ಹೆಣ್ಣು ಸಂಖ್ಯೆ ಮಾತ್ರ ಅಭಿವೃದ್ದಿ ಸೂಚಕವಲ್ಲ

ಭಾರತದ ಹನ್ನೆರಡು ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯು ಗಂಡಸರಿಗಿಂತ ಹೆಚ್ಚು ಇರುವುದಾಗಿ ಚುನಾವಣಾ ಆಯೋಗ ನೀಡಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಭಾರತದಲ್ಲಿ 1,000 ಗಂಡಸರಿಗೆ 948 ಸ್ತ್ರೀ ಮತದಾರರು ಮಾತ್ರ ಇದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಆದರೆ 12 ರಾಜ್ಯಗಳಲ್ಲಿ ಗಂಡಿಗಿಂತ ಹೆಣ್ಣು ಮತದಾರರ ಸಂಖ್ಯೆಯೇ ಹೆಚ್ಚು ಎಂಬುದು ತಿಳಿದು ಬಂದಿದೆ
ಪುರುಷರಿಗಿಂತ ಹೆಚ್ಚು ಸ್ತ್ರೀ ಮತದಾರರಿರುವ ಕ್ಷೇತ್ರಗಳಲ್ಲಿ ಮಂಗಳೂರು ಮತ್ತು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳೂ ಸೇರಿವೆ. ಒಂದು ಕಾಲದಲ್ಲಿ ತುಳುನಾಡಿನಲ್ಲಿ, ಕೇರಳದಲ್ಲಿ, ಮಣಿಪುರದಲ್ಲಿ ಮಹಿಳಾ ಸಂಖ್ಯೆ ಹೆಚ್ಚು ಇರಲು ಕಾರಣ ಅಲ್ಲಿ ಪಾಲನೆಯಾಗುವ ತಾಯಿ ಕಟ್ಟು ಪದ್ಧತಿ ಎಂದು ತಿಳಿದವರೇ ಹೆಚ್ಚು. ಆದರೆ ವಿಶ್ಲೇಷಣೆ ಮಾಡಿದಾಗ ಅದಕ್ಕಿರುವ ಕಾರಣಗಳೇ ಬೇರೆ. ತಾಯಿ ಕಟ್ಟು ಕೂಡ ಸ್ವಲ್ಪ ಮಟ್ಟಿಗೆ ಕಾರಣ ಇರಬಹುದು ಅಷ್ಟೆ.


ಈ ಪ್ರದೇಶದ ಪುರುಷರು ಹೆಚ್ಚಾಗಿ ಬೇರೆ ಬೇರೆ ಕಡೆ ಕೆಲಸ ಹುಡುಕಿ ಹೋಗುತ್ತಾರೆ. ಮುಂಬಯಿ ಹಾಗೂ ದುಬಾಯಿಗಳಲ್ಲಿ ತುಂಬಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಹಾಗಾಗಿ ಊರಲ್ಲಿ ಅವರ ತಾಯಿ, ಹೆಂಡತಿ, ಮಗಳು ಎಂದು ಗಂಡಸರಿಗಿಂತ ಹೆಚ್ಚು ಮಹಿಳೆಯರು ಇಲ್ಲಿದ್ದಾರೆ. ಹಿಂದೆ ಹೆಂಡತಿಯರನ್ನು ಕರೆದೊಯ್ಯುತ್ತಲೇ ಇರಲಿಲ್ಲ. ಈಗ ಕರೆದೊಯ್ಯುವವರು ಇದ್ದಾರಾದರೂ ಒಟ್ಟು ಪ್ರಮಾಣವು ಕಡಿಮೆಯೇ ಇದೆ. ಪರವೂರ ಕಡೆಗೆ ಹೋದ ಗಂಡಸರು ಕೆಲವರು ಊರಿಗೆ ಬಂದರೂ ಬಹುತೇಕ ಅಲೆಮಾರಿ ಬದುಕು ಅವರದಾಗಿರುವುದರಿಂದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರುವುದಿಲ್ಲ. ಅವರ ಹೆಸರು ಮತದಾರರ ಪಟ್ಟಿಗೆ ಸೇರಿದರೆ ಪಾಲು ಕೇಳಲು ಬರುತ್ತಾರೆ ಎಂದು ಹೆದರುವ ಹೆಂಗಸರೂ ಇದ್ದಾರೆ. ಅವರನ್ನು ಹಾಗೆ ಬೆದರಿಸಿ ಇಟ್ಟಿರುವ ಗಂಡಸರೂ ಕಾಣುತ್ತಾರೆ.


ಮಹಿಳೆಯರು ಸಾಮಾನ್ಯವಾಗಿ ಮನೆಯಲ್ಲಿ ಇರುವುದರಿಂದ ಮತದಾರರ ಪಟ್ಟಿಯಿಂದ ಅವರ ಹೆಸರು ಕೈಬಿಟ್ಟು ಹೋಗುವ ಪ್ರಮೇಯ ತುಂಬ ಕಡಿಮೆ. ಆದರೆ ಗಂಡಸರು ಹೊರಗೆ ಸುತ್ತವವರಾದ್ದರಿಂದ, ಅವರಿಗೆ ಮನೆಯ ಬಾಂಧವ್ಯ ಕಡಿಮೆ ಇರುವುದರಿಂದ ಗಂಡಸರ ಹೆಸರು ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋಗುವ ಸಾಧ್ಯತೆ ಅಧಿಕ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9,19,321 ಮಹಿಳಾ ಮತದಾರರು ಇದ್ದಾರೆ. ಉಡುಪಿಯಲ್ಲಿ 8,10,362 ಹೆಣ್ಣು ಮತದಾರರು ಇದ್ದಾರೆ.


ದಕ್ಷಿಣ ಕನ್ನಡ ಇಲ್ಲವೇ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ 17,95,826 ಮತದಾರರಲ್ಲಿ ಮಹಿಳಾ ಮತದಾರರ ಸಂಖ್ಯೆಯು 9,19,321. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲೂ ಮಹಿಳಾ ಮತದಾರರ ಸಂಖ್ಯೆಯು ಗಂಡಸರಿಗಿಂತ ಹೆಚ್ಚು. ಆದರೆ ಈ ಅಂತರ ಚಿಕ್ಕಮಗಳೂರು ಜಿಲ್ಲೆಯ ಕಡೆ ತುಸು ಕಡಿಮೆ ಇದ್ದರೂ ಒಟ್ಟು ಮತದಾರರ ಸಂಖ್ಯೆಯನ್ನು ಗಮನಿಸದರೆ ಗಂಡಸರಿಗಿಂತ ಹೆಂಗಸರ ಸಂಖ್ಯೆಯೇ ಹೆಚ್ಚು.
ದೇಶದ ಮತದಾರರ ಸಂಖ್ಯೆ 96.8 ಕೋಟಿ. ಅವರಲ್ಲಿ ಮಹಿಳಾ ಮತದಾರರ ಸಂಖ್ಯೆಯು 47.1ಕೋಟಿ. ಅಂದರೆ ಒಟ್ಟು ಗಂಡಸರಿಗಿಂತ ಮಹಿಳಾ ಮತದಾರರ ಸಂಖ್ಯೆಯು ಒಂದೂವರೆ ಕೋಟಿಗಿಂತಲೂ ಹೆಚ್ಚು ಕಡಿಮೆ ಇದೆ. ಲಿಂಗ ತಾರತಮ್ಯ ಮತ್ತು ಅಂತರವನ್ನು ಗಮನಿಸಿದರೆ ಮಹಿಳಾ ಮತದಾರರ ಪ್ರಮಾಣ ತೀರಾ ಕಡಿಮೆಯೇನೂ ಅಲ್ಲ. ಅಲ್ಲದೆ 12 ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು ಎನ್ನುವುದು ಆಶಾದಾಯಕವಾದ ವಿಚಾರವಾಗಿದೆ.


ಆದರೆ ಮಹಿಳೆಯರ ಸಂಖ್ಯೆ ದೇಶದಲ್ಲಿ ಪುರುಷರಿಗಿಂತ ಕಡಿಮೆ ಇದ್ದರೂ, ಪಿಯುಸಿವರೆಗೆ ಓದುವ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರುವುದಿಲ್ಲ. ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಮಹಿಳೆಯರ ಸಂಖ್ಯೆಯು ಗಂಡಸರಿಗಿಂತ ತುಂಬ ಕಡಿಮೆ ಇರುತ್ತದೆ. ಆದರೆ ಹೆಚ್ಚು ಅಂಕ ಪಡೆಯುವುದರಲ್ಲಿ ಹಿಂದೆ ಇರುವುದಿಲ್ಲ. ಭಾರತದ ಕಲಿಕಾ ದರದಲ್ಲಿ 82% ಗಂಡಸರಾದರೆ, 65% ಮಹಿಳೆಯರಾಗಿದ್ದಾರೆ. ಹೀಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಮಹಿಳೆಯರು ಗಂಡಸರಿಗಿಂತ ಕಡಿಮೆ ಪ್ರಮಾಣದಲ್ಲಿ ಇರುತ್ತಾರೆ.


ಹಾಗಾಗಿ ಕೆಲವೆಡೆ ಮಹಿಳಾ ಮತದಾರರ ಪ್ರಮಾಣವು ಗಂಡಸರಿಗಿಂತ ಹೆಚ್ಚು ಎನ್ನುವುದು ಯಾವುದೇ ರೀತಿಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯ ಆಗಿರುವುದಿಲ್ಲ. ಅಲ್ಲದೆ ಅದು ಯಾವುದೇ ಒಲವು ನಿಲುವಿಗೆ ಸಂಬಂಧಿಸದೆ ಆಯಾ ಪ್ರದೇಶದ ರಾಜಕೀಯ ನಿಲುವಿಗೆ ಸಂಬಂಧಿಸಿದ ರೀತಿಯಲ್ಲೇ ಚಲಾವಣೆ ಆಗುತ್ತದೆ. ಉದಾಹರಣೆಗೆ ಕೇರಳದಲ್ಲಿ ಮಹಿಳಾ ಮತದಾರರು ಕಮ್ಯೂನಿಸ್ಟ್ ಇಲ್ಲವೇ ಕಾಂಗ್ರೆಸ್ಸಿಗೇ ಮತ ಚಲಾಯಿಸುತ್ತಾರೆ. ಆದರೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಇಲ್ಲವೇ ದೂರದ ಅಸ್ಸಾಮಿನಲ್ಲಿ ಹಿಂದೆ ಕಾಂಗ್ರೆಸ್ ಪರ ಇದ್ದ ಮಹಿಳಾ ಮತದಾರರ ಒಲವು ಈಗ ಬಿಜೆಪಿಯತ್ತ ವಾಲಿದೆ. ಅದು ಈ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಬದಲಾಗುತ್ತದೆ ಎನ್ನುವುದು ಗಮನಿಸಬೇಕಾಗಿರುವ ಸಂಗತಿಯಾಗಿದೆ.


ಕರ್ನಾಟಕದಲ್ಲಿ ಮಹಿಳಾ ಮತದಾರರು ಗಂಡಸು ಮತದಾರರನ್ನು ಹಿಂದಿಕ್ಕಿಲ್ಲ. ಕರ್ನಾಟಕದಲ್ಲಿ 5.42 ಕೋಟಿ ಮತದಾರರು ಇದ್ದಾರೆ. ಇವುಗಳಲ್ಲಿ ಅತಿ ಕಡಿಮೆ ಮತದಾರರು ಇರುವ ಲೋಕ ಸಭಾ ಕ್ಷೇತ್ರ ಉಡುಪಿ ಚಿಕ್ಕಮಗಳೂರು. ಇಲ್ಲಿ ಮತದಾರರ ಸಂಖ್ಯೆಯು 15,72958 ಆಗಿದೆ. ಆದರೆ ಈ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆಯು ಪುರುಷರಿಗಿಂತ ಅಧಿಕ ಎಂಬುದು ವಿಶೇಷ.


ಭಾರತದ ಚುನಾವಣೆ ಅತಿ ವಿಶೇಷವಾದುದು ಏಕೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಏಕೆಂದರೆ ಭಾರತದ ಮತದಾರರ ಸಂಖ್ಯೆಯು 97 ಕೋಟಿಯಷ್ಟು ಎಂದರೆ ಅದು ಅಮೆರಿಕ ಸಂಯುಕ್ತ ಸಂಸ್ಥಾನದ ಮತದಾರರ ನಾಲ್ಕು ಪಟ್ಟು ಆಗಿದೆ. ಈ ಕಾರಣಕ್ಕೆ ಭಾರತವನ್ನು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಹೇಳಲಾಗುತ್ತದೆ.


ಆದರೆ ಭಾರತದ ಮಹಿಳಾ ಮತದಾರರ ಬಗೆಗೆ ಇನ್ನೊಂದು ಆರೋಪವೂ ಇದೆ. ಅರ್ಧಕ್ಕೂ ಹೆಚ್ಚು ಮಹಿಳೆಯರು ತಮ್ಮ ಗಂಡಂದಿರು ಹೇಳಿದ ಇಲ್ಲವೇ ಅಪ್ಪ ಹೇಳುವ ಪಕ್ಷಕ್ಕೆ ಮತ ಚಲಾಯಿಸುವವರು ಎನ್ನುವುದಾಗಿದೆ. ಸ್ವಂತ ನಿರ್ಧಾರ ಮಾಡಿ ಮತ ಚಲಾಯಿಸುವ ಹೆಣ್ಣುಮಕ್ಕಳ ಸಂಖ್ಯೆಯು ಕಳೆದ 20 ವರುಷಗಳಿಂದಷ್ಟೆ ಹೆಚ್ಚಾಗುತ್ತ ಬರುತ್ತಿದೆ. ಅದರ ಪ್ರಮಾಣದ ಬಗೆಗೆ ಹಲವು ಸಮೀಕ್ಷೆಗಳು ಹಲವು ರೀತಿಯಲ್ಲಿ ವ್ಯಾಖ್ಯಾನ ನೀಡಿವೆ.


ಈಗಿನ ಮಹಿಳೆಯರು ಬಹುತೇಕರು ಸ್ವಂತ ತೀರ್ಮಾನ ಮಾಡಿ ಮತ ಚಲಾಯಿಸುವವರಾದ್ದರಿಂದ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕಾಂಗೆಸ್, ಬಿಜೆಪಿ. ಎಎಪಿ ಮೊದಲಾದ ಪಕ್ಷಗಳು ಗ್ಯಾರಂಟಿಗಳನ್ನು ಘೋಷಣೆ ಮಾಡಿವೆ. ಮಹಿಳೆಯರು ಮತ ಚಲಾಯಿಸಿದರೇನೇ ಗೆಲುವು ಎಂದು ನಂಬುವವರೂ ಇದ್ದಾರೆ. ಅದಕ್ಕೆ ಸರಿಯಾದ ಕಾರಣ ಸಿಗುವುದಿಲ್ಲವಾದರೂ ಅರ್ಧಕ್ಕರ್ಧ ಮತದಾರರು ಮಹಿಳೆಯರಾಗಿರುವುದರಿಂದ ಅವರು ಕೂಡ ತಮ್ಮ ಪಕ್ಷಕ್ಕೇ ಮತ ಹಾಕುವಂತೆ ನೋಡಿಕೊಳ್ಳುವುದು ರಾಜಕೀಯ ಪಕ್ಷಗಳಿಗೆ ಮುಖ್ಯವಾಗುತ್ತದೆ.


ಪ್ರತಿ ಬಾರಿ 30 ಶೇಕಡಾಕ್ಕೂ ಹೆಚ್ಚು ಮತದಾರರು ಮತ ಚಲಾಯಿಸುವುದಿಲ್ಲ. ಅದರಲ್ಲಿ ಗಂಡಸರ ಪ್ರಮಾಣವೆ ಅಧಿಕ ಎಂಬುದು ಕೂಡ ಸತ್ಯ. ಅಷ್ಟರ ಮಟ್ಟಿಗೆ ಮಹಿಳೆಯರ ಮತ ಚಲಾವಣೆ ಮುಖ್ಯವಾಗುತ್ತದೆ. ಏಕೆಂದರೆ ಗೆಲ್ಲುವ ಅಂತರ ಕಡಿಮೆ ಇರುವಲ್ಲಿ ಇದು ತುಂಬ ನಿರ್ಣಾಯಕ ಅಂಶವಾಗಿರುತ್ತದೆ.

ಬರಹ: ಪೇರೂರು ಜಾರು, ಹಿರಿಯ ಸಂಪಾದಕರು

Related Posts

Leave a Reply

Your email address will not be published.