ನಾಲಿಗೆ ಹೇಳುವ ವೈದ್ಯ ಲೋಕದ ಸತ್ಯಗಳು

ರೋಗ ಪತ್ತೆಗೆ ರಹದಾರಿ ನೀಡುವ ನಾಲಗೆ
ನಾಲಗೆ ನಮ್ಮ ದೇಹದ ಬಹಳ ಮುಖ್ಯವಾದ ಅಂಗ. ಜೀರ್ಣಾಂಗ ವ್ಯವಸ್ಥೆಯು ಪ್ರಾಥಮಿಕ ಹಂತದಲ್ಲಿ ಅಂದರೆ ಹೆಬ್ಬಾಗಿಲಿನಲ್ಲಿ ಇರುವ ನಾಲಗೆ, ಜೀರ್ಣ ಪ್ರಕ್ರಿಯೆಗೆ ಅತೀ ಅಗತ್ಯ. ನಾವು ತಿನ್ನುವ ಆಹಾರದ ರುಚಿ ಸವಿಯಲು, ಆಹಾರ ಪದಾರ್ಥಗಳನ್ನು ಸೂಕ್ತವಾಗಿ ಜಗಿಯಲು, ಸ್ಪಷ್ಟವಾಗಿ ಮಾತನಾಡಲು ನಾಲಗೆಯ ಸಹಕಾರ ಅತೀ ಅಗತ್ಯ. ಈ ಕಾರಣದಿಂದಲೇ ನಮ್ಮ ಹಿರಿಯರು “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ” ಎಂದು ಹೇಳಿದ ಮಾತು ಬಹಳ ಅರ್ಥಪೂರ್ಣ ಮತ್ತು ಸಾಂದರ್ಭಿಕವೂ ಹೌದು. ಮಾತು ತಪ್ಪಿದಲ್ಲಿ ಅಥವಾ ಎಡವಿದಲ್ಲಿ ಜಗಳಕ್ಕೆ ಮೂಲ ಮತ್ತು ನಾಲಗೆ ದಾಸನಾದಲ್ಲಿ ರೋಗಕ್ಕೆ ನಾಂದಿ ಹಾಡಿದಂತೆ ಎಂದರೂ ತಪ್ಪಲ್ಲ. ಬಹುಷಃ ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರಣದಿಂದ ಜೀವನದಲ್ಲಿ ವೈದ್ಯರ ಬಳಿ ಒಮ್ಮೆಯಾದರೂ ಹೋಗಿರಲೇಬೇಕು. ನಾಡಿಬಡಿತ ಮತ್ತು ಹೃದಯದ ಬಡಿತದ ಪರೀಕ್ಷೆಯ ಬಳಿಕ, ವೈದ್ಯರು ‘ಎಲ್ಲಿ ನಿಮ್ಮ ನಾಲಗೆ ತೋರಿಸಿ’ ಎಂದು ನಾಲಗೆಯ ಆಕಾರ, ಬಣ್ಣ, ಗಾತ್ರ ಮತ್ತು ಮೇಲ್ಪದರದ ರಚನೆಯನ್ನು ಕೂಲಂಕುಶವಾಗಿ ಪರೀಕ್ಷಿಸುತ್ತಾರೆ. ಯಾಕೆಂದರೆ ಹಲವಾರು ರೋಗಗಳ ಲಕ್ಷಣಗಳು ನಾಲಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆರೋಗ್ಯವಾಗಿರುವ ನಾಲಗೆ ಗುಲಾಬಿ ಬಣ್ಣದ್ದಾಗಿರುತ್ತದೆ ಮತ್ತು ಶುಭ್ರವಾಗಿರುತ್ತದೆ. ರುಚಿಗ್ರಂಥಿಗಳು ಮತ್ತು ಜೊಲ್ಲುರಸ ಗ್ರಂಥಿಗಳಿಂದ ಕೂಡಿದ್ದು ನಾಲಗೆಯ ಮೇಲ್ಭಾಗ ಯಾವಾಗಲೂ ದೊರಗಾಗಿದ್ದು ಸಣ್ಣ ಸಣ್ಣ ಗುಳ್ಳೆಗಳಿಂದ ಸಮೃದ್ಧ ವಾಗಿರುತ್ತದೆ. ಆರೋಗ್ಯ ಪೂರ್ಣ ನಾಲಗೆಯ ಮೇಲ್ಭಾಗದಲ್ಲಿ ಯಾವುದೇ ರೀತಿಯ ಶೇಖರಣೆಯಿಲ್ಲದೆ ಶುದ್ಧವಾಗಿ, ಶುಭ್ರವಾಗಿ, ತೆಳುಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿರುತ್ತದೆ. ಅದೇ ರೀತಿ ಆರೋಗ್ಯವಂತ ನಾಲಗೆಯ ಚಲನೆ ಕೂಡ ಪರಿಪೂರ್ಣವಾಗಿದ್ದು, ಯಾವುದೇ ಅಡಚಣೆ ಮತ್ತು ನೋವಿಲ್ಲದೆ ಎಲ್ಲಾ ದಿಶೆಗಳಲ್ಲಿ ಚಲಿಸುವ ಸಾಮಥ್ರ್ಯ ಹೊಂದಿರುತ್ತದೆ.

ನಾಲಗೆ ಕೇವಲ ನಾಲ್ಕು ಅಂಗುಲದ ಅಂಗವೇ ಆದರೂ ನಾಲಗೆ ನಿರ್ವಹಿಸುವ ಕೆಲಸ ಮಾತ್ರ ಊಹೆಗೆ ನಿಲುಕದು. ನಾವು ಸೇವಿಸುವ ಆಹಾರದ ರುಚಿ ತಿಳಿಯುವುದು ನಾಲಗೆಯ ಮೂಲಕವೇ. ನಾಲಗೆಯ ಚಲನೆಯಿಂದ ನಮ್ಮ ಮಾತಿಗೆ ಸ್ಪಷ್ಟತೆ ದೊರಕುತ್ತದೆ. ನಾಲಗೆ ಒಸರುವ ಲಾಲಾರಸದಿಂದ ಆಹಾರ ನುಂಗುವುದಕ್ಕೆ ಅನುವಾಗುವಂತೆ ನುಣ್ಣಗೆ ಅರೆಯಲ್ಪಡುತ್ತದೆ. ಬಾಯಿಯನ್ನು ತೇವವಾಗಿ ಇಡುವುದರಲ್ಲಿಯೂ ನಾಲಿಗೆ ಪ್ರಮುಖ ಪಾತ್ರ ವಹಿಸುತ್ತದೆ.

ನಾಲಗೆಯ ತಳಭಾಗದಲ್ಲಿರುವ ಪ್ರೀನಮ್ (Frenum) ಎನ್ನುವ ತಂತುವಿನ ಮುಖಾಂತರ ನಾಲಿಗೆ ಬಾಯಿಯ ಒಳಭಾಗಕ್ಕೆ ಅಂಟಿಕೊಂಡಿರುತ್ತದೆ. ನಾಲಗೆಯ ಮೇಲ್ಪದರದಲ್ಲಿ ತೆಳ್ಳನೆಯ ಚಿಪ್ಪುಗಳಂತಹ ರಕ್ಷಾಕವಚವಿದ್ದು ಈ ಚಿಪ್ಪುಗಳಲ್ಲಿ ನಾಡಿ ತಂತುಗಳ ತುದಿಗಳಿದ್ದು, ಇವುಗಳು ರುಚಿಗೆ ಪ್ರಕ್ರಿಯಿಸುವ ಗುಣ ಹೊಂದಿರುತ್ತದೆ. ಈ ನಾಡಿಗಳ ತುದಿಯನ್ನು ಪಾಪಿಲ್ಲೆ (Papillae) ಎನ್ನುತ್ತಾರೆ. ಈ ಪಾಪಿಲ್ಲೆಗಳ ನಡುವೆ ರುಚಿ ಗ್ರಂಥಿಗಳು ಮತ್ತು ಸಣ್ಣ ಜೊಲ್ಲುರಸಗ್ರಂಥಿಗಳು ಇರುತ್ತವೆ. ಈ ರುಚಿಗ್ರಂಥಿಗಳು ಇರುವ ಕಾರಣದಿಂದಲೇ ನಾಲಗೆಯ ಮೇಲ್ಬಾಗ ದೊರಗಾಗಿದ್ದು, ಮೆತ್ತಗಾಗಿ ಇರುತ್ತದೆ. ಹಲವಾರು ರೋಗಗಳಲ್ಲಿ ಈ ಗ್ರಂಥಿಗಳ ಮೇಲೆ ಪಾಚಿ ಕಟ್ಟಿಕೊಂಡು ರೋಗಗ್ರಸ್ತವಾದ ರೀತಿಯಲ್ಲಿ ನಾಲಗೆ ಕಾಣಬಹದು. ರಕ್ತಹೀನತೆ ಇದ್ದಲ್ಲಿ ನಾಲಗೆ ತನ್ನ ದೊರಗನ್ನು ಕಳಕೊಂಡು ಬೋಳಾಗಿ ಕಾಣಿಸಬಹುದು. ನಾಲಗೆಯ ಆಕಾರ, ಗಾತ್ರ, ಸ್ವರೂಪ, ರಚನೆ ಮತ್ತು ಮೇಲ್ಪದರದ ರಚನೆಯಿಂದ ವೈದ್ಯರಿಗೆ ಹಲವಾರು ರೋಗಗಳ ಬಗೆಗಿನ ಹೆಚ್ಚಿನ ಮಾಹಿತಿ ದೊರಕಿ ರೋಗ ನಿರ್ಣಯಕ್ಕೆ ಸಹಕಾರಿಯಾಗಬಹುದು.

ನಾಲಗೆಯಲ್ಲಿ ಕಾಣಸಿಗುವ ರೋಗಗಳು

ರಕ್ತದಲ್ಲಿನ ಕಬ್ಬಿಣ ಮತ್ತು ವಿಟಮಿನ್ ಕೊರತೆ, ರಕ್ತಹೀನತೆ, ಅಲರ್ಜಿ, ರಕ್ತದ ಕ್ಯಾನ್ಸರ್ ಮತ್ತಿತರ ರಕ್ತ ಸಂಬಂಧಿ ಕಾಯಿಲೆಗಳು, ಏಡ್ಸ್, ಹೆಪಟೈಟಿಸ್ ಮುಂತಾದ ದೇಹದ ರಕ್ಷಣಾ ವ್ಯವಸ್ಥೆಯನ್ನು ಹದಗೆಡಿಸುವ ರೋಗಗಳು, ಅತಿಯಾದ ಆಂಟಿಬಯೋಟಿಕ್ (ರೋಗ ನಿರೋಧಕ ಔಷಧಿಗಳು)ಗಳ ಸೇವನೆ, ಪೋಲಿಕ್ ಆಸಿಡ್ ಎಂಬ ವಿಟಮಿನ್ ಕೊರತೆ ಹೀಗೆ ಹಲವಾರು ಖಾಯಿಲೆಗಳ ಲಕ್ಷಣಗಳು ನಾಲಗೆಯಲ್ಲಿ ಗೋಚರವಾಗುತ್ತದೆ.
ನಾಲಗೆಯ ಬಣ್ಣ ಮತ್ತು ರೋಗದ ಚಿಹ್ನೆಗಳಿಗಣುವಾಗಿ ನಾಲಗೆಯನ್ನು ಬಿಳಿ ನಾಲಗೆ, ಸ್ಟ್ರಾಬೆರಿ ನಾಲಗೆ., ಕಪ್ಪು ನಾಲಗೆ ಮತ್ತು ಕೆಂಪು ನಾಲಗೆ ಹೀಗೆ ಹಲವು ವಿಧಗಳಲ್ಲಿ ವಿಂಗಡಿಸಲಾಗಿದೆ.

ಬಿಳಿ ನಾಲಗೆ (White Tongue)

ಲ್ಯೂಕೋಪ್ಲೇಕಿಯಾ ಎಂಬ ಕ್ಯಾನ್ಸರ್ ಪೂರ್ವ ರೋಗದಲ್ಲಿ ನಾಲಗೆಯ ಮೇಲೆ ಬಿಳಿ ಬಣ್ಣದ ಕಲೆಗಳು ಕಾಣಿಸಿಕೊಳ್ಳಬಹುದು. ಅದೇ ರೀತಿ ಕಾಂಡಿಡಿಯೋಸಿಸ್ ಎಂಬ ರೋಗದಲ್ಲಿ ನಾಲಗೆಯ ಮೇಲೆ ಬಿಳಿಯಾದ ಪದರವು ಕಾಣಿಸಿಕೊಳ್ಳಬಹುದು. ಅತಿಯಾದ ಮಧುಮೇಹದಿಂದಾಗಿ ಬಾಯಿ ಶುಚಿತ್ವ ಕಾಪಾಡಿಕೊಳ್ಳದಿದ್ದಾಗ ಮತ್ತು ದೇಹದ ರಕ್ಷಣಾ ವ್ಯವಸ್ಥೆ ಶಿಥಿಲವಾಗದಾಗ, ಅತಿಯಾದ ಸ್ಟೀರ್ಯಾಡ್ ಮದ್ದುಗಳ ಸೇವನೆ ಮತ್ತು ಅತಿಯಾದ ಅಂಟಿಬ್ಯಯೋಟಿಕ್‍ಗಳ (ರೋಗ ನಿರೋಧಕ ಔಷಧಿ) ಸೇವನೆಯಿಂದ ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟು ಬಾಯಿಯಲ್ಲಿರುವ ಉಪಕಾರಿ ಕ್ರಿಮಿಗಳು ನಾಶವಾಗಿ ಉಪದ್ರಕಾರಿ ಕ್ರಿಮಿಗಳು ವೃದ್ಧಿಸಿ, ಸಮಯ ಸಾಧಕ ರೋಗಾಣುಗಳು ಹೆಚ್ಚಾಗಿ, ನಾಲಗೆಯಲ್ಲಿ ಬಿಳಿ ಪದರವು ಕಣಿಸಿಕೊಳ್ಳಬಹುದು. ದೇಹದ ರಕ್ಷಣಾ ವ್ಯವಸ್ಥೆ ಶಿಥಿಲವಾಗದಂತೆ ಸೂಕ್ತ ಕ್ರಮ ಕೈಗೊಂಡಲ್ಲಿ ಮತ್ತು ಬಾಯಿಯ ಶುಚಿತ್ವ ಕಾಪಾಡಿಕೊಂಡಲ್ಲಿ ಈ ರೀತಿಯ ತೊಂದರೆಗಳನ್ನು ನಿವಾರಿಸಬಹುದು. ಅದೇ ರೀತಿಯ ಲೈಕೆನ್‍ಪ್ಲಾನೆಸ್ ಎಂಬ ಕ್ಯಾನ್ಸರ್ ಪೂರ್ವ ರೋಗದಲ್ಲಿ ನಾಲಗೆ ಮೇಲೆ ಬಿಳಿ ಮತ್ತು ಕೆಂಪು ಮಿಶ್ರಿತ ಕಲೆಗಳು ಕಾಣಿಸಿಕೊಳ್ಳಬಹುದು. ಇದನ್ನು ಕೂಡ ದಂತ ವೈದ್ಯರ ಬಳಿ ತೋರಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.

ಕೆಂಪು ನಾಲಗೆ (Red Tongue)

ವಿಟಮಿನ್ B2 ಎಂಬ ವಿಟಮಿನ್‍ನ ಕೊರತೆಯಿಂದ ನಾಲಗೆ ಊದಿಕೊಂಡು ತನ್ನ ಗುಲಾಬಿ ಬಣ್ಣ ಕಳೆದುಕೊಂಡು ಕೆಂಪು ಬಣ್ಣದಿಂದ ಗೋಚರಿಸಬಹುದು. ಅದೇ ರೀತಿ ಪೋಲಿಕ್‍ಆಸಿಡ್ ಎಂಬ ವಿಟಮಿನ್ ಕೊರತೆಯಿಂದಲೂ ಕೆಂಪು ನಾಲಗೆ ಕಾಣಿಸಿಕೊಳ್ಳಬಹುದು. ಸೂಕ್ತ ವೈದ್ಯರ ಸಲಹೆಯನ್ನು ಸಕಾಲದಲ್ಲಿ ತೆಗೆದುಕೊಂಡಲ್ಲಿ ಈ ಕೆಂಪು ನಾಲಗೆಯನ್ನು ಗುಣಪಡಿಸಬಹುದು. ಅದೇ ರೀತಿ ಬಿನೈನ್ ಮೆಗ್ರೇಟರಿ ಗ್ಲೊಸೈಟಿಸ್ ಎಂಬ ರೋಗದಲ್ಲಿ ನಾಲಗೆಯ ಮೇಲೆ ಗೋಲಾಕಾರದ ಕೆಂಪು ಕಲೆಗಳು ಕಾಣಿಸಿಕೊಳ್ಳಬಹುದು. ಇವುಗಳು ಭೂಗೋಲಾದಾಕೃತಿಯಲ್ಲಿದ್ದು ತನ್ನ ಸ್ಥಾನವನ್ನು ಬದಲಿಸಲೂಬಹುದು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಿಬಹುದು. ಕೆಂಪುಕಲೆಗಳ ಸುತ್ತಲೂ ಬಿಳಿಯಾದ ಒಂದು ಕವಚ ಗೆರೆಯೂ ಇರಬಹುದು. ಈ ರೋಗಕ್ಕೆ ಯಾವುದೇ ಔಷಧಿಯ ಅವಶ್ಯಕತೆ ಇರುವುದಿಲ್ಲ.

ಸ್ಟ್ರಾಬೆರಿ ನಾಲಿಗೆ (Strawberry Tongue)

ಸ್ಕಾರೆಟ್ ಜ್ವರದಲ್ಲಿ ಸ್ಟ್ರಾಬೆರಿ ಹಣ್ಣಿನಂತೆ ನಾಲಗೆ ಕೆಂಪಾಗಿ ಊದಿಕೊಂಡು ಇರಬಹುದು. ವಿಪರೀತ ಜ್ವರವೂ ಇರಬಹುದು. ಇದಕ್ಕೆ ಸೂಕ್ತ ಚಿಕಿತ್ಸೆ ಅತೀ ಅಗತ್ಯ. ಸಾಮಾನ್ಯ ಜ್ವರ ಬಂದಾಗ ನಾಲಗೆಯ ರುಚಿ ಶಕ್ತಿ ಕಡಿಮೆಯಾಗಿ ಬಿಳಿಯಾದ ಪದರ ನಾಲಗೆಯ ಮೇಲೆ ಕಾಣಿಸಿಕೊಳ್ಳಬಹುದು ಕೆಲವೊಮ್ಮೆ ತೆಳುಕೆಂಪಾಗಿ ಗೋಚರಿಸಬಹುದು. ಜ್ವರ ಕಡಿಮೆಯದಾಗ ತನ್ನಂತಾನೆ ಮೊದಲಿನ ಗಾತ್ರ ಮತ್ತು ಬಣ್ಣಕ್ಕೆ ಬರಬಹುದು. ಒಟ್ಟಿನಲ್ಲಿ ವಿಪರೀತ ಜ್ವರವಿದ್ದಲ್ಲಿ ಜೊತೆಗೆ ಕೆಂಪಾದ ನಾಲಿಗೆ ಊದಿಕೊಂಡಿದ್ದಲ್ಲಿ ವೈದ್ಯರ ಮಾರ್ಗದರ್ಶನ ಅತೀ ಅಗತ್ಯ.

ಉರಿಯೂತದ ನಾಲಗೆ Burning Mouth Syndrome)ಸಾಮಾನ್ಯವಾಗಿ ರಸದೂತಗಳ ಏರುಪೇರಿನ ಸಮಯದಲ್ಲಿ ಋತುಚಕ್ರ ಮತ್ತು ಋತುಬಂಧ ಸಮಯದಲ್ಲಿ ನಾಲಿಗೆ ತನ್ನ ಗಡಸುತನ ಕಳಗೊಂಡು ಉರಿತ ಉಂಟಾಗಬಹುದು. ಪ್ಯಾಪಿಲ್ಲೆಗಳ ಸಂಖ್ಯೆ ಕಡಿಮೆಯಾಗಿ ನಾಲಗೆ ಬೋಳಾಗಿ ಕಾಣಿಸಬಹುದು. ಖಾರ, ಉಪ್ಪು ಮಾಸಾಲೆಯುಕ್ತ ಪದಾರ್ಥ ಸೇವಿಸಿದಾಗ ವಿಪರೀತ “ಉರಿ” ನೋವು ಉಂಟಾಗಬಹುದು.’

ಧೂಮಪಾನಿಗಳ ನಾಲಗೆ : (Smokers Toungue)

ದೂಮಪಾನಿಗಳಲ್ಲಿ ಸಾಮಾನ್ಯವಾಗಿ ನಾಲಗೆ ಊದಿಕೊಂಡು ಕೆಂಪಾಗಿ ಇರುತ್ತದೆ. ಧೂಮಪಾನ ತ್ಯಜಿಸಿದ ಒಂದೆರಡು ವಾರಗಳಲ್ಲಿ ಮೂಲಸ್ಥಿತಿಗೆ ಬರಬಹುದು. ದೀರ್ಘಕಾಲದ ಧೂಮಪಾನಿಗಳಲ್ಲಿ ನಾಲಗೆ ಸುಟ್ಟುಹೋದಂತಾಗಿ ಇರಬಹುದು ಮತ್ತು ತನ್ನ ರುಚಿ ಕಂಡುಕೊಳ್ಳುವ ಸಾಮಥ್ರ್ಯವನ್ನು ಕಳೆದುಕೊಳ್ಳಬಹುದು. ಕೆಲವೊಮ್ಮೆ ಬಿಳಿಕಲೆಗಳೂ ಕಾಣಿಸಿಕೊಳ್ಳಬಹುದು.

ಬೋಳು ನಾಲಗೆ (Bald Tongue)

ಸಾಮಾನ್ಯವಾಗಿ ರಕ್ತಹೀನತೆಯಿಂದ ಬಳಲುವವರು ಬೋಳು ನಾಲಗೆ ಹೊಂದಿರುತ್ತಾರೆ. ನಾಲಗೆಯ ಮೇಲಿನ ಪ್ಯಾಪಿಲ್ಲೆಗಳು ಮತ್ತು ಲಾಲಾರಸ ಮತ್ತು ರುಚಿಗ್ರಂಥಿಗಳ ಸಂಖ್ಯೆ ಕ್ಷೀಣಿಸಿ ನಾಲಗೆ ನುಣ್ಣಗೆ ಬೋಳಾಗಿ ಕಾಣಬಹುದು. ಮತ್ತು ನಾಲಗೆಯು ಬಿಳಿಚಿಕೊಂಡು ರಕ್ತಹೀನವಾಗಿ ತೋರುತ್ತದೆ. ಬೋಳು ನಾಲಗೆ ಇದ್ದಲ್ಲಿ ಖಂಡಿತವಾಗಿಯೂ ರಕ್ತ ಪರೀಕ್ಷೆ ಮಾಡಿ ರಕ್ತ ಹೀನತೆಯನ್ನು ಇದೆಯೇ ಇಲ್ಲವೋ ಎಂದು ದೃಢಪಡಿಸಬೇಕು.

ಕಪ್ಪು ನಾಲಗೆ : (Black Tongue)

ಏಡ್ಸ್ ರೋಗದಲ್ಲಿ ನಾಲಗೆಯ ಮೇಲೆ ಕಪ್ಪಾದ ಪದರ ಕಾಣಿಸಿಕೊಳ್ಳಬಹುದು ಮತ್ತು ಕೂದಲಿನಂತೆ ಪ್ಯಾಪಿಲ್ಲೆಗಳು ಉದ್ದವಾಗಿ ಬೆಳೆದುಕೊಂಡು ಅಸಹ್ಯವಾಗಿ ಕಾಣಬಹುದು. ಅದೇ ರೀತಿ ಅತಿಯಾದ ಮಧುಮೇಹಿಗಳಲ್ಲಿ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ಕೀಮೋಥೆರಫಿಯ ಸಂದರ್ಭದಲ್ಲಿಯೂ ಕಪ್ಪು ಬಣ್ಣದ ನಾಲಗೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ರೋಗನಿರೋಧಕ ಔಷಧಿಗಳ ಅಡ್ಡ ಪರಿಣಾಮವಾಗಿ ಕಪ್ಪು ನಾಲಗೆ ಉಂಟಾಗಬಹುದು.

ನಾಲಗೆ ಅರ್ಬುದರೋಗ

ನಾಲಗೆಯ ಅರ್ಬುದ ರೋಗವಿದ್ದಲ್ಲಿ, ನಾಲಗೆಯಲ್ಲಿ ಹುಣ್ಣು ಇರಬಹುದು. ಯಾವುದೇ ಮದ್ದಿನಿಂದ ಗುಣವಾಗಲಿಕ್ಕಿಲ್ಲ. ಮುಟ್ಟಿದಾಗ ರಕ್ತ ವಸರಬಹುದು ಮತ್ತು ತಳಭಾಗದಲ್ಲಿ ಗಟ್ಟಿಯಾಗಿ ಇತರ ಅಂಗಗಳಿಗೆ ಹಿಡಿದಿಟ್ಟಂತೆ ಅನುಭವವಾಗುತ್ತದೆ. ನಾಲಗೆ ತನ್ನ ಮೃದುತ್ವ ಕಳಕೊಂಡು ಕಲ್ಲಿನಂತೆ ಗಟ್ಟಿಯಾಗಬಹುದು. ನಾಲಗೆಯ ಹುಣ್ಣು ಯಾವತ್ತೂ ಅಪಾಯಕಾರಿ ಮತ್ತು ವೈದ್ಯರ ಸಲಹೆ ಅತೀ ಅಗತ್ಯ.

ಕೊನೆಮಾತು

ನಾಲಗೆ ನಮ್ಮ ದೇಹದ ಬಹಳ ಅತ್ಯಂತ ಬಲಿಷ್ಠವಾದ ಮಾಂಸಖಂಡಗಳಿಂದ ಕೂಡಿದ ಸ್ನಾಯುಯುಕ್ತ ಅಂಗ. ನಮ್ಮ ಜೀವನದಲ್ಲಿ ನಾಲಗೆಯ ಪಾತ್ರ ಅತೀ ಮಹತ್ವದ್ದು. ನಮ್ಮ ದೇಹದ ಮಾನಸಿಕ ಸ್ಥಿತಿಯನ್ನು ಮಾತ್ರವಲ್ಲದೇ, ದೈಹಿಕ ಆರೋಗ್ಯದ ಸ್ಥಿತಿಯನ್ನು ಹೇಳುತ್ತದೆ. ಹೆಚ್ಚು ಹೆಚ್ಚು ಎಲ್ಲೆಂದರಲ್ಲಿ ಅನಗತ್ಯ ಮಾತಾಡುವವರಿಗೆ ಉದ್ದ ನಾಲಗೆಯವರು ಎಂದೂ, ಮಾತನಾಡಲು ಹೆದರುವ ಅಂಜು ಬುರುಕರಿಗೆ ನಾಲಗೆಯಿಲ್ಲದ ಮನುಷ್ಯ ಎಂದೂ, ಮುಲಾಜಿಲ್ಲದೆ ಕಡ್ಡಿ ಮುರಿದಂತೆ, ಮುಖಕ್ಕೆ ಬಡಿದಂತೆ ಮಾತಾನಾಡುವವರನ್ನು ಹರಿತ ನಾಲಗೆಯವರೆಂದೂ, ದಿನಕ್ಕೊಂದು ಮಾತನಾಡುವ ದ್ವಂದ್ವ ಮನಸ್ಸಿನ ಕಪಟಿಗಳನ್ನು ಎರಡು ನಾಲಗೆಯವರೆಂದೂ ಸಮಾಜ ಜನರನ್ನು ಮತ್ತು ಅವರ ಮನೋಸ್ಥಿತಿಯನ್ನು ಗುರುತಿಸುತ್ತದೆ. ಇತಿಹಾಸದಲ್ಲೂ, ಪುರಾಣದಲ್ಲೂ ನಾಲಿಗೆಗೆ ಮಹತ್ವದ ಸ್ಥಾನವಿದೆ. ನಾಲಗೆಯಿಂದಾಗಿ ಹಲವಾರು ಚಾರಿತ್ರಿಕ ಕದನಗಳೂ ಆಗಿದೆ. ಪುರಾಣ ಕಥೆಗಳಲ್ಲೂ ಕೃಷ್ಣ ಪರಮಾತ್ಮ ಬಾಯಿ ತೆರೆದು ಬ್ರಹ್ಮಾಂಡ ತೋರಿಸಿದ ಯಶೋಧೆಗೆ ಎಂದು ಕಥೆ ಕೇಳಿದ್ದೇವೆ. ಆದರೆ ವೈದ್ಯರಿಗಂತೂ ‘ನಾಲಗೆ’ ಎಂದರೆ ರೋಗಗಳನ್ನು ಪತ್ತೆಹಚ್ಚುವ ಕೆಲಸಕ್ಕೆ ರಹದಾರಿ ನೀಡುವ ಬಹುಮುಖ್ಯ ಅಂಗ ಎಂದರೂ ತಪ್ಪಲ್ಲ. ಹಲವಾರು ರೋಗಗಳನ್ನು ಬಾಯಿ ತೆರೆದು ನಾಲಗೆ ಪರೀಕ್ಷಿ, ಸರಿಯಾದ ಪೂರ್ವಾಪರ ರೋಗದ ವಿಚಾರಣೆ ನಡೆಸಿ ರೋಗವನ್ನು ಪತ್ತೆ ಹಚ್ಚುವಲ್ಲಿ ‘ ನಾಲಗೆ’ಯ ಬಳುವಳಿ ಮಾತ್ರ ಬಹಳ ದೊಡ್ಡದು. ಬ್ರಹ್ಮ ಬರೆದ ಹಣೆಬರಹ ಓದಲು ಯಾರಿಗೂ ಸಾಧ್ಯವಾಗದೇ ಹೋದರೂ ನಾಲಗೆ ಮೇಲೆ ಬರೆದ ಬರಹವಂತೂ ವೈದ್ಯರಿಗೆ ವರದಾನ ಎಂದರೂ ತಪ್ಪಲ್ಲ.

ಡಾ|| ಮುರಲೀ ಮೋಹನ್ ಚೂಂತಾರು

BDS,MDS,DNB, MBA,
MOSRCSEd(UK)
Consultant Oral and Maxillofacial Surgeon.
ಸುರಕ್ಷಾ ದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787
www surakshadental.com

Related Posts

Leave a Reply

Your email address will not be published.