ಬೈಂದೂರು ಉತ್ಸವ 2026 ಉಪ್ಪುಂದ ಗ್ರಾಮೋತ್ಸವ ಆರೋಗ್ಯ ಮೇಳ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ
ಉಪ್ಪುಂದ,
2026ರಲ್ಲಿ ಜ.24,25,26ರಂದು ನಡೆಯುವ ಬೈಂದೂರು ಉತ್ಸವದ ಅಂಗವಾಗಿ ಗ್ರಾ.ಪಂ. ಉಪ್ಪುಂದ, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಉಡುಪಿ ಜಿಲ್ಲೆ ದೃಷ್ಟಿ ಪ್ರದಾನ ಯೋಜನೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಲಯನ್ಸ್ ಕ್ಲಬ್ ಎಂಜಿನಿಯರ್ಸ್ ಕುಂದಾಪುರ, ಲಯನ್ಸ್ ಕ್ಲಬ್ ಕೌನ್ ಕುಂದಾಪುರ, ನಮ್ಮಭೂಮಿ ಸಂಸ್ಥೆ ಕನ್ಯಾನ ಹಟ್ಟಿಯಂಗಡಿ, ಸ.ಮಾ.ಹಿ.ಪ್ರಾ. ಶಾಲೆ ಉಪ್ಪುಂದ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಸರಕಾರಿ ಆಯುಷ್ ಚಿಕಿತ್ಸಾಲಯ ಕಾಲೋಡು, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆ ಮುದ್ದುಮನೆ ಶಿರೂರು, ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಡಿ.14 ರಂದು ಸ.ಮಾ.ಹಿ.ಪ್ರಾ. ಶಾಲೆ ಉಪ್ಪುಂದದಲ್ಲಿ ನಡೆಯಿತು.

ಬೈಂದೂರು ಉತ್ಸವ ಅಧ್ಯಕ್ಷ ಉಪ್ಪುಂದ ಬಿ. ಎಸ್. ಸುರೇಶ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಶಾಸಕ ಗುರುರಾಜ್ ಗಂಟಿಹೊಳೆ ಬೈಂದೂರು ಉತ್ಸವದ ಮೂಲಕ ಬೈಂದೂರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುಂತೆ ಮಾಡುವುದು, ಕ್ಷೇತ್ರದ ಜನರಿಗೆ ಸರಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸಿ, ಇನ್ನಷ್ಟು ಯೋಜನೆಗಳ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವಿಶೇಷ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊಂದಿದ್ದು ಪ್ರಾರಂಭದಲ್ಲಿ ಇದಕ್ಕೆ ಹಿರಿಯ ನಾಗರಿಕರ,ಮಹಿಳೆಯರ ಮತ್ತು ಮಕ್ಕಳಿಗೆ ಆರೋಗ್ಯ ಸೇವೆ ನೀಡಲು ಆರೋಗ್ಯ ಮೇಳದ ಮೂಲಕ ಚಾಲನೆ ನೀಡಲಾಗಿದೆ
ಎಂದರು.
ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರದ ಜನರು ಆರೋಗ್ಯವನ್ನು ಕಾಪಾಡಿಕೊಳ್ಳಲು ಶಾಸಕರು ಆರೋಗ್ಯ ಮೇಳ ಆಯೋಜಿಸಿದ್ದು ಕ್ಯಾನ್ಸರ್, ಗರ್ಭಕೋಶ ಸಮಸ್ಯೆಯಂತಹ ಕಾಯಿಲೆಗಳ ತಪಾಸಣೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಇದರ ಸದುಪಯೋಗ ಗ್ರಾಮದ ಜನರು ಪಡೆದುಕೊಳ್ಳಬೇಕು ಎಂದರು.
ಕಾಲ್ತೋಡು ಸರಕಾರಿ ಆಯುಷ್ ಚಿಕಿತ್ಸಾಲಯ ವೈದ್ಯಾಧಿಕಾರಿ ವೀಣಾ ಕಾರಂತ ಮಾತನಾಡಿ ಆಯುರ್ವೇದ ಎನ್ನುವುದು ಜೀವನ ಪದ್ಧತಿ, ಇದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾರಕ ಕಾಯಿಲೆಗಳಿಂದ ಮುಕ್ತರಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಆಯುರ್ವೇದ ಮಹತ್ವ ಹಾಗೂ ಇಂದಿನ ಪಾಸ್ಟ್ ಫುಡ್ ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಉಪ್ಪುಂದ ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ಕೆ.ಎಂ.ಸಿ., ಮಣಿಪಾಲ ಆಸ್ಪತ್ರೆಯ ವೈದ್ಯಾಧಿಕಾರಿ ರಾಧಿಕಾ, ಮಕ್ಕಳ ವಿಭಾಗದ ಸಂಯೋಜಕ ಶ್ರಿನಿವಾಸ ಗಾಣಿಗ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಎನ್. ಸಿ.ಡಿ. ವೈದ್ಯಾಧಿಕಾರಿ ನಿವೇದಿತಾ, ಶಿರೂರು ಮುದ್ದು ಮನೆ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಶಂಕರ್ ಶೆಟ್ಟಿ, ನೇತ್ರಾ ತಜ್ಞ ಮನೋಜ್ಞ ಭಟ್, ಕುಂದಾಪುರ ಲಯನ್ಸ್ ಕ್ಲಬ್ ಕ್ರೌನ್ ಅಧ್ಯಕ್ಷ ಡಾ. ನಾಗರಾಜ, ಉಪ್ಪುಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸುಧಾಕರ ದೇವಾಡಿಗ, ಕುಂದಾಪುರ ಲಯನ್ಸ್ ಕ್ಲಬ್ ಇಂಜಿನಿಯರ್ ಇಕ್ಬಾಲ್ ಪಿ.ಎಂ., ಉಪ್ಪುಂದ ವಿಶೇಷ ಚೇತನರ ಮತ್ತು ಪಾಲಕರ ಸಮಿತಿಯ ಅಧ್ಯಕ್ಷ ಮಹಾಬಲೇಶ್ವರ ಭಟ್ಟ್, ಉಪ್ಪುಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಕೌವಟೇಕರ್ ಮೊದಲಾದವರು ಉಪಸ್ಥಿತರಿದ್ದರು.
ಉಪ್ಪುಂದ ಎಸ್.ಎಲ್.ಆರ್.ಎಂ. ಘಟಕದ ಮೇಲ್ವಿಚಾರಕಿ ಜಾನಕಿ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ರೇಖಾ ನಿರೂಪಿಸಿದರು. ಜಲಜಾ ಕುಂದರ್ ವಂದಿಸಿದರು.


















