ಕನ್ನಯ್ಯನನ್ನು ಹತ್ಯೆ ಮಾಡಿದವರಿಗೆ ಶರೀಯತ್ ಪ್ರಕಾರ ಶಿಕ್ಷೆ ನೀಡಿ : ಹಿಂಜಾವೇ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ ಆಗ್ರಹ
ಮೂಡುಬಿದಿರೆ: ಶರೀಯಾ ಬೇಕೆಂದು ಕೇಳುವ ನಿಮಗೆ ಸಿವಿಲ್ ಕೋಡ್, ಹಿಂದೂಗಳಿಗೆ ಕ್ರಿಮಿನಲ್ ಕೋಡ್ ಎಂದು ಹೇಳುವ ನೀವು ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯಲಾಲ್, ಅಮರಾವತಿಯಲ್ಲಿ ಮುಕೇಶ್‍ರನ್ನು ಹತ್ಯೆ ಮಾಡಿರುವ ಪಾತಕಿಗಳನ್ನು ಗಲ್ಲಿಗೇರಿಸಬೇಡಿ. ಅವರ ಕೈ-ಕಾಲುಗಳನ್ನು ಕತ್ತರಿಸಿ ಹಾಕಿ ಶರೀಯತ್ ಪ್ರಕಾರ ಶಿಕ್ಷೆ ನೀಡಿ ಇದು ಹಿಂದೂ ಸಮಾಜದ ಆಗ್ರಹ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಇತ್ತೀಚೆಗೆ ರಾಜಸ್ತಾನ, ಮಹಾರಾಷ್ಟ್ರದಲ್ಲಿ ಹಿಂದೂಗಳ ಹತ್ಯೆಯನ್ನು ಖಂಡಿಸಿ ಮೂಡುಬಿದಿರೆ ಹಿಂದೂ ಜಾಗರಣ ವೇದಿಕೆಯಿಂದ ಭಾನುವಾರ ರಾತ್ರಿ ನಡೆದ ಪಂಜಿನ ಮೆರವಣಿಗೆ ಹಾಗೂ ಖಂಡನಾ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಮತ್ತೆ ಮತ್ತೆ ಹಿಂದೂ ಸಮಾಜವನ್ನು ರೊಚ್ಚಿಗೇಳಿಸುವ ಪ್ರಯತ್ನ ಮಾಡಿದರೆ ನಿಮಗೆ ಉಳಿಗಾಲವಿಲ್ಲ. ಸೌಮ್ಯಯುತವಾದ ವಿವೇಕದ, ತಾಳ್ಮೆಯ ಕ್ಷಾತ್ರ ತೇಜಸ್ಸಿನ ಹಿಂದೂ ಸಮಾಜವನ್ನು ಕೆಣಕಿದರೆ ನಿಮ್ಮ ಅವಸಾನ ಖಂಡಿತಾ ಎಂದು ಎಚ್ಚರಿಸಿದರು.
ಮೂಡುಬಿದಿರೆಯ ಸಾವಿರ ಕಂಬದ ಬಸದಿಯಿಂದ ಸಮಾಜಮಂದಿರದವರೆಗೆ ನಡೆದ ಪಂಜಿನ ಮೆರವಣಿಗೆಗೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಚಾಲನೆಯನ್ನು ನೀಡಿ, ಹಿಂದುತ್ವದ ರಕ್ಷಣೆಯಲ್ಲಿ ಜಾಗರಣ ವೇದಿಕೆಯ ಕೆಲಸಗಳನ್ನು ಶ್ಲಾಘಿಸಿದರು.
ಶಾಸಕ ಉಮಾನಾಥ್ ಕೋಟ್ಯಾನ್, ಕೆಎಂಎಫ್ ನ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಜಾಗರಣ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ವಿಭಾಗ ಕಾರ್ಯದರ್ಶಿ ಮಹೇಶ್ ಬೈಲೂರು, ಮಂಗಳೂರು ಜಿಲ್ಲಾ ಉಸ್ತುವಾರಿ ಪ್ರಶಾಂತ್ ಕೆಂಪುಗದ್ದೆ, ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಸಮಿತ್‍ರಾಜ್ ದರೆಗುಡ್ಡೆ, ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ಕೆಲ್ಲಪುತ್ತಿಗೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೋಟ್ಯಾನ್, ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವ, ಮುಖಂಡರಾದ ಕೆ.ಪಿ ಜಗದೀಶ್ ಅಧಿಕಾರಿ, ಲಕ್ಷ್ಮಣ್ ಪೂಜಾರಿ, ಗೋಪಾಲ್ ಶೆಟ್ಟಿಗಾರ್ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೇರಿ 500 ಕ್ಕೂ ಅಧಿಕ ಮಂದಿ ಪಂಜಿನ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.