ಕಡಬ: ತೆಪ್ಪ ಮಗುಚಿ ಮಹಿಳೆ ನೀರು ಪಾಲು

ಕಡಬ ತಾಲೂಕಿನ ಕೊಯಿಲ ಗ್ರಾಮದ ಏಣಿತಡ್ಕ ಎಂಬಲ್ಲಿ ಕುಮಾರಾಧಾರ ನದಿಯಲ್ಲಿ ತೆಪ್ಪದಲ್ಲಿ ಸಾಗುತ್ತಿದ್ದಾಗ ಆಕಸ್ಮಿಕವಾಗಿ ತೆಪ್ಪ ಮಗುಚಿ ಮಹಿಳೆಯೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಏಣಿತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬವರ ಪತ್ನಿ ಗೀತಾ (47) ಎಂದು ಗುರುತಿಸಲಾಗಿದೆ.
ದನಗಳಿಗೆ ಮೇವಿನ ಹುಲ್ಲು ತರುವುದಕ್ಕಾಗಿ ಏಣಿತಡ್ಕ ಭಾಗದಿಂದ ನದಿಯ ಇನ್ನೊಂದು ಭಾಗ ಆರೆಲ್ತಡಿ ಎಂಬಲ್ಲಿಗೆ ತೆಪ್ಪದಲ್ಲಿ ತೆರಳಿ ಹುಲ್ಲು ಎರೆದು ಮೂಟೆಕಟ್ಟಿಕೊಂಡು ತಿರುಗಿ ತೆಪ್ಪದಲ್ಲಿ ಬರಬೇಕಾದರೆ ಈ ದುರ್ಘಟನೆ ನಡೆದಿದೆ. ತೆಪ್ಪದಲ್ಲಿ ಹುಲ್ಲಿನ ಮೂಟೆಯೊಂದಿಗೆ. ಮೂರು ಜನ ಇದ್ದ ತೆಪ್ಪ ನದಿ ಮಧ್ಯೆ ಬರುತ್ತಿದ್ದಂತೆ ಜೋರು ಗಾಳಿ ಬೀಸಿದೆ. ಪರಿಣಾಮ ತೆಪ್ಪ ನೀರು ತುಂಬಿ ಆಕಸ್ಮಿಕವಾಗಿ ಮಗುಚಿ ಬಿದ್ದಿದೆ. ಆದರೆ ಹುಲ್ಲಿನ ಮೂಟೆಗಳು ತೇಲುತ್ತಿದ್ದವು. ಇವುಗಳ ಸಹಾಯದಿಂದ ಮೂರೂ ಜನ ಮಹಿಳೆಯರು ನೀರಿನ ಸೆಳೆತದಿಂದ ಪಾರಾಗಲು ಯತ್ನಿಸಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯರಾದ ವಿದ್ಯಾಲಕ್ಷ್ಮಿ ಹಾಗೂ ಸುನಂದ ಹುಲ್ಲಿನ ಮೂಟೆಯ ಸಹಾಯದಿಂದ ನದಿ ದಡ ಸೇರಿದ್ದಾರೆ. ಆದರೆ ಗೀತಾ ಅವರು ದಡ ಸೇರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯ ಈಜು ತಜ್ಞರು ನೀರಲ್ಲಿ ಮುಳಗಿದ್ದ ಮಹಿಳೆಯನ್ನು ಮೇಲಕ್ಕೆತ್ತಿದರೂ ಅಷ್ಟೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.