ಕಡಬ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಿದ್ಧಗೊಂಡ ಆಕರ್ಷಕ ರಥ
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಸಂಭ್ರಮದಲ್ಲಿದ್ದು, ಜಾತ್ರಾ ಮಹೋತ್ಸವದಲ್ಲಿ ಬಹುಪಾಲು ರಥಗಳದ್ದೇ ಆಕರ್ಷಣೆ. ಜಾತ್ರೆಗೆ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರು ರಚಿಸುವ ಆಕರ್ಷಕ ಬೆತ್ತದ ರಥಗಳು ಭೂಷಣವಾಗಿದೆ.
ಕಾರ್ತಿಕ ಮಾಸದ ಶುದ್ಧ ಪೌರ್ಣಿಮಿ ದಿನ ಸಹಸ್ರನಾಮಾರ್ಚನೆಯ ಬಳಿಕ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಸಂದರ್ಭ ಎಳೆಯುವ ರಥಗಳಿಗೆ ಗೂಟ ಪೂಜಾ ಮೂಹೂರ್ತವನ್ನು ಕ್ಷೇತ್ರ ಪುರೋಹಿತರು ನೆರವೇರಿಸಿದ್ದರು. ಆನಂತರ ಪೂರ್ವಶಿಷ್ಠ ಸಂಪ್ರದಾಯದಂತೆ ರಥ ಕಟ್ಟಲಿರುವ ಮೂಲ ನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರರಿಗೆ ರಥ ಕಟ್ಟಲು ಗಂಧ ಪ್ರಸಾದದ ರೂಪದಲ್ಲಿ ವೀಳ್ಯವನ್ನು ನೀಡಲಾಯಿತು.
ಯಾವುದೇ ಹಗ್ಗವನ್ನು ಬಳಸದೆ ಬೆತ್ತಗಳಿಂದಲೇ ವಿಶಿಷ್ಠವಾದ ಸುಂದರ ರಥವನ್ನು ಮೂಲ ನಿವಾಸಿಗಳು ನಿರ್ಮಿಸುತ್ತಿದ್ದಾರೆ. ಅಲ್ಲದೆ ಇವುಗಳನ್ನು ಜಾತ್ರೆಯ ದಿನ ಬೆತ್ತದಿಂದಲೇ ಎಳೆಯುವುದು ಮತ್ತೊಂದು ವಿಶೇಷ. ಬೆತ್ತವನ್ನು 8 ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು ರಥದ ಅಟ್ಟೆಯನ್ನು ರಚಿಸುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿ ಯಾವುದೇ ಗಂಟುಗಳನ್ನು ಹಾಕಲಾಗುವುದಿಲ್ಲ ಬದಲಾಗಿ ಬೆತ್ತವನ್ನು ಸುರಿದು ರಥವನ್ನು ಗಟ್ಟಿ ಮಾಡಲಾಗುತ್ತದೆ.
ಬ್ರಹ್ಮರಥಕ್ಕೆ ಸುಮಾರು 200 ತುಂಡು ಬಿದಿರನ್ನು ಬಳಸಲಾಗುತ್ತದೆ. ಅಲ್ಲದೆ ಮೇಲಿಂದ ಕಳೆಗೆ ೧೦೦ಕ್ಕೂ ಅಧಿಕ ಆರುಗಳನ್ನು ಅಳವಡಿಸಲಾಗುವುದು. ಮಹಾರಥದ ಐದು ಅಂತಸ್ತುಗಳಿಗೆ ೮ ಆಕಾರದಲ್ಲಿ ಬೆತ್ತವನ್ನು ಸುತ್ತಲಾಗುತ್ತದೆ. ಬಳಿಕ ಫಲವಸ್ತುಗಳು, ಹೂ, ಬಾಳೆ, ಮಾವಿನ ಎಲೆಗಳಿಂದ ಸಿಂಗಾರ ಮಾಡಲಾಗುವುದು.