ಕಡಬ: ಮಕ್ಕಳಿಲ್ಲದ ಚಿಂತೆ: ವ್ಯಕ್ತಿ ಆತ್ಮಹತ್ಯೆ

ಮದುವೆಯಾಗಿ ಹಲವು ವರ್ಷ ಕಳೆದರೂ ಮಕ್ಕಳಾಗದ ಚಿಂತೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಕೊಯಿಲಾ ಗ್ರಾಮದ ಗುಲ್ಗೋಡಿ ನಿವಾಸಿ ತಿಮ್ಮಪ್ಪ ಗೌಡ (೭೦) ಎಂದು ಗುರಿತಿಸಲಾಗಿದೆ. ಇವರು ರಬ್ಬರ್ ಟ್ಯಾಪರ್ ಆಗಿದ್ದು, ಇತ್ತೀಚೆಗೆ ಕೊಲ್ಯದ ರೊಟ್ಟಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಮಕ್ಕಳಿಲ್ಲದ ಪರಿಣಾಮ ಅದೇ ಕೊರಗಿನಲ್ಲಿ ಮದ್ಯವ್ಯಸನಿಯಾಗಿದ್ದರು. ವಿಪರೀತ ಕುಡಿತದ ಚಟ ಇದ್ದುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಚಿಂತೆಯಲ್ಲಿದ್ದ ಮೃತರು ಪತ್ನಿ ಕಮಲ ಅವರು ಬ್ಯಾಂಕಿಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಪಕ್ಕದ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಂಬAಧಿ ಪ್ರಶಾಂತ್ ಕೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕಡಬ ಠಾಣಾ ಎಎಸ್‌ಐ ಚಂದ್ರಶೇಖರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
