರಿಗಳ ಹೋರಾಟದ ಗಾಥೆಗಳನ್ನು ತಿಳಿಸುವ ಬದಲಾಗಿ ಬ್ರೀಟೀಷರ ವಿರುದ್ಧ ಹೋರಾಡಿದ ಟಿಪ್ಪುವನ್ನು ಕೊಂದದ್ದು ಉರಿಗೌಡ ಮತ್ತು ನಂಜೇಗೌಡ ಎಂಬ ಸುಳ್ಳು ಕಥೆಗಳನ್ನು ಸೃಷ್ಟಿಸುವ ಮತ್ತದನ್ನು ಸಮರ್ಥಿಸುವ ಗೋಬೆಲ್ಸ್ ಸಿದ್ದಾಂತವನ್ನು ಅಳವಡಿಸಿ ಯುವಜನರನ್ನು ದಾರಿತಪ್ಪಿಸಲು ಹೊರಟ ಬಿಜೆಪಿ ನೀತಿ ಈ ದೇಶಕ್ಕ ಬಹಳ ಅಪಾಯಕಾರಿ ಮತ್ತು ಆಘಾತಕಾರಿಯಾಗಿದೆ ಎಂದರು.

ಈ ವೇಳೆ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಜಿಲ್ಲಾ ಮುಖಂಡ ಸುನೀಲ್ ತೇವುಲ, ಡಿವೈಎಫ್ಐ ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ, ಅಧ್ಯಕ್ಷರಾದ ಜಗದೀಶ್ ಬಜಾಲ್, ಕಾರ್ಮಿಕ ಮುಖಂಡರಾದ ವಿಲ್ಲಿ ವಿಲ್ಸನ್, ಪ್ರಮೀಳಾ ದೇವಾಡಿಗ,‌ ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಅಧ್ಯಕ್ಷರಾದ ವಿನೀತ್ ದೇವಾಡಿಗ, ಹನೀಫ್ ಬೆಂಗರೆ, ರಾಜೇಶ್ ಉರ್ವಸ್ಟೋರ್, ಪುನೀತ್ ಉರ್ವಸ್ಟೋರ್ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.