ಕಲ್ಯಾಣ ಕ್ರಾಂತಿಯ ಅನೈತಿಕ ಪೋಲೀಸುಗಿರಿ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ನಾಲ್ಕರ್ ಕ್ರಾಸ್‌ನ ಲಾಡ್ಜ್‌ನಲ್ಲಿ ತಂಗಿದ್ದ ಶಿರಸಿ ತಾಲೂಕಿನ ಹಿಂದೂ ಗಂಡು, ಮುಸ್ಲಿಂ ಯುವತಿಯ ಮೇಲೆ ಏಳು ಮಂದಿ ಅನೈತಿಕ ಪೋಲೀಸುಗಿರಿ ನಡೆಸಿ ಹಲ್ಲೆ ನಡೆಸಿದ್ದು ನಾನಾ ತಿರುವು ಕಾಣುತ್ತಿದೆ.

ಕಳೆದ ವಾರ ಮಂಗಳೂರಿನಲ್ಲಿ ಮತ್ತು ಉಡುಪಿಯಲ್ಲಿ ಹಿಂದೂ ಹೆಣ್ಣು ಮುಸ್ಲಿಂ ಗಂಡು ಕೂಡಿ ಮಾತನಾಡಿದರು ಎಂದು ಹಿಂದೂ ಹೆಸರಿನಲ್ಲಿ ಕೆಲವರ ಗುಂಪು ಹಲ್ಲೆ ಮಾಡಿತ್ತು. ಅದಕ್ಕಿಂತ ಘೋರವಾದುದು ಬೆಳಗಾವಿಯ ಘಟನೆ. ಸರಕಾರಿ ಕಚೇರಿಯಲ್ಲಿ ಆಗಬೇಕಾದ ಕೆಲಸಕ್ಕೆ ಬಂದಿದ್ದ ಅಣ್ಣ ತಂಗಿಯನ್ನು ಅನ್ಯ ಕೋಮಿನವರು ಎಂದು ಭಾವಿಸಿ ಅನೈತಿಕ ಪೋಲೀಸುಗಿರಿ ನಡೆಸಲಾಗಿದೆ. ಇಲ್ಲಿ ದುರುಳರಿಗೆ ಮಾಹಿತಿ ನೀಡಿದವನು ಒಬ್ಬ ಆಟೋದವನು. ಹಾನಗಲ್ ಅಕ್ಕಿಆಲೂರ ಪ್ರಕರಣದಲ್ಲೂ ಆಟೋ ಚಾಲಕನ ಮಾತು ಕೇಳಿ ಏಳು ಮಂದಿ ವಸತಿ ಗೃಹಕ್ಕೆ ನುಗ್ಗಿ ಅನೈತಿಕ ಪೋಲೀಸುಗಿರಿ ನಡೆಸಿದ್ದಾರೆ. ಕೆಲವು ಆಟೋರಿಕ್ಷಾಗಳವರು ಲಾಡ್ಜ್‌ಗಳಿಗೆ ಜನರನ್ನು ಬಿಡುತ್ತ ಬಿಡುತ್ತ ಎಂತಾ ವ್ಯವಹಾರಕ್ಕೆ ಇಳಿದಿದ್ದಾರೆ ಎನ್ನುವುದು ಈ ಸಮಾಜ ಚಿವುಟಿ ನೋಡಿಕೊಳ್ಳಬೇಕಾದ ಸಂಗತಿಯಾಗಿದೆ.

ಹಾನಗಲ್ ಹಲ್ಲೆ ಸಂಬಂಧ 24ರ ಅಫ್ತಾಬ್ ಮಕ್ಬೂಲ್ ಅಹ್ಮದ್ ಚಂದನಕಟ್ಟೆ ಮತ್ತು 23ರ ಮದಾರ್ ಸಾಬ್ ಮಹ್ಮದ್ ಇಸಾಕ್ ಎಂಬ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ. ಹಲ್ಲೆ ನಡೆಸಿ ಪರಾರಿಯಾಗಿರುವ ಇನ್ನೂ ಐವರಿಗಾಗಿ ಬಲೆ ಬೀಸಿದ್ದಾರೆ. ಈ ಪ್ರಕರಣದಲ್ಲಿ ಸೋಮಶೇಖರ್ ಎಂಬ ಶಿರಸಿ ತಾಲೂಕಿನ ವ್ಯಕ್ತಿಗೆ ಹಲ್ಲೆಕೋರರು ನಮ್ಮ ಹುಡುಗಿ ಬೇಕೆ ಎಂದು ಹೊಡೆದಿರುವುದು ಬೆಳಕಿಗೆ ಬಂದಿದೆ. ಹಲ್ಲೆಯ ಬಳಿಕ ವಿನಯ ಕ್ಯಾಸನೂರು ಎಂಬ ರೂಂಬಾಯ್ ಹಾನಗಲ್ ಪೋಲೀಸರಿಗೆ ಈ ಸಂಬಂಧ ದೂರು ನೀಡಿದ್ದಾನೆ. ಹಲ್ಲೆಯ ಬಳಿಕ ಮುಸ್ಲಿಂ ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಗುಂಪು ಮಾನಭಂಗ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತ್ರಸ್ಥೆಯ ಹೇಳಿಕೆ ಪಡೆದಿದ್ದಾರೆ.

ಕೆಲವರು ಇದನ್ನು ಅನೈತಿಕ ಪೋಲೀಸುಗಿರಿ ಕರಾವಳಿಯಿಂದ ಒಳನಾಡಿಗೆ ಎಂದು ವರದಿ ಮಾಡಿದ್ದಾರೆ. ಆದರೆ ಅನೈತಿಕ ಪೋಲೀಸುಗಿರಿ ಕರಾವಳಿಗೆ ಘಟ್ಟದ ಮೇಲಿನಿಂದ ಬಂದಿದೆ. ಅಧಿಕೃತ ಅನೈತಿಕ ಪೋಲೀಸುಗಿರಿ ಎಂದರೆ ಕಲ್ಯಾಣ ಕ್ರಾಂತಿ ಎಂದು ಕಲಿಸುತ್ತಿರುವ ವೈದಿಕ ಕಲ್ಯಾಣ ದೊಂಬಿ ಆಗಿದೆ. ಹರಳಯ್ಯನವರ ಮಗ ಶೀಲವಂತ ಹಾಗೂ ಮಧುವರಸರ ಮಗಳು ಲಾವಣ್ಯರಿಗೆ ಬಸವಣ್ಣನವರು ಮದುವೆ ಮಾಡಿಸುತ್ತಾರೆ. ಇದು ದಲಿತ ಬ್ರಾಹ್ಮಣ ಜಾತಿ ಮುರಿದ ಮದುವೆ. ಕೂಡಲೆ ದೊಂಬಿ ಎಬ್ಬಿಸಿದ ವೈದಿಕರು ಮದುವೆ ಆದವರನ್ನು ಸಾರಾ ಸಗಟಾಗಿ ಕೊಲೆ ಮಾಡುತ್ತಾರೆ. ಅರಸ ಬಿಜ್ಜಳನ ಕೊಲೆಯೂ ಆಗುತ್ತದೆ. ಇದು ಅಧಿಕೃತ ಮೊದಲ ಅನೈತಿಕ ಪೋಲೀಸುಗಿರಿ ಆಗಿದ್ದು ಸಾವಿರಾರು ಶರಣರ ಕೊಲೆ ಮಾಡಿ, ಸಾವಿರಾರು ಶರಣರ ಸಾಹಿತ್ಯ ಸುಟ್ಟು, ಸಾವಿರಾರು ಶರಣರನ್ನು ಕಲ್ಯಾಣದಿಂದ ಓಡಿಸಲಾಯಿತು. ಬಸವೇಶ್ವರರ ಬಲಿ ಪಡೆಯಲಾಯಿತು. ದೂರದ ಉಳವಿ, ಚಾಮರಾಜನಗರದ ಕಾಡು ಗುಡ್ಡಗಳಿಗೆ ಓಡಿದ ಶರಣರಿಂದಾಗಿ ಒಂದಷ್ಟು ಶರಣ ಸಾಹಿತ್ಯ ಉಳಿದಿದೆ.

ಅಕ್ಬರನು ಅನಾರ್ಕಲಿಯನ್ನು ಜೀವಂತ ಹೂತು ಹಾಕಿದ. ಲೈಲಾ ಮಜ್ನು ಸಾವಿಗೆ ಶರಣಾದರು. ಇವೆಲ್ಲ ಅನೈತಿಕ ಪೋಲೀಸುಗಿರಿಯ ಅವಾಂತರಗಳು. ವರ್ಣಾಶ್ರಮ ವ್ಯವಸ್ಥೆಯಲ್ಲಿ ಅರಸ ಯಾರನ್ನು ಮದುವೆಯಾದರೂ ವೈದಿಕ ಧರ್ಮ ಪ್ರಶ್ನಿಸಿಲ್ಲ. ಯಾಕೆಂದರೆ ಅವನ ಕೈಯಲ್ಲಿ ಅಧಿಕಾರ ಇತ್ತು. ಇಷ್ಟಕ್ಕೂ ಋಷಿ ಮೂಲ ಕೇಳಬಾರದು ಎಂದು ಗಾದೆ ಮಾಡಿದ್ದಾರೆ. ಅಲ್ಲಿ ಯಾವುದೂ ಸಮಾಜ ಒಪ್ಪಿದ ರೀತಿಯ ಹುಟ್ಟು ಇರಲಿಲ್ಲ. ಆದರೂ ಅನೈತಿಕ ಪೋಲೀಸುಗಿರಿ ನಡೆದ ಉದಾಹರಣೆ ಸಿಗುವುದಿಲ್ಲ. ಜಮದಗ್ನಿ ಮದುವೆ ಆದುದು ಕ್ಷತ್ರಿಯ ಕನ್ಯೆಯನ್ನು. ಆಕೆಯ ಒಂದು ನಿಮಿಷದ ಮನೋ ಚಂಚಲತೆಗೆ ಮಗ ಪರಶುರಾಮ ತಾಯಿಯ ತಲೆ ಕಡಿಯುವ ಕತೆ ಇದೆ. ಆದರೆ ಋಷಿ ಮುನಿಗಳ ಅನೈತಿಕ ಕತೆಗಳು ಪುರಾಣಗಳಲ್ಲಿ ನೂರಾರು ಇದ್ದು, ಅವರಿಗೆ ಯಾವುದೇ ಶಿಕ್ಷೆ ಆದಂತೆ ಕಾಣುವುದಿಲ್ಲ.

ಪೋಲೀಸರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನೈತಿಕ ವ್ಯವಸ್ಥೆ ಆಗಿದ್ದಾರೆ. ಪೋಲೀಸು ಕೆಲಸವನ್ನು ಬೇರೆಯವರು ಕೈಗೆತ್ತಿಕೊಳ್ಳುವುದು ಅನೈತಿಕ ಪೋಲೀಸುಗಿರಿ ಆಗುತ್ತದೆ. ಈ ಎಲ್ಲ ವ್ಯವಸ್ಥೆಯವರು ಸಹ ಮನುಷ್ಯರೇ ಆದ್ದರಿಂದ ಅವರಲ್ಲಿ ಕೂಡ ಕಾನೂನು ಮುರಿದು ಬೇಲಿಯೇ ಹೊಲ ಮೇದ ಕತೆ ಆಗುವುದಿದೆ. ಮಣಿಪುರದ ಮಹಿಳೆಯರು ಭಾರತೀಯ ಸೈನಿಕರ ಅತ್ಯಾಚಾರದ ವಿರುದ್ಧ ಸಾಕಷ್ಟು ಹೋರಾಟ ಮಾಡಿರುವುದು ಕಳೆದ ದಶಕದಲ್ಲಿ ನಡೆದಿದೆ; ಈಗ ಸುಸ್ತಾಗಿದ್ದಾರೆ. ಅಲ್ಲಿ ಈಗ ಕ್ರಿಶ್ಚಿಯನ್ ಬುಡಕಟ್ಟು ಮತ್ತು ಇತರ ಬುಡಕಟ್ಟು ಎಂಬ ಕಂದರ ದೊಡ್ಡದಾಗಿ ಮಹಿಳೆಯರ ಬತ್ತಲೆ ಮೆರವಣಿಗೆ ನಡೆಸುವ ವರೆಗೆ ಅಭಿವೃದ್ಧಿ ಕಂಡಿದೆ. ಇದು ಎಂಟು ತಿಂಗಳ ಹಿಂದೆ ನಡೆದ ಅನೈತಿಕ ಪೋಲೀಸುಗಿರಿ.

ಬೆಳಗಾವಿ ಜಿಲ್ಲೆಯ ಕಾಕತಿ ಪೋಲೀಸು ಠಾಣೆ ವ್ಯಾಪ್ತಿಯಲ್ಲಿ ಮಗ ನೆರೆಹೊರೆಯ ಹೆಣ್ಣನ್ನು ಹಾರಿಸಿಕೊಂಡು ಹೋದ ಎಂದು ತಾಯಿಯನ್ನು ಕಟ್ಟಿ ಬತ್ತಲೆ ಮಾಡಿ ಹೊಡೆದ ಅನೈತಿಕ ಪೋಲೀಸುಗಿರಿ ನಡೆದು ಈಗ ಜೈಲು ಸೇರಿದೆ. ಇದರ ಇನ್ನೊಂದು ಮಗ್ಗುಲು ಮರ್ಯಾದೆಗೇಡು ಹತ್ಯೆ. ಮಗಳು ಅನ್ಯ ಜಾತಿಯವನನ್ನು ಮದುವೆ ಆದಳು ಎಂದು ಮದುವೆ ಆದವರನ್ನು ಇಲ್ಲವೇ ಅವರಲ್ಲಿ ಒಬ್ಬರನ್ನು ಕೊಲ್ಲುವುದು. ಇದು ಕೂಡ ತೀರಾ ಅನೈತಿಕ ಪೋಲೀಸುಗಿರಿ ಆಗಿದೆ.

ಕನ್ನಡ ಶಾಸನಗಳಲ್ಲಿ ಪೆಣ್ ಪುಯ್ಯಲ್ ಎಂಬುದು ಬರುತ್ತದೆ. ಗೆದ್ದ ರಾಜ್ಯದವರು ಸೋತ ರಾಜ್ಯದ ಹೆಣ್ಣನ್ನು ಹೊತ್ತೊಯ್ಯುವಾಗ ಆಕೆ ಕೂಗುವಳು. ಆಕೆಯನ್ನು ಕಾಪಾಡಬೇಕು. ಪೋಲೀಸರು ಬರುವವರೆಗೆ ಕಾಯಲಾಗದು. ಆಗ ಕಾನೂನು ಕೈಗೆತ್ತಿಕೊಂಡು ಆಕೆಯನ್ನು ರಕ್ಷಿಸಿದರೆ ಅದನ್ನು ನೈತಿಕ ಪೋಲೀಸುಗಿರಿ ಎನ್ನಬಹುದು. ಶಾಬಾಶ್ ಹೇಳಬಹುದು. ಹಲ್ಲೆಕೋರರ ಅನೈತಿಕ ಪೋಲೀಸುಗಿರಿಗೆ ಮಾತ್ರ ಯಾರೂ ಚಪ್ಪಾಳೆ ತಟ್ಟಬಾರದು. ಹಾಗೆ ಮಾಡಿದರೆ ಅದು ನಿಮ್ಮ ಅನೈತಿಕ ಮನಸ್ಸನ್ನು ತೋರಿಸುತ್ತದೆ.

Related Posts

Leave a Reply

Your email address will not be published.