“ಅಂಧತ್ವಕ್ಕೆ ನಾಂದಿ ಹಾಡುವ ಗ್ಲಾಕೋಮಾ”

ಕಣ್ಣುಗಳು ನಮ್ಮ ದೇಹದ ಸಂವೇದನೆಯ ಅಂಗಗಳಲ್ಲಿ ಅತ್ಯಮೂಲ್ಯವಾದ ಅಂಗವಾಗಿದೆ. ಕಣ್ಣುಗಳು ನಮಗೆ ಜೀವನದ ಬಾಹ್ಯ ಜಗತ್ತಿನ ವಿವಿಧ ವಿಚಾರಗಳ ಅನುಭವವನ್ನು ಹೊಂದಲು ನೆರವಾಗುತ್ತವೆ. ಭಾವೋದ್ವೇಗಗಳು, ಭಾವನೆಗಳು ಮತ್ತು ನಮ್ಮ ಸುತ್ತ ಮುತ್ತಲಿನ ಪರಿಸರದ ಅದ್ಭುತವಾದ ಬಣ್ಣಬಣ್ಣದ ಜಗತ್ತನ್ನು ಆಸ್ಪಾದಿಸಲು ಕಣ್ಣುಗಳು ನಮಗೆ ಅತೀ ಅವಶ್ಯಕ. ಬಾಹ್ಯ ಜಗತ್ತಿನ ಸೌಂದರ್ಯವನ್ನು ಆಸ್ಪಾದಿಸಲು ಕಣ್ಣುಗಳ ದೃಷ್ಟಿ ನಮಗೆ ಅನಿವಾರ್ಯ. ದೃಷ್ಟಿ ಇಲ್ಲದ ನಮ್ಮ ಜೀವನ ಖಂಡಿತ ಬಣ್ಣವಿಲ್ಲದ ಚಿಟ್ಟೆಯಂತಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಕಣ್ಣುಗಳ ಸೂಕ್ತ ಆರೈಕೆ ಮತ್ತು ಪೋಷಣೆ ಅತೀ ಅಗತ್ಯ.

ಕಣ್ಣುಗಳು ನಮ್ಮ ದೇಹದ ಬಹಳ ಸಂಕೀರ್ಣವಾದ ಅಂಗವಾಗಿದ್ದು ಮಸೂರ (ಲೆನ್ಸ್), ಕಾರ್ನಿಯಾ, ರೆಟಿನಾ (ಅಕ್ಷಿಪಟಲ), ಪ್ಯುಪಿಲ್, ದೃಷ್ಟಿನರ ಹೀಗೆ ಹಲವಾರು ಅಂಗಗಳು ವ್ಯವಸ್ಥಿತವಾಗಿ ಜೊತೆ ಜೊತೆಯಾಗಿ ಕಾರ್ಯ ನಿರ್ವಹಿಸುತ್ತದೆ. ಕಾರ್ನಿಯಾ ಕಣ್ಣಿನ ಹೊರಗಿನ ಪಾರದರ್ಶಕ ಪದರವಾಗಿದ್ದು, ಇದು ಕಣ್ಣಿನ ಹೊರ ಕಿಟಿಕಿಯಾಗಿ ಕಾರ್ಯ ನಿರ್ವಹಿಸುತ್ತದೆ. ರೆಟಿನಾ ಕಣ್ಣಿನ ತೀರಾ ಒಳಗೆ ಇರುವ ಪದರವಾಗಿದ್ದು ಇದನ್ನ ಅಕ್ಷಿಪಟಲ ಎಂದು ಕರೆಯುತ್ತಾರೆ. ಕಣ್ಣುಗಳ ಮೂಲಕ ಬೆಳಕು ಪ್ರವೇಶಿದಾಗ ಸಂವೇದನೆ ನೀಡುವ ನರ ಜೀವಕೋಶಗಳನ್ನು ಇದು ಒಳಗೊಂಡಿರುತ್ತದೆ. ಪ್ಯುಪಿಲ್ ಮೂಲಕ ಬೆಳಕು ನಮ್ಮ ಕಣ್ಣುಗಳನ್ನು ಪ್ರವೇಶಿಸಿದಾಗ ಕಣ್ಣಿನ ಮೇಲ್ಪದರವಾಗಿರುವ ಕಾರ್ನಿಯಾ ಬೆಳಕನ್ನು ಬಾಗಿಸುತ್ತದೆ. ನಂತರ ರೆಟಿನಾದ ಮುಂದಿರುವ ದರ್ಪಣ ಅಥವಾ ಮಸೂರ (ಲೆನ್ಸ್)ದ ಮೂಲಕ ಬೆಳಕು ಹಾದು ಹೋಗಿ ರೆಟಿನಾದ ಮೇಲೆ ಕೇಂದ್ರಿಕೃತವಾಗುತ್ತದೆ. ರೆಟಿನಾದಲ್ಲಿ ನರಕೋಶಗಳು ನಮ್ಮ ಮೆದುಳಿಗೆ ಪ್ರತಿಬಿಂಬವನ್ನು ರವಾನಿಸುತ್ತದೆ. ದೃಷ್ಟಿನರ (Optic Nerve)ದ ಮುಖಾಂತರ ಮಿಡಿತವನ್ನು ಮೆದುಳಿನಿಂದ ಹಿಂತಿರುಗಿಸುತ್ತದೆ. ತಲೆ ಕೆಳಗಾಗಿ ಬೀಳುವ ಪ್ರತಿಬಿಂಬವನ್ನು ಸರಿಯಾಗಿ ಕಾಣುವಂತೆ ಮಾಡುವ ಸಾಮಥ್ರ್ಯ ಮೆದುಳಿಗೆ ಇರುತ್ತದೆ. ಒಟ್ಟಿನಲ್ಲಿ ಒಬ್ಬ ವ್ಯಕ್ತಿ ಯಾವುದೇ ವಸ್ತುವನ್ನು ಸ್ಪಷ್ಟವಾಗಿ ಕಾಣಲು ಕಾರ್ನಿಯಾ, ರೆಟಿನಾ ಮತ್ತು ದೃಷ್ಟಿನರಗಳ ಕಾರ್ಯಕ್ಷಮತೆ ಅತೀ ಅಗತ್ಯ. ಯಾವುದಾದರೂ ಕಾರಣದಿಂದ ದೃಷ್ಟಿನರಕ್ಕೆ ತೊಂದರೆ ಅಥವಾ ಹಾನಿ ಆದಲ್ಲಿ ವಸ್ತು ಸರಿಯಾಗಿ ಕಾಣಿಸದು.

ಏನಿದು ಗ್ಲಾಕೋಮಾ?

ಗ್ಲಾಕೋಮಾ ಎನ್ನುವುದು ಕಣ್ಣುಗಳ ದೃಷ್ಟಿನರ (Optic Nerve)ಕ್ಕೆ ಸಂಬಂಧಿಸಿದ ರೋಗವಾಗಿದ್ದು, ನಿರಂತರವಾಗಿ ದೃಷ್ಟಿನರದ ಮೇಲೆ ಉಂಟಾಗುವ ಹಾನಿಯಿಂದಾಗಿ ದೃಷ್ಟಿಯ ಮೇಲೆ ಖಾಣಾತ್ಮಕ ಪರಿಣಾಮ ಉಂಟು ಮಾಡಬಹುದು. ಸಾಮಾನ್ಯವಾಗಿ ಗ್ಲಾಕೋಮಾ ರೋಗದ ಆರಂಭದಲ್ಲಿ ಹೊರಭಾಗದ ದೃಷ್ಟಿ (Peripheral Vision) ಕುಂಠಿತವಾಗುತ್ತದೆ. ಕ್ರಮೇಣ, ಯಾವುದೇ ಚಿಕಿತ್ಸೆ ನೀಡದಿದ್ದಲ್ಲಿ ಮಧ್ಯಭಾಗದ (Central Vision) ಕೂಡಾ ಕುಂಠಿತವಾಗಿ ಕುರುಡುತನ ಉಂಟಾಗಬಹುದು.
ಸಾಮಾನ್ಯವಾಗಿ ಹೆಚ್ಚಿನ ಜನರಲ್ಲಿ (ಶೇಕಡಾ 90) ಗ್ಲಾಕೋಮಾ ರೋಗವಿರುವವರಲ್ಲಿ ಕಣ್ಣಿನೊಳಗೆ ದ್ರವ್ಯದ ಒತ್ತಡ (Intraocular Pressure) ಹೆಚ್ಚಾಗಿರುತ್ತದೆ. ಈ ಹೆಚ್ಚಿದ ಒತ್ತಡದಿಂದಾಗಿ ದೃಷ್ಟಿನರದ ಮೇಲೆ ಹೆಚ್ಚಿನ ಹಾನಿ ಆಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಕೆಲವೊಮ್ಮೆ ಸಹಜ ಕಣ್ಣಿನ ಒತ್ತಡದಲ್ಲಿಯೂ, ಗ್ಲಾಕೋಮಾ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲವೆಂದಿಲ್ಲ. ಸಾಮಾನ್ಯವಾಗಿ ಕಣ್ಣಿನ ಒತ್ತಡ ಸುಮಾರು 18 ಣo 70mm Hg ಇರುತ್ತದೆ. ಸಹಜ ಕಣ್ಣಿನ ಒತ್ತಡದಲ್ಲಿ ಉಂಟಾಗುವ ಗ್ಲಾಕೋಮಾ ಸಾಮಾನ್ಯವಾಗಿ ಕಣ್ಣಿನ ದೃಷ್ಟಿನರಕ್ಕೆ ರಕ್ತ ಪೂರೈಕೆಯ ಅಭಾವದಿಂದ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಗ್ಲಾಕೋಮಾದಲ್ಲಿ ಎರಡು ಬಿನ್ನರೀತಿಯ ವಿಧಗಳಿವೆ. ತೆರೆದ ಕೋನದ ಗ್ಲಾಕೋಮಾ (Open Angle Glaucoma) ಮತ್ತು ಮುಚ್ಚಿದ ಕೋನದ ಗ್ಲಾಕೋಮಾ (Closed Angle Glaucoma) ತೆರೆದ ಕೋನದ ಗ್ಲಾಕೋಮಾ ದೀರ್ಘಕಾಲದ ಕಾಯಿಲೆಯಾಗಿದ್ದು, ಹಲವಾರು ವರ್ಷಗಳಿಂದ, ಹಲವಾರು ಕಾರಣಗಳು ನಿರಂತರವಾಗಿ ಕಾಡಿಕೊಂಡು ನಿಧಾನವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಮುಚ್ಚಿದ ಕೋನದ ಗ್ಲಾಕೋಮಾ ಯಾವುದೇ ಮುನ್ಸೂಚನೆ ಇಲ್ಲದೆ ಕಾಣಿಸಿಕೊಳ್ಳಬಹುದು. ಒಟ್ಟಿನಲ್ಲಿ ಕಣ್ಣಿನೊಳಗಿರುವ ದ್ರವವಾದ ‘ಆಕ್ವಯಸ್ ಹ್ಯೂಮರ್’, ಕಣ್ಣಿನೊಳಗೆ ವಿವಿಧ ಚಾನೆಲ್‍ಗಳ ಮುಖಾಂತರ ಹರಿದು ಕಣ್ಣನ್ನು ಸದಾಕಾಲ ರಕ್ಷಿಸುತ್ತದೆ. ಈ ಚಾನೆಲ್‍ಗಳು, ಮುಚ್ಚಿಕೊಂಡಾಗ ಕಣ್ಣಿನೊಳಗಿನ ಒತ್ತಡ ಜಾಸ್ತಿಯಾಗಿ ಗ್ಲಾಕೋಮಾ ರೋಗಕ್ಕೆ ಕಾರಣವಾಗಬಹುದು. ಯಾವುದೇ ನಿರ್ದಿಷ್ಟ ಕಾರಣಗಳು ಇಲ್ಲದಿದ್ದರೂ ಆನುವಂಶಿಕ ಕಾರಣ ಬಹಳ ಪ್ರಾಮುಖ್ಯ ಕಾರಣವಾಗಿದ್ದು ಹೆತ್ತವರಿಂದ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದೇ ರೀತಿ ರಾಸಾಯನಿಕದಿಂದಾಗುವ ಗಾಯ, ಅಥವಾ ಇನ್ನಿತರ, ಗಾಯ ಇಲ್ಲವೇ ಸೋಕಿನಿಂದಾಗಿ ಈ ಚಾನೆಲ್‍ಗಳು ಮುಚ್ಚಿಕೊಂಡು ಕಣ್ಣಿನ ಒತ್ತಡ ಹೆಚ್ಚಲು ಕಾರಣವಾಗಬಹುದು.
ಹೇಗೆ ಪತ್ತೆ ಹಚ್ಚುವುದು?
ಗ್ಲಾಕೋಮ ರೋಗ ಜಾಗತಿಕವಾಗಿ ಬಹಳಷ್ಟು ಸದ್ದು ಮಾಡುತ್ತಿದ್ದು, ಕುರುಡುತನಕ್ಕೆ ಎರಡನೇ ಅತಿ ದೊಡ್ಡ ಕಾರಣವಾಗಿದೆ. ಕುರುಡುತನಕ್ಕೆ ಕಾರಣವಾಗುವ ಮೊದಲ ಸ್ಥಾನ ಕಣ್ಣಿನ ಪೊರೆಗೆ (Cataract) ಸಲ್ಲುತ್ತದೆ. ಗ್ಲಾಕೋಮಾ ರೋಗವನ್ನು ಸದ್ದಿಲ್ಲದ ‘ದೃಷ್ಟಿ ಕಳ್ಳÀ’ ಎಂದೂ ಕರೆಯಾಲಾಗುತ್ತದೆ. ಯಾಕೆಂದರೆ ದೃಷ್ಟಿ ಮಾಂದ್ಯತೆ ಬರಲು ಬಹಳ ಸಮಯ ಹಿಡಿಯುತ್ತದೆ ಮತ್ತು ಹಲವಾರು ವರ್ಷಗಳ ಬಳಿಕ ನಿಧಾನವಾಗಿ ಬರುತ್ತದೆ. ಯಾವುದೇ ನೋವಿಲ್ಲದ ಕಾರಣ ಜನರಿಗರಿವಿಲ್ಲದೇ ನಿಧಾನವಾಗಿ ರೋಗದ ತೀವ್ರತೆ ಹೆಚ್ಚುತ್ತದೆ. ಒಮ್ಮೆ ದೃಷ್ಟಿ ಹೀನತೆ ಬಂದ ಬಳಿಕ ಏನೂ ಮಾಡಲಾಗದ ಕಾರಣದಿಂದ ರೋಗವನ್ನು ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಆಫ್ರಿಕಾ, ಅಮೇರಿಕಾ ದೇಶದಲ್ಲಿ ದೃಷ್ಟಿಹೀನತೆಗೆ ಗ್ಲಾಕೋಮಾ ಮುಖ್ಯ ಕಾರಣವಾಗಿದೆ. 80 ವರ್ಷಕ್ಕಿಂತ ಕೆಳಗಿನವರಲ್ಲಿ ಪ್ರತಿ 10ರಲ್ಲಿ ಒಬ್ಬರಿಗೆ ಮತ್ತು 50 ವರ್ಷಕ್ಕಿಂತ ಕೆಳಗಿನವರಲ್ಲಿ ಪ್ರತಿ 200ಕ್ಕೆ ಒಬ್ಬರಲ್ಲಿ ಗ್ಲಾಕೋಮಾ ಬರುವ ಸಾಧ್ಯತೆ ಇರುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ಅಂದತ್ಪವನ್ನು ತಡೆಯಬಹುದು.

  • ತೆರೆದ ಕೋನದ ದೀರ್ಘಕಾಲಿಕ ಗ್ಲಾಕೋಮಾ (Open angle Chronic Glaucoma) ಹೆಚ್ಚಾಗಿ ನೋವಿರುವುದಿಲ್ಲ. ನಿಧಾನವಾಗಿ ಕಣ್ಣಿನೊಳಗಿನ ಒತ್ತಡ ಜಾಸ್ತಿಯಾದಂತೆ ರೋಗ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳಬಹುದು. ನಿಧಾನವಾಗಿ ಹೊರಭಾಗದ ದೃಷ್ಟಿ (Peripheral Vision) ಕಡಮೆಯಾಗುತ್ತಾ ಬರುತ್ತದೆ. ಈ ಕಾಯಿಲೆ ಇರುವವರು ನಡೆಯುವಾಗ ನೇರ ನಡೆಯುತ್ತಾರೆ. ಆಚೆ ಈಚೆ ಇರುವ ವಸ್ತುಗಳು ಗೋಚರಿಸುವುದಿಲ್ಲ. ಇದರಿಂದ ಅವರು ಡಿಕ್ಕಿ ಹೊಡೆಯುವ ಸಂಭವ ಇರುತ್ತದೆ. ಓದುವಾಗ ಮತ್ತು ಬರೆಯುವಾಗ ಒಂದು ಬದಿಯಲ್ಲಿನ ಅಕ್ಷರ ಗೋಚರಿಸುವುದಿಲ್ಲ. ಕ್ರಮೇಣ ಸುತ್ತ ಮುತ್ತಲಿನ ದೃಷ್ಟಿ ಮಾಯಾವಾಗಿ ಕೇವಲ 5ರಿಂದ 10ಶೇಕಡಾ ನೇರ ದೃಷ್ಟಿ ಉಳಿಯುತ್ತದೆ. ಇದಕ್ಕೆ ಸುರಂಗ ದೃಷ್ಟಿ (Tunnel Vision) ಎನ್ನುತ್ತಾರೆ. ಇದು ಮುಂದುವರಿದರೆ ಪೂತಿ ಅಂಧತ್ವ ಬರುತ್ತದೆ. ಅದೇ ರೀತಿ ಕತ್ತಲಿನ ಕೋಣೆಗೆ (ಥಿಯೇಟರ್) ಹೊಕ್ಕಾಗ ಕಣ್ಣನ್ನು ಹೊಂದಾಣಿಕೆ ಮಾಡಲು ಕಷ್ಟವಾಗಬಹುದು. ಬೆಳಕಿನ ದೀಪದ ಸುತ್ತ ಕಾಮನಬಿಲ್ಲಿನಂತೆ ಬಗೆಬಗೆಯ ಬಣ್ಣದ ಗೋಲಗಳು ಗೋಚರಿಸಬಹುದು. ಈ ರೀತಿಯ ಗ್ಲಾಕೋಮಾವನ್ನು ಔಷಧಿಗಳ ಮುಖಾಂತರ ಕಣ್ಣಿನೊಳಗಿನ ಒತ್ತಡ ಕಡಮೆ ಮಾಡಿ ಗುಣಪಡಿಸಲಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಮುಖಾಂತರ ಕಣ್ಣಿನ ಒತ್ತಡ ಕಡಮೆ ಮಾಡಿ ಗುಣಪಡಿಸಲಾಗುತ್ತದೆ. ಸಾಮಾನ್ಯವಾಗಿ ಕಣ್ಣಿನ ಒತ್ತಡ ಕಡಮೆ ಮಾಡಿ ಗುಣಪಡಿಸಲಾಗುತ್ತದೆ. ಸಾಮಾನ್ಯವಾಗಿ ಕಣ್ಣಿನ ಒತ್ತಡ 21mm Hg or 2.8 ka pa ಇದರ ಒಳಗೆ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಒತ್ತಡ ಜಾಸ್ತಿಯಾಗಿ ಕಣ್ಣಿನ ದೃಷ್ಟಿ ನರಕ್ಕೆ ಹಾನಿಯಾಗಿ ನಿಧಾನವಾಗಿ ಅಂದತ್ವ ಬರುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಕಣ್ಣಿನ ಒತ್ತಡ 20mm Hgಗಿಂತಲೂ ಕಡಿಮೆ ಇದ್ದರೂ ಗ್ಲಾಕೋಮಾ ಬರಬಹುದು. ಇದನ್ನು ಸಹಜ ಒತ್ತಡದ ಗ್ಲಾಕೋಮಾ ಎಂದು ಕರೆಯುತ್ತಾರೆ. ಈ ವಿಶೇಷ ಸಂದರ್ಭಗಳಲ್ಲಿ ಕಣ್ಣಿನ ದೃಷ್ಟಿನರಕ್ಕೆ ರಕ್ತ ಪೂರೈಸುವ ರಕ್ತನಾಳಕ್ಕೆ ಹಾನಿಯಾಗಿ ಕ್ರಮೇಣ ದೃಷ್ಟಿ ನರಕ್ಕೂ ಹಾನಿಯಾಗಿ, ಅಂದತ್ವ ಬರುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಕಣ್ಣಿನ ಒತ್ತಡ ಜಾಸ್ತಿ ಇದ್ದರೂ ಗ್ಲಾಕೋಮಾ ಬರದೇ ಇರಲೂಬಹುದು. ಇದನ್ನು ಕಣ್ಣಿನ ರಕ್ತದೊತ್ತಡ (Ocular Hypertensim) ಎಂದು ಕರೆಯುತ್ತಾರೆ. ಒಟ್ಟಿನಲ್ಲಿ ಕಣ್ಣಿನ ದ್ರವ್ಯದ ಒತ್ತಡ ಹತೋಟಿಯಲಿದ್ದಲ್ಲಿ ಗ್ಲಾಕೋಮಾ ರೋಗ ಬರುವ ಸಾಧ್ಯತೆ ಕಡಿಮೆ ಇರುತ್ತದೆ.
  • ಮುಚ್ಚಿದ ಕೋನದ ಗ್ಲಾಕೋಮಾ (Closed Angle Glaucoma) ಇದು ಒಂದು ವೈದ್ಯಕೀಯ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗವಾಗಿದ್ದು, ತಕ್ಷಣ ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ. ಅತಿಯಾದ ಕಣ್ಣು ನೋವು, ತಲೆಸುತ್ತು, ಕಣ್ಣಿನ ಸುತ್ತ ನೋವು, ವಾಕರಿಕೆ, ವಾಂತಿ ಇತ್ಯಾದಿ ಇರಬಹುದು. ಕಣ್ಣು ಕೆಂಪಾಗುವುದು, ಊದಿಕೊಳ್ಳುವುದು ಇರಬಹುದು. ಕಣ್ಣಿನ ಒತ್ತಡ ತೀವ್ರವಾಗಿ ಏರಿಕೆಯಾಗಿರುತ್ತದೆ. ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆ ಮಾಡದಿದ್ದಲ್ಲಿ ದೃಷ್ಟಿನರಕ್ಕೆ ಹಾನಿಯಾಗಿ, ಶಾಶ್ವತ ಅಂದತ್ವ ಬರುವ ಸಾಧ್ಯತೆ ಇರುತ್ತದೆ.
    ಯಾವಾಗ ಕಣ್ಣಿನ ವೈದ್ಯರಲ್ಲೆ ಕಾಣಿಸಿಕೊಳ್ಳಬೇಕು ?
  • ಹತ್ತಿರದ ಮತ್ತು ದೂರದ ವಸ್ತುಗಳನ್ನು ನೋಡಲು ಕಷ್ಟವಾಗುವುದು.
  • ಕತ್ತಲೆ ಕೋಣೆಗೆ ಹೋದಾಗ ದೃಷ್ಟಿ ಹೊಂದಾಣಿಕೆ ಕಷ್ಟವಾಗುವುದು.
  • ಕಣ್ಣಿನ ಸುತ್ತ ಪದೇ ಪದೇ ನೋವು.
  • ಎಲ್ಲವೂ ಎರಡೆರಡಾಗಿ ಗೋಚರಿಸುವುದು.
  • ಪದೇ ಪದೇ ಕಣ್ಣು ಒದ್ದೆಯಾಗಿ, ಹೆಚ್ಚು ಕಣ್ಣೀರು ಕಾರಣವಿಲ್ಲದೆ ಒಸರುವುದು.
  • ವಸ್ತುಗಳಲ್ಲಿ ಮಂದತ್ವ ಮತ್ತು ಭೂತಾಕಾರದ ಪ್ರತಿಬಿಂಬ ಗೋಚರಿಸುವುದು.
  • ಕಣ್ಣು ತುರಿಕೆ ಅಥವಾ ಕಣ್ಣು ಉರಿಯುವುದು, ಶುಷ್ಕ ಕಣ್ಣು.
  • ತನ್ನಿಂತಾನೇ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುವುದು.
  • ವಸ್ತುವಿನ ಅಥವಾ ಬೆಳಕಿನ ಸುತ್ತ ಗೋಲಾಕಾರ ಅಥವಾ ಕಾಮನಬಿಲ್ಲಿನ ರೀತಿ ಬಣ್ಣಗಳು ಕಾಣಿಸಕೊಳ್ಳವುದು.
  • ಎಲ್ಲವೂ ಸರಿಯಾಗಿದ್ದು, ಕಾರಣವಿಲ್ಲದೆ ಒಂದು ಕಣ್ಣುಗಳಲ್ಲಿ ಏನೂ ಕಾಣಿಸದಿರುವುದು.
    ಯಾರಿಗೆ ಗ್ಲಾಕೋಮಾ ಬರುವ ಸಾಧ್ಯತೆ ಹೆಚ್ಚಿರುತ್ತದೆ?
  • ನೀವು 40 ವರ್ಷಗಳಿಗಿಂತ ಮೇಲ್ಪಟ್ಟರವರಾಗಿದ್ದು ನೀವು ಯಾವುದಾದರೂ ಜೀವನ ಶೈಲಿಗೆ ಸಂಬಂಧಪಟ್ಟ ರೋಗಗಳಾದ ರಕ್ತದೊತ್ತಡ, ಮಧುಮೇಹ ರೋಗದಿಂದ ಬಳಲುತ್ತಿದ್ದಲ್ಲಿ ನಿಮಗೆ ಗ್ಲಾಕೋಮಾ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ.
  • ನೀವು ರಸದೂತಗಳ ವೈಫರೀತ್ಯದ ರೋಗಗಳಿಂದ ಬಳಲುತ್ತಿದ್ದಲ್ಲಿ, ನಿಮಗೆ ಗ್ಲಾಕೋಮ ಬರುವ ಸಾಧ್ಯತೆ ಇರುತ್ತದೆ. ಉದಾಹರಣೆ, ಥೈರಾಯ್ಡು ಸಂಬಂಧಿ ರೋಗಗಳು.
  • ನಿಮ್ಮ ಕುಟುಂಬದಲ್ಲಿ ಯಾರಾದರೂ ಗ್ಲಾಕೋಮಾ ರೋಗದಿಂದ ಬಳಲುತ್ತಿದ್ದಲ್ಲಿ, ನಿಮಗೆ ಗ್ಲಾಕೋಮಾ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅನುವಂಶಿಕವಾಗಿ ಗ್ಲಾಕೋಮಾ ಬರಬಹುದು.
  • ಅತಿಯಾದ ಸ್ಥಿರಾಯ್ಡು ಸೇವನೆ, ಅತಿಯಾದ ಧೂಮಪಾನ ಮತ್ತು ಮದ್ಯಪಾನ ಕೂಡಾ ಗ್ಲಾಕೋಮಾ ರೋಗಕ್ಕೆ ಕಾರಣವಾಗಬಹುದು.
  • ನೀವು ಅತಿಯಾದ ರಕ್ತಹೀನತೆ ಹೊಂದಿದ್ದರೆ ಅಥವಾ ಯಾವಾತ್ತಾದರೂ ಕಣ್ಣಿಗೆ ರಾಸಾಯನಿಕಗಳಿಂದ ಗಾಯವಾಗಿದ್ದರೆ ಅಥವಾ ಇನ್ನಾವುದೇ ಅಪಘಾತಗಳಿಂದ ಶಾಶ್ವತ ಗಾಯವಾಗಿದ್ದರೆ ಗ್ಲಾಕೋಮಾ ಬರುವ ಸಾಧ್ಯತೆ ಇರಬಹುದು.
  • ಹತ್ತಿರದ ದೃಷ್ಟಿ ಮಾಂದ್ಯತೆ (Near Sightedness) ಮತ್ತು ತೆಳ್ಳಗಿನ ಕಾರ್ನಿಯಾ ಇರುವವರಿಗೂ ಗ್ಲಾಕೋಮಾ ಬರುವ ಸಾಧ್ಯತೆ ಹೆಚ್ಚಿದೆ ಎಂದು ಅಂಕಿ ಅಂಶಗಳು ತಿಳಿಸುತ್ತದೆ.
    ಹೇಗೆ ಪತ್ತೆ ಹಚ್ಚಬಹುದು?
    ಕಣ್ಣಿನ ತಜ್ಞರು ಈ ರೋಗವನ್ನು ಬಹಳ ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಟೋನೋಮೆಟ್ರಿ (Tonometry) ಮುಖಾಂತರ ಕಣ್ಣಿನ ಒತ್ತಡ ಒಪ್ತಾಲ್ಮೋಸ್ಕೋಪಿ (Ophthalmoscope) ಮಖಾಂತರ ಕಣ್ಣಿನ ದೃಷ್ಟಿ ನರಗಳನ್ನು, ಪೆರಿಮೆಟ್ರಿ (Perimetry) ಮುಖಾಂತರ ಕಣ್ಣಿನ ದೃಷ್ಟಿಯ ಸುತ್ತಳತೆಯನ್ನು ಮತ್ತು ಫಂಡೋಸ್ಕೋಪಿ (Fundoscopy) ಮುಖಾಂತರ ಅಕ್ಷಿಪಟಲವನ್ನು ಪರೀಕ್ಷಿಸಿ ರೋಗವನ್ನು ಪತ್ತೆ ಹಚ್ಚಲಾಗುತ್ತದೆ. ಮೇಲೆ ಕಾಣಿಸಿದ ಯಾವುದೇ ಲಕ್ಷಣಗಳು ನಿಮಗೆ ಕಾಣಿಸಿಕೊಂಡಲ್ಲಿ ತಕ್ಷಣ ಕಣ್ಣಿನ ತಜ್ಞರಿಗೆ ತೋರಿಸಿ ಸೂಕ್ತ ಸಲಹೆ ಮಾರ್ಗದರ್ಶನ ಮತ್ತು ಚಿಕಿತ್ಸೆ ಅತೀ ಅಗತ್ಯ. 50 ವರ್ಷಗಳ ಬಳಿಕ ಪ್ರತಿ ವರ್ಷ ಯಾವುದೇ ನೋವಿಲ್ಲದಿದ್ದರೂ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡಲ್ಲಿ ಮುಂಬರುವ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
    ಚಿಕಿತ್ಸೆ ಹೇಗೆ?
    ತೆರೆದ ಕೋನದ ಗ್ಲಾಕೋಮಾವನ್ನು ಹೆಚ್ಚಾಗಿ ಔಷಧಿಗಳಿಂದ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ಲೇಸರ್ ಚಿಕಿತ್ಸೆಯ ಮುಖಾಂತರ ಒತ್ತಡವನ್ನು ಕಡಿಮೆಗೊಳಿಸಬಹುದು. ಮುಚ್ಚಿದ ಕೋನದ ಗ್ಲಾಕೋಮಾ ರೋಗವನ್ನು ಶಸ್ತ್ರ ಚಿಕಿತ್ಸೆ ಮುಖಾಂತರ ಗುಣಪಡಿಸಲಾಗುತ್ತದೆ. ನಿಮ್ಮ ದೇಹ ಸ್ಥಿತಿ, ರೋಗದ ಲಕ್ಷಣ ಮತ್ತು ತೀವ್ರತೆಯನ್ನು ಕೂಲಂಕುಷವಾಗಿ ವೈದ್ಯರು ಅಭ್ಯಸಿಸಿ ನಿಮಗೆ ನೀಡಬೇಕಾದ ಔಷಧಿ ಮತ್ತು ಶಸ್ತ್ರ ಚಿಕಿತ್ಸೆಯ ನಿರ್ದಾರವನ್ನು ವೈದ್ಯರೇ ತೆಗೆದುಕೊಳ್ಳುತ್ತಾರೆ. ಆರಂಭಿಕ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಿದ್ದಲ್ಲಿ ಗ್ಲಾಕೋಮಾ ರೋಗವನ್ನು ಖಂಡಿತವಾಗಿಯೂ ಗುಣಪಡಿಸಬಹುದು. ಆದರೆ ಒಮ್ಮೆ ಗ್ಲಾಕೋಮಾ ರೋಗದಿಂದ ದೃಷ್ಟಿನರ ಹಾನಿಯಾಗಿ, ಅಂದತ್ವ ಬಂದ ಬಳಿಕ ಯಾವುದೇ ಚಿಕಿತ್ಸೆಗೂ ಸ್ಪಂದಿಸಲ್ಲಿಕ್ಕಿಲ್ಲ. ಒಟ್ಟಿನಲ್ಲಿ ರೋಗದ ಲಕ್ಷಣಗಳು ಕಾಣಿಸಿದ ಕೂಡಲೇ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ತೆಗೆದುಕೊಳ್ಳುವುದರಲ್ಲಿಯೇ ಜಾಣತನ ಅಡಗಿದೆ.
  • ಕೊನೆ ಮಾತು:
    ಗ್ಲಾಕೋಮಾ ಎನ್ನುವುದು ಮಾರಣಾಂತಿಕ ರೋಗವಲ್ಲದಿದ್ದರೂ ಸರಿಯಾಗಿ ಚಿಕಿತ್ಸೆ ಸಕಲ ನೀಡದಿದ್ದಲ್ಲಿ ಶಾಶ್ವತವಾಗಿ ಅಂದತ್ವವನ್ನು ಉಂಟು ಮಾಡಬಹುದು. ಜನರಲ್ಲಿ ಈ ಗ್ಲಾಕೋಮಾ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಮತ್ತು ಹೆಚ್ಚು ನೋವಿಲ್ಲದೆ ಸದ್ದಿಲ್ಲದೆ ನಿಧಾನವಾಗಿ ದೃಷ್ಟಿನರಕ್ಕೆ ಹಾನಿ ಮಾಡುವ ಕಾರಣದಿಂದಾಗಿ ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ. ವಿಶ್ವಾದಾದ್ಯಂತ ಕೊಟ್ಯಾಂತರ ಜನರು ಈ ರೋಗಕ್ಕೆ ಪ್ರತಿ ವರ್ಷ ತುತ್ತಾಗುತ್ತಿದ್ದು, ಶಾಶ್ವತ ಅಂದತ್ವದಿಂದಾಗಿ ಸಾಕಷ್ಟು ಮಾನವ ಸಂಪನ್ಮೂಲದ ನಾಶವಾಗುತ್ತಿದೆ. ಈ ಕಾರಣದಿಂದಲೇ ಜನರಲ್ಲಿ ಗ್ಲಾಕೋಮಾ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 6 ರಿಂದ 12ರ ವರಗೆ ಪ್ರತಿ ವರ್ಷ ವಿಶ್ವ ಗ್ಲಾಕೋಮಾ ಸಪ್ತಾಹವನ್ನು ವಿಶ್ವ ಆರೋಗ್ಯ ಸಂಸ್ಥೆ ಆಚರಿಸುತ್ತದೆ. ತಡೆಗಟ್ಟಬಹುದಾದ ರೋಗಗಳಲ್ಲಿ ಒಂದಾದ ಈ ಗ್ಲಾಕೋಮಾ ರೋಗವನ್ನು ನಾವೆಲ್ಲ ಸಾಕಷ್ಟು ಮುಂಜಾಗರೂಕತೆ ವಹಿಸಿ ತಡೆಗಟ್ಟಿದ್ದಲ್ಲಿ ಮಾನವ ಸಂಪನ್ಮೂಲದ ಸೋರಿಕೆಯನ್ನು ತಡೆಗಟ್ಟಬಹುದು. ಮಾನತ್ವದ ಆನಂದವನ್ನು ಸವಿಯಲು ಮತ್ತು ಆಂತರಿಕ ಸೌಂದರ್ಯವನ್ನು ಸವಿಯಲು ಹೇಗೆ ಮನುಷ್ಯತ್ವದ ಕಣ್ಣಿನ ದೃಷ್ಟಿ ಅಗತ್ಯಯೋ, ಅದೇ ರೀತಿ ಬಾಹ್ಯ ಜಗತ್ತಿನ ಸೌಂದರ್ಯವನ್ನು ಸವಿಯಲು ಬಾಹ್ಯ ದೃಷ್ಟಿಯ ಕಣ್ಣಿನ ಅಗತ್ಯವೂ ನಮಗೆ ಇರುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗ್ರತಿ ವಹಿಸಿ ಮಾನವೀಯತೆ, ಕಳಕಳಿಯಿಂದ ಬದುಕಿದ್ದಲ್ಲಿ ಆಂತರಿಕ ಮತ್ತು ಬಾಹ್ಯ ಸೌಂದರ್ಯವೆರಡನ್ನೂ ಆನಂದಿಸಿ ನೂರು ಕಾಲ ಸುಖವಾಗಿ ಬದುಕಬಹುದು.

ಡಾ|| ಮುರಲೀ ಮೋಹನ್ ಚೂಂತಾರು
BDS,MDS,DNB,MBA,MOSRCSEd
ಸುರಕ್ಷಾದಂತ ಚಿಕಿತ್ಸಾಲಯ

Related Posts

Leave a Reply

Your email address will not be published.