ಬಿಜೆಪಿ ಮಹಿಳಾ ವಿರೋಧಿ ಕುಟಿಲ ರಾಜಕಾರಣ ನಾಚಿಕೆಗೇಡು : ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಆರೋಪ

ಕಡಬ: ಐತ್ತೂರು ಗ್ರಾ.ಪಂ.ನ ಅಧ್ಯಕ್ಷಯಾಗಿದ್ದ ಶ್ಯಾಮಲಾ ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಿಗೊಳಿಸಿದ ಬಿಜೆಪಿಯ ಮಹಿಳಾ ವಿರೋಧಿ ಕುಟಿಲ ರಾಜಕಾರಣ ನಾಚಿಕೆಗೇಡು ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಕಡಬದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿದ್ದ ತನ್ನ ಅಪರೇಶನ್ ಕಮಲ ಕಾರ್ಯಾಚರಣೆಯನ್ನು ಗ್ರಾಮ ಮಟ್ಟಕ್ಕೂ ಇಳಿಸಿರುವ ಬಿಜೆಪಿ ಪಕ್ಷವು ಕಾಂಗ್ರೆಸ್ ಬೆಂಬಲಿತರನ್ನು ಆಮಿಷ ನೀಡಿ ಸೆಳೆದುಕೊಂಡು ಹಿಂದುಳಿದ ಬಿ ವರ್ಗದ ಮೀಸಲಾತಿಯಲ್ಲಿ ಗೆದ್ದು ಗ್ರಾ.ಪಂ.ನಲ್ಲಿ ಸಾಂವಿಧಾನಿಕವಾಗಿ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದ ಮಹಿಳೆಯನ್ನು ಒಳಸಂಚು ನಡೆಸಿ ಕೆಳಗಿಳಿಸಿ ತನ್ನ ನೀಚ ರಾಜಕೀಯವನ್ನು ತೋರಿಸಿದೆ. ಮಹಿಳೆಯರನ್ನು ಮಾತೆ ಎಂದು ವೇದಿಕೆಯಲ್ಲಿ ಕರೆಯುವ ಬಿಜೆಪಿಯವರು ತನ್ನ ರಾಜಕೀಯ ತೀಟೆ ತೀರಿಸಲು ಅವಧಿ ಮುಗಿಯಲು ಕೇವಲ 4 ತಿಂಗಳು ಇರುವ ಸಂದರ್ಭದಲ್ಲಿ ಹಿಂದುಳಿದ ವರ್ಗದ ಮಹಿಳೆಯನ್ನು ಅಧ್ಯಕ್ಷ ಸ್ಥಾನದಿಂದ ವಂಚಿತಗೊಳಿಸುವ ಮೂಲಕ ಮಹಿಳೆಯರಿಗೆ ಘೋರ ಅಪಮಾನ ಮಾಡಿದೆ ಎಂದು ಅವರು ದೂರಿದರು.

ಡಿಸಿಸಿ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ ಅವರು ಮಾತನಾಡಿ ಈ ಹಿಂದೆ ಐತ್ತೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ನಡೆಸಿದ ಅವ್ಯವಹಾರಗಳ ವಿರುದ್ಧ ಲೋಕಾಯುಕ್ತ ಸೇರಿದಂತೆ ಹಲವು ಕಡೆ ತನಿಖೆಗಳು ನಡೆಯುತ್ತಿದ್ದು, ಅವ್ಯವಹಾರ ನಡೆಸಿದವರ ಪರವಾಗಿ ತೀರ್ಪು ಬರಲು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲಾ ಸಹಕರಿಸದ ಕಾರಣದಿಂದಾಗಿ ಅವರನ್ನು ಪದಚ್ಯುತಿಗೊಳಿಸಲಾಗಿದೆ ಎಂದು ಆರೋಪಿಸಿದರು. ಡಿಸಿಸಿ ಕಾರ್ಯದರ್ಶಿ ಸೈಮನ್ ಸಿ.ಜೆ. ಮಾತನಾಡಿ ಕಳಂಕರಹಿತ ಆಡಳಿತ ನೀಡಿರುವ ಶ್ಯಾಮಲಾ ಅವರನ್ನು ಪದಚ್ಯುತಿಗೊಳಿಸುವ ಮೂಲಕ ಬಿಜೆಪಿ ತಾನು ಭ್ರಷ್ಟಚಾರಿಗಳ ಪರ ಎಂದು ಒಪ್ಪಿಕೊಂಡಂತಾಗಿದೆ ಎಂದರು. ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಸುಧೀರ್ ದೇವಾಡಿಗ ದೇರಾಜೆ, ಸುಬ್ರಹ್ಮಣ್ಯ ಐತ್ತೂರು ಉಪಸ್ಥಿತರಿದ್ದರು

Related Posts

Leave a Reply

Your email address will not be published.