ಬಹರೈನ್: ದ್ವೀಪದ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡ “ವೈ.ಎಂ.ಸಿ ಟ್ರೋಫಿ-2023”

ಬಹರೈನ್ ದ್ವೀಪದ ವೈ.ಎಂ.ಸಿ ಸಂಘಟನೆಯು ‘ನಿಸರ್ಗ ಬಹರೈನ್”ನ ಆಶ್ರಯದಲ್ಲಿ ಜುಫೇರ್ ಪರಿಸರದಲ್ಲಿರುವ ಅಲ್ ನಜ್ಮಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟವೊಂದನ್ನು ಆಯೋಜಿಸಿದ್ದು, ಆಟಗಾರರೂ ವೀಕ್ಷಕರೂ ಸೇರಿದಂತೆ ದ್ವೀಪದ ನೂರಾರು ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಾಟವನ್ನು ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ದ್ವೀಪದ ಪ್ರಸಿದ್ಧ ಸಂಸ್ಥೆಯಾದ ಆರ್ & ಆರ್ ಸಂಸ್ಥೆಯು ಈ ಪಂದ್ಯಾಟದ ಮುಖ್ಯ ಪ್ರಾಯೋಜಕರಾಗಿ ಸಹಕರಿಸಿದ್ದರು.30 ಗಜಗಳ ಮೃದು ಚೆಂಡಿನ ಈ ಕ್ರಿಕೆಟ್ ಪಂದ್ಯಾಟದಲ್ಲಿ ದ್ವೀಪದ ಕರ್ನಾಟಕ ಮೂಲದ ಪುರುಷರ 14 ಹಾಗು ವನಿತೆಯರ 4 ಬಲಿಷ್ಠ ತಂಡಗಳು ಸೆಣೆಸಾಡಿದ್ದು ಪುರುಷರ ವಿಭಾಗದಲ್ಲಿ ಸಾಚಿ ತಂಡವು ಪಂದ್ಯಾಟದ ಚಾಂಪಿಯನ್ಸ್ ಆಗಿ ಮೂಡಿಬಂದರೆ, ಕುಡ್ಲ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನ, ಆರ್ ಡಿ ಗ್ರೂಪ್ ತೃತೀಯ ಸ್ಥಾನ, ಸೂಪರ್ನೋವಾಸ್ ತಂಡ ನಾಲ್ಕನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ವನಿತಾ ವಿಭಾಗದಲ್ಲಿ ಹೆಚ್ ಪಿಸಿಎ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ. ಜೈ ಕರ್ನಾಟಕ ತಂಡವು ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಪುರುಷರ ವಿಭಾಗದಲ್ಲಿ ಸೂರಜ್ ಶೆಟ್ಟಿ ಸರಣಿ ಶ್ರೇಷ್ಠ ಹಾಗು ಅತ್ಯುತ್ತಮ ಎಸೆತಗಾರ ಪ್ರಶಸ್ತಿಗೆ ಭಾಜನರಾದರೆ, ನಿತಿನ್ ಟಿ.ಪಿ ಅತ್ಯುತ್ತಮ ದಾಂಡಿಗ, ರಿಯಾಜ್ ಅತ್ಯುತ್ತಮ ಕ್ಷೇತ್ರ ರಕ್ಷಕ, ಅನಿಲ್ ಕುಮಾರ್ ಅತ್ಯುತ್ತಮ ವಿಕೆಟ್ ಕೀಪರ್, ವಿಪಿನ್ ರಾಜ್ ಅಂತಿಮ ಪಂದ್ಯಾಟದ ಪಂದ್ಯ ಶ್ರೇಷ್ಠ, ಮಹಿಳೆಯರ ವಿಭಾಗದಲ್ಲಿ ಕಬಿಯಾ ಬದೋನಿ ಸರಣಿ ಶ್ರೇಷ್ಠ, ಅತ್ಯುತ್ತಮ ದಾಂಡಿಗಿತ್ತಿ ,ಅತ್ಯುತ್ತಮ ವಿಕೆಟ್ ಕೀಪರ್, ಅಂತಿಮ ಪಂದ್ಯಾಟದ ಪಂದ್ಯ ಶ್ರೇಷ್ಠ ಪ್ರಶಸ್ತಿ ಯನ್ನು ತಮ್ಮ ಮುಡಿಗೇರಿಸಿಕೊಂಡರೆ, ರೇಶಲ್ ಅತ್ಯುತ್ತಮ ಬೌಲರ್, ಸ್ವರ್ಣ ಅತ್ಯುತ್ತಮ ಕ್ಷೇತ್ರ ರಕ್ಷಕಿ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡರು.

ಮನೋಜ್ ಶೆಟ್ಟಿ, ಸಂಪತ್ ಶೆಟ್ಟಿ ಹಾಗು ಯಜ್ನೇಶ್ ಪೂಜಾರಿ ಈ ಪಂದ್ಯಾಟವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದು, ಈ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ತಾಯ್ನಾಡಿನಿಂದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ವಿಜೇತ ಪೆÇ್ರೀ ಕಬ್ಬಡಿ ಖ್ಯಾತಿಯ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ ಸುಕೇಶ್ ಹೆಗ್ಡೆ ಹಾಗೂ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ವಿಜೇತೆ ಅಂತರಾಷ್ಟ್ರೀಯ ಪವರ್ ಲಿಪ್ಟರ್ ಕುಮಾರಿ ಬೋಳ ಅಕ್ಷತಾ ಪೂಜಾರಿಯವರು ವಿಶೇಷವಾಗಿ ಪಾಲ್ಗೊಂಡು ಕ್ರೀಡಾಕೂಟಕ್ಕೆ ಹೆಚ್ಚಿನ ಮೆರುಗು ನೀಡಿದರು.

ವಿಜೇತರೆಲ್ಲರಿಗೂ ಟ್ರೋಫಿಗಳನ್ನು ಹಾಗು ನಗದು ಬಹುಮಾನವನ್ನು ನೀಡಲಾಯಿತು. ಈ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ “ಶೈನಿಂಗ್ ಸ್ಟಾರ್ ” ನ್ರತ್ಯ ತಂಡದವರಿಂದ ಪ್ರೀತಮ್ ಆಚಾರ್ಯರವರ ನ್ರತ್ಯ ನಿರ್ದೇಶನದಲ್ಲಿ ವೈವಿಧ್ಯಮಯ ನ್ರತ್ಯಗಳು, ನಾಸಿಕ್ ಡೋಲ್ ತಂಡದವರ ಲಯಬದ್ಧವಾದ ಡೋಲು ಬಾರಿಸುವಿಕೆ ಹಾಗು ಮೈನವಿರೇಳಿಸುವ ಬೆಂಕಿಯಾಟದ ಪ್ರದರ್ಶನ ಕ್ರೀಡಾಂಗಣದಲ್ಲಿ ಪ್ರದರ್ಶನಗೊಂಡು ಕ್ರೀಡಾಪ್ರೇಮಿಗಳ ಮನಸೂರೆಗೊಂಡಿತು.

ಈ ಪಂದ್ಯಾಟದ ತೀರ್ಪುಗಾರರಾಗಿ ಕಮಲ್ ಹಾಗೂ ಸುರೇಂದ್ರರವರು ಕಾರ್ಯನಿರ್ವಹಿಸಿದ್ದರೆ, ವೀಕ್ಷಕ ವಿವರಣೆಗಾರರಾಗಿ ಮನ್ಸೂರ್ ಹಾಗೂ ಫ್ರೀಡಾ ಸಹಕರಿಸಿದರು. ದನುಷ್ ಕುಲಾಲ್, ಶಶಿಕಾಂತ್ ಆಚಾರ್ಯ, ರತೀಶ್ ಭಂಡಾರಿ, ದೀಕ್ಷೀತ್ ಸಾಲ್ಯಾನ್, ಸಾಗರ್ ಶೆಟ್ಟಿ , ನವೀನ್ ಕುಮಾರ್, ಶಶಿಧರ್ ಕುಲಾಲ್, ಭರತ್ ನಾಯಕ್, ಅತುಲ್ ಪೂಜಾರಿ, ವಿವಿನ್ ಜೀತ್ ಡಿಸೋಜಾ, ಶರಣ್ ರಾವ್, ನಿತ್ಯ ನಾಯಕ್, ಪಾಲ್ಗೊಂಡಿದ್ದು, ಪಂದ್ಯಾಟವು ಯಶಸ್ವಿಯಾಗಿ ಜರುಗುವಲ್ಲಿ ಸಹಕರಿಸಿದ್ದರು.

ತಡ ರಾತ್ರಿ ಜರುಗಿದ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಬಹರೈನ್ ಕ್ರಿಕೆಟ್ ಮಂಡಳಿಯ ಸಲಹಾ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಮನ್ಸೂರ್, ಕನ್ನಡ ಸಂಘದ ಅಧ್ಯಕ್ಷರಾದ ಅಮರ್ ನಾಥ್ ರೈ, ಆರ್ & ಆರ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ರೋಯ್ ಸ್ಟನ್ ಫೆರ್ನಾಂಡಿಸ್ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ವೆಬ್ ಟ್ರಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ವೆಂಕಟೇಶ್ ಭಟ್, ಇಂಡಿಯನ್ ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಆನಂದ್ ಲೋಬೊ, ಬಹರೈನ್ ಬಿಲ್ಲವಾಸ್ ನ ಅಧ್ಯಕ್ಷರಾದ ಹರೀಶ್ ಪೂಜಾರಿ, ಬಹರೈನ್ ಬಿಲ್ಲವಾಸ್‍ನ ಮಾಜಿ ಅಧ್ಯಕ್ಷರಾದ ಅಜಿತ್ ಬಂಗೇರ, ಬಹರೈನ್ ಕುಲಾಲ್ಸ್ ನ ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಮಾಣಿಲ, ರೇಡಿಯೋ ನಿರೂಪಕ ಕಮಲಾಕ್ಷ ಅಮೀನ್ ಮುಂತಾದವರು ಉಪಸ್ಥಿತರಿದ್ದರು. ರೂಪೇಶ್ ಸುವರ್ಣ ರವರು ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು.

Related Posts

Leave a Reply

Your email address will not be published.