ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ : ಜೂನ್ 26 ರಂದು ‘ವಿದ್ಯಾರ್ಥಿಗಳು ಸಹ ಸಲಹೆಗಾರರಾಗಿ’ ಮಾಹಿತಿ ಕಾರ್ಯಾಗಾರ

ಉಡುಪಿ: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆರೋಗ್ಯ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸೇರಿದಂತೆ ವಿವಿಧ ಸಂಘ-ಸಂಸ್ಥೆ, ಇಲಾಖೆಗಳ ಆಶ್ರಯದಲ್ಲಿ ನಶಾ ಮುಕ್ತ ಭಾರತ ಅಭಿಯಾನದಡಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಪ್ರಯುಕ್ತ ‘ವಿದ್ಯಾರ್ಥಿಗಳು ಸಹ ಸಲಹೆಗಾರರಾಗಿ’ ಮಾಹಿತಿ ಕಾರ್ಯಾಗಾರ ಜೂನ್ 26 ರ ಸೋಮವಾರದಂದು ಬೆಳಗ್ಗೆ 10 ಗಂಟೆಗೆ ಮಣಿಪಾಲ ಡಿಸಿ ಕಚೇರಿ ಸಭಾಂಗಣದಲ್ಲಿ ಜರಗಲಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಮನು ಅನಂತ್ ಅವರು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ನಾಯಕತ್ವ ಗುಣ ಹೊಂದಿರುವ ಎನ್‌ಎಸ್‌ಎಸ್, ಸ್ಕೌಟ್ಸ್ ಗೈಡ್ಸ್, ಎನ್‌ಸಿಸಿಯಲ್ಲಿ ಸಕ್ರಿಯರಾಗಿರುವ ಮೂವರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇವರಿಗೆ ‘ಸಹ ಸಲಹೆಗಾರರಾಗಿ ವಿದ್ಯಾರ್ಥಿ’ ಎಂಬ ನೂತನ ಪರಿಕಲ್ಪನೆಯ ಪರಿಚಯ ಮತ್ತು ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು, ಮಾದಕ ದ್ರವ್ಯ ವ್ಯಸನಿಯನ್ನು ಗುರುತಿಸುವ ಬಗ್ಗೆ ಹಾಗೂ ಕಾನೂನು ಚೌಕಟ್ಟಿನಲ್ಲಿ ಮಾದಕ ದ್ರವ್ಯ ವ್ಯಸನದಿಂದ ಎದುರಾಗುವ ಸಮಸ್ಯೆ ಬಗ್ಗೆ ತರಬೇತಿ ನೀಡಲಾಗುವುದು. ಈ ಕಾರ್ಯಕ್ರಮದ ಮುಖಾಂತರ ಯುವಜನತೆಯಲ್ಲಿ ಮಾದಕ ದ್ರವ್ಯ ವ್ಯಸನದ ವಿರುದ್ಧ ನಿರಂತರವಾಗಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದೇವೆ. ಡಿಸಿ ಕೂರ್ಮಾರಾವ್ ಎಂ. ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿ. ಪಂ. ಸಿಇಒ ಪ್ರಸನ್ನ ಎಚ್. ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮನೋವೈದ್ಯ ಡಾ. ದೀಪಕ್ ಮಲ್ಯ, ನೇತ್ರತಜ್ಞೆ ಡಾ. ಸುಲತಾ ಭಂಡಾರಿ, ಡಾ. ಎ. ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ವಿಕಲ ಚೇತನ ಹಾಗು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಾಜಿ, ಡಾ. ವೀಣಾ ಕುಡ್ವ, ಡಾ. ಸುಜಯಾ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.