ಕಾವಲಿಗೆ ಹೋಗುತ್ತಿರುವ ಕಾಸು


ರಕ್ಷಣಾ ವೆಚ್ಚದಲ್ಲಿ ಭಾರತವು ನಾಲ್ಕನೆಯ ಸ್ಥಾನದಲ್ಲಿ ಇದೆ. ಮೂರನೆಯ ಸ್ಥಾನದಲ್ಲಿ ರಶಿಯಾ ಇದೆ. ಒಂದು ಕಾಲದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಸರಿಸಮನಾಗಿ ರಕ್ಷಣಾ ವೆಚ್ಚ ಮಾಡುತ್ತಿದ್ದ ದೇಶವಿದು ರಶಿಯಾ. ಈಗ ಅದರ ರಕ್ಷಣಾ ವೆಚ್ಚ ಭಾರತದ ರಕ್ಷಣಾ ವೆಚ್ಚಕ್ಕೆ ಸರಿ ಸಮಾನದ್ದಾಗಿ ಬಂದಿದೆ. ಮೊದಲ ಎರಡು ಸ್ಥಾನಗಳಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನÀ ಮತ್ತು ಚೀನಾಗಳು ಇವೆ. ಯುಎಸ್‍ಎ ಮತ್ತು ಚೀನಾಗಳು ಜಗತ್ತಿನ ಮೊದಲಿನೆರಡು ಸ್ಥಾನಗಳಲ್ಲಿ ಇರುವ ಆರ್ಥಿಕ ಶಕ್ತಿಗಳಾಗಿವೆ. ಆ ಹಣಕಾಸು ಬಲವನ್ನು ಉಳಿಸಿಕೊಳ್ಳಲು ಈ ಪರಿಯ ವೆಚ್ಚವೋ ಅಥವಾ ಆ ಪಾಟಿ ಹಣ ಇರುವುದರಿಂದ ರಕ್ಷಣಾ ಕಾರ್ಯಕ್ಕೆ ಈ ಪಾಟಿ ವೆಚ್ಚವೋ ಎನ್ನುವುದು ಭಾರೀ ಡಿಬೇಟ್ ನಡೆಸಬೇಕಾದ ವಿಚಾರವಾಗಿದೆ.
ಇದು ಬಾಡಿಗಾರ್ಡ್‍ಗಳು, ಬೌನ್ಸರ್‍ಗಳು ಮತ್ತು ಸೆಕ್ಯೂರಿಟಿ ಗಾರ್ಡ್‍ಗಳ ಕಾಲ. ಒಂದು ಕಾಲದಲ್ಲಿ ಪೇಟೆ ಪಟ್ಟಣಗಳಲ್ಲಿ ಗೂರ್ಖರು ನಟ್ಟಿರುಳಿನಲ್ಲಿ ಟಪ್ಪ ಟಪ್ಪ ಕೋಲಿನ ಸದ್ದು ಮಾಡುತ್ತ ಹೋಗುತ್ತಿದ್ದರು. ಅದೆಲ್ಲ ಈಗ ಇಲ್ಲವೇ ಇಲ್ಲ ಎನ್ನಬಹುದು. ಕೆಲವೊಮ್ಮೆ ಅನಿವಾರ್ಯದ ಪಹರೆ ಇರುತ್ತದೆ. ಮೂರು ದಶಕದ ಹಿಂದೆ ಅದ್ಯಾರೋ ತಲೆ ಒಡೆಯುವ ಚಂದ್ರ ಎನ್ನುವ ದರೋಡೆಕೋರ ಇದ್ದನಂತೆ. ಆಗ ತುಳುನಾಡಿನ ಕೆಲವು ಊರುಗಳಲ್ಲಿ ತೋಡಿಗೆ ಇದ್ದ ಮರದ ಸಂಕಗಳನ್ನು ಒಡೆದು ಹಾಕಿ, ತರುಣರು ಕೊತ್ತಲ್‍ಂಗೆ, ಸಯಿಂಗೋಲು ಹಿಡಿದುಕೊಂಡು ಇರುಳು ಪಾಳಿಯಲ್ಲಿ ಎಚ್ಚರವಿದ್ದು ಊರು ಕಾಯುತ್ತಿದ್ದರು.

ಇದೆಲ್ಲ ನಾನಾ ಕಾಲಗಳಲ್ಲಿ ನಾನಾ ಊರುಗಳಲ್ಲಿ ಘಟಿಸಿದ ಘಟನೆಗಳೇ ಆಗಿವೆ. ನಮ್ಮ ದೇಶದ ಗಡಿ ಕಾಯಲು ಸೇನೆ ಇದೆ. ಊರು ಕಾಯಲು ಪೋಲೀಸು ಇದೆ. ಊರು ತರಲೆಗೆ ಅನೈತಿಕ ಪೋಲೀಸರು ಇದ್ದಾರೆ. ಕಾಸಗಿಯವರ ಬಾಡಿಗಾರ್ಡ್, ಬೌನ್ಸರ್‍ಗಳು, ಭದ್ರತಾ ಸಿಬ್ಬಂದಿ ಇರುತ್ತಾರೆ. ಬೌನ್ಸರ್‍ಗಳು ಸಂಸತ್ತು, ವಿಧಾನಾಂಗದವರೆಗೂ ಇರುತ್ತಾರೆ. ಇದರಲ್ಲಿ ರಕ್ಷಣಾ ವೆಚ್ಚ ಎನ್ನುವುದು ದೇಶವು ತನ್ನ ಗಡಿರಕ್ಷಣಾ ವ್ಯವಸ್ಥೆಯನ್ನು ಮುನ್ನಡೆಸಲು ಮಾಡುವ ವೆಚ್ಚವಾಗಿದೆ. ಅದರಲ್ಲಿ ಭೂ ವಾಯು ನೌಕಾ ಸಿಬ್ಬಂದಿ ಸಂಬಳ ಸವಲತ್ತಿನಿಂದ ಆಮದು ಮಾಡಿಕೊಳ್ಳುವ ಶಸ್ತ್ರಾಸ್ತ್ರದವರೆಗಿನ ಖರ್ಚು ಸೇರಿರುತ್ತದೆ.


ಭಾರತದ ಈಗಿನ ವಾರ್ಷಿಕ ರಕ್ಷಣಾ ಖರ್ಚು 8,104 ಕೋಟಿ ಡಾಲರ್‍ಗಳು. ರಶಿಯಾದ ರಕ್ಷಣಾ ವೆಚ್ಚವು 8,604 ಕೋಟಿ ಡಾಲರ್‍ಗಳು. ಭಾರತದ ರಕ್ಷಣಾ ವೆಚ್ಚವು ಕಳೆದೊಂದು ದಶಕದಲ್ಲಿ 47 ಶೇಕಡಾದಷ್ಟು ಏರಿಕೆ ಆಗಿದೆ. ಎಂದರೆ ಬಹುತೇಕ ಭಾರತದ ರಕ್ಷಣಾ ವೆಚ್ಚ ದುಪ್ಪಟ್ಟಾಗಿದೆ. ಇದಕ್ಕೆ ಮುಖ್ಯ ಕಾರಣ ಅತಿಯಾದ ಬೆಲೆಯೇರಿಕೆ ಮತ್ತು ಶಸ್ತ್ರಾಸ್ತ್ರ ಖರೀದಿಯ ಅನಿವಾರ್ಯತೆಯಾಗಿದೆ. ಭಾರತದ ಆಯ ವ್ಯಯದಲ್ಲೂ ರಕ್ಷಣಾ ವೆಚ್ಚದ ಬಾಬತ್ತು ಏರಿಕೆ ಆಗುತ್ತ ಸಾಗಿದೆ. 2020- 21ರ ಬಜೆಟ್‍ನಲ್ಲಿ 4.71 ಲಕ್ಷ ಕೋಟಿ ರೂಪಾಯಿ ಇದ್ದುದು, 2023- 24ರ ಬಜೆಟ್‍ನಲ್ಲಿ 6.21 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಜಾಗತಿಕವಾಗಿಯೇ ಈ ಏರಿಕೆ ಕಂಡು ಬರುತ್ತಿದೆ. ಆದರೆ ರಶಿಯಾದ ರಕ್ಷಣಾ ವೆಚ್ಚವನ್ನು ಶೀತಲ ಸಮರದ ಕಾಲಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಆದರೆ ಈಗ ಉಕ್ರೇನ್ ಜೊತೆ ಯುದ್ಧ ಇರುವುದರಿಂದ ಅನಿವಾರ್ಯವಾಗಿ ಮತ್ತೆ ರಕ್ಷಣಾ ವೆಚ್ಚ ಏರಿಕೆಯಾಗಿದೆ.
ಅಮೆರಿಕ ಸಂಯುಕ್ತ ಸಂಸ್ಥಾನವು ಅತಿಯಾದ ರಕ್ಷಣಾ ವೆಚ್ಚ ಮಾಡುತ್ತಿರುವುದು ವಿಶಾಲ ದೇಶ ಎನ್ನುವ ಕಾರಣವೊಂದಕ್ಕೆ ಮಾತ್ರವಲ್ಲ. ತಾನು ಜಗತ್ತಿನ ದೊಡ್ಡಣ್ಣ ಎಂಬ ರೀತಿಯಲ್ಲಿ ಅದು ವರ್ತಿಸುತ್ತ ಬಂದಿದೆ. ಅದಕ್ಕಾಗಿ ನಾನಾ ದೇಶಗಳಲ್ಲಿ ಮೂಗು ತೂರಿಸುತ್ತದೆ. ಹಾಗಾಗಿ ಅತಿಯಾದ ರಕ್ಷಣಾ ವೆಚ್ಚವನ್ನು ಮಾಡುತ್ತಿದೆ. ಅದಕ್ಕೆ ಸವಾಲು ಎನ್ನುವಂತೆ ಚೀನಾ ಕೂಡ ಅತಿಯಾದ ರಕ್ಷಣಾ ವೆಚ್ಚವನ್ನು ಮಾಡುತ್ತಿದೆ. ಸೋವಿಯೆತ್ ಯೂನಿಯನ್ ಇದ್ದಾಗ ಯುಎಸ್‍ಎ ರಕ್ಷಣಾ ವೆಚ್ಚವು ಅದರ ಬಣ ಕಾಯ್ದುಕೊಳ್ಳಲೂ ಬೇಕಿತ್ತು. ಮುಂದಿನ ದಿನಗಳಲ್ಲಿ ಸೋವಿಯತ್ ಯೂನಿಯನ್ 11 ದೇಶಗಳಾದ ಮೇಲೆ ಯುಎಸ್‍ಎ ತಾನೇ ಲೋಕ ರಾಜ ಎಂಬಂತೆ ಇತ್ತು.


ಕಳೆದೊಂದು ದಶಕದಿಂದ ಯುಎಸ್‍ಎಗೆ ಸವಾಲಾಗಿ ಬೆಳೆಯುತ್ತ ಬಂದ ಚೀನಾವು ಈಗ ಎಲ್ಲ ವಿಷಯದಲ್ಲಿಯೂ ಸರಿ ಸಮವೇನೋ ಎಂಬ ಮಟ್ಟವನ್ನು ಮುಟ್ಟಿದೆ. ಚೀನಾದ ಸಂರಚನೆಗಳಂತೂ ಜಗತ್ತನ್ನೇ ಇತ್ತೀಚೆಗೆ ನಿಬ್ಬೆರಗುಗೊಳಿಸುವಂತೆ ಮಾಡಿದೆ. ಆದರೆ ಎರಡನೆಯ ಸ್ಥಾನದಲ್ಲಿದ್ದರೂ ಚೀನಾದ ರಕ್ಷಣಾ ವೆಚ್ಚವು ಅಮೆರಿಕ ಸಂಯುಕ್ತ ಸಂಸ್ಥಾನಕ್ಕಿಂತ ತೀರಾ ಕಡಿಮೆಯೇ ಇದೆ. ಯುಎಸ್‍ಎಯ ಈಗಿನ ವಾರ್ಷಿಕ ರಕ್ಷಣಾ 87,700 ಕೋಟಿ ಡಾಲರ್‍ಗಳಾಗಿವೆ. ಚೀನಾದ ರಕ್ಷಣಾ ವೆಚ್ಚ 29,200 ಕೋಟಿ ಡಾಲರ್‍ಗಳಾಗಿವೆ. ಸೌದಿ ಅರೇಬಿಯಾ ಐದನೆಯ, ಬ್ರಿಟನ್ ಆರನೆಯ, ಜರ್ಮನಿ ಏಳನೆಯ, ಫ್ರಾನ್ಸ್ ಎಂಟನೆಯ, ತೆಂಕಣ ಕೊರಿಯಾ ಒಂಬತ್ತನೆಯ, ಜಪಾನ್ ಹತ್ತನೆಯ ಸ್ಥಾನದಲ್ಲಿದ್ದು ರಕ್ಷಣಾ ವೆಚ್ಚವನ್ನು ಮಾಡುತ್ತಿವೆ.
ಭಾರತದ ಗಡಿಯೆಡೆ ಹೆಚ್ಚು ಅಪಾಯದಲ್ಲಿರುವುದು ಮತ್ತು ದೇಶದೆಲ್ಲೆಡೆ ಉಗ್ರರ ಅಟ್ಟಹಾಸಗಳು ಆಗಾಗ ಹೆಚ್ಚುತ್ತಿರುವುದು ಭಾರತದ ರಕ್ಷಣಾ ವೆಚ್ಚ ಹೆಚ್ಚಲು ಕಾರಣ ಎಂದರೂ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳಲೇ ಹೆಚ್ಚಿನ ಖರ್ಚು ಆಗುತ್ತಿರುವುದು ಅತಿ ಮುಖ್ಯ ಕಾರಣವಾಗಿದೆ. ಭಾರತವು ಹೆಚ್ಚು ಬಲದ ರೇಡಾರ್‍ಗಳು, ಫಿರಂಗಿಗಳು, ವಿಮಾನಗಳು, ಜಲಾಂತರ್ಗಾಮಿಗಳು, ಹೆಲಿಕಾಪ್ಟರ್‍ಗಳು ಕ್ಷಿಪಣಿಗಳು, ಆಧುನಿಕ ರೈಫಲ್‍ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತವು ಜಗತ್ತಿನ ಅತಿ ಮುಖ್ಯ ರಕ್ಷಣಾ ಹಾರ್ಡ್‍ವೇರ್ ಆಮದು ದೇಶ ಎಂದೂ ಹೇಳಲಾಗಿದೆ. ಈ ಆಮದು ವ್ಯವಹಾರದಲ್ಲಿ ಭ್ರಷ್ಟಾಚಾರವೂ ಇದೆ ಎಂಬ ಕೂಗು ಆಗಾಗ ಏಳುತ್ತದೆ. ಫ್ರಾನ್ಸಿನಿಂದ ಕೊಂಡ ರಾಫೆಲ್ ಮರೈನ್ ಜೆಟ್ ವಿಮಾನಗಳ ವಿಷಯದಲ್ಲಿ ಈ ಭ್ರಷ್ಟಾಚಾರದ ವಿಷಯವು ಅತಿ ದೊಡ್ಡ ಗುಲ್ಲು ಎಬ್ಬಿಸಿ ಈಗ ತಣ್ಣಗಾಗಿದೆ.


ಜಗತ್ತಿನ ಎಲ್ಲ ದೇಶಗಳೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವೆಚ್ಚ ಮಾಡುತ್ತಲೇ ಇವೆ. ಪುಟ್ಟ ದ್ವೀಪ ದೇಶವಾದ ಮಾಲ್ಡೀವ್ಸ್ ಇತ್ತೀಚೆಗೆ ಚೀನಾದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ ಮತ್ತು ಈಗ ಟರ್ಕಿಯಿಂದ ರಕ್ಷಣಾ ಉದ್ದೇಶದ ಡ್ರೋನ್‍ಗಳನ್ನು ತರಿಸಿಕೊಂಡಿದೆ. ಜಗತ್ತಿನ ಪುಟ್ಟ ದೇಶಗಳು ಯಾವುದಾದರೊಂದು ದೊಡ್ಡ ದೇಶದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿರುತ್ತವೆ.


ಆದಿ ಮಾನವನು ಪ್ರಾಣಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಗುಂಪು ಕಟ್ಟಿಕೊಳ್ಳತೊಡಗಿದ. ಕೃಷಿ ಆರಂಭವಾದ ಮೇಲೆ ಬೇಸಾಯ ಉಳಿಸಿಕೊಳ್ಳಲು ಕಾವಲುಗಾರನಾದ. ಹಣವಂತರು ಹುಟ್ಟಿದಾಗ ಮೈಗಾವಲು ಭಟರನ್ನು ಸಾಕಿಕೊಳ್ಳತೊಡಗಿದರು. ದೊಡ್ಡ ವ್ಯಾಪಾರಿಗಳು ಮೊದಲು ಮರಿ ಸೈನ್ಯಗಳನ್ನು ಇಟ್ಟುಕೊಂಡವರು. ಈ ಸೇನೆ ಸಹಿತ ಅವರ ವ್ಯಾಪಾರ ಯಾತ್ರೆ ಇರುತ್ತಿತ್ತು. ಮುಂದೆ ರಾಜಸತ್ತೆಯು ಸೇನಾಪಡೆಯನ್ನು ಹೊಂದಿತು. ಅದು ಇಂದಿನ ದೇಶಗಳಿಗೂ ಮುಂದುವರಿದಿದೆ. ಆಗ ಮೈಬಲ, ಈಟಿ, ಬಿಲ್ಲು ಬಾಣ ಇತ್ಯಾದಿ ಇದ್ದರೆ. ಇಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇವೆ. ಕೆಲವರಲ್ಲಿರುವ ಅಣು ಅಸ್ತ್ರಗಳು ಕ್ಷಣದಲ್ಲಿ ಇಡೀ ಜಗತ್ತನ್ನೇ ಸ್ಮಶಾನ ಮಾಡಬಲ್ಲವು. ಶಾಂತಿಗಾಗಿ ಅಣ್ವಸ್ತ್ರ ಬಳಕೆ ಎಂಬ ಒಪ್ಪಂದ ಒಂದು ಮಾತ್ರ ಈ ಪ್ರಪಂಚವನ್ನು ಕಾಪಾಡಬೇಕು.

ಬರಹ: ಪೇರೂರು ಜಾರು

Related Posts

Leave a Reply

Your email address will not be published.