ಸೋಲಿನಿಂದ ಎದೆಗುಂದದಿರಿ… ನಾನಿರುವೆ ಸದಾ ನಿಮ್ಮೊಂದಿಗೆ.. : ಕಾರ್ಯಕರ್ತರಿಗೆ ಸೊರಕೆ ಅಭಯ
ಸೋಲು- ಗೆಲುವು ಎಲ್ಲಾ ರಂಗಗಳಲ್ಲಿಯೂ ಸಹಜ, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮೂಲಕ, ಸೋಲಿನ ಪರಾಮರ್ಶೆ ನಡೆಸಿ ಎಲ್ಲಿ ಎಡವಿದ್ದೇವೆಯೋ ಅಲ್ಲಿ ಎಚ್ಚೆತ್ತು ಕ್ರೀಡಾಸ್ಪೂರ್ತಿಯೊಂದಿಗೆ ಇನ್ನಷ್ಟು ಬಲಿಷ್ಠವಾಗಿ ಸಂಘಟನಾತ್ಮಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷ ಬಲವರ್ಧನೆಗೆ ಪಣ ತೊಡೋಣ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಕಾಪು ಬ್ಲಾಕ್ ಕಾಂಗ್ರೆಸ್ ಕಛೇರಿ “ರಾಜೀವ್ ಭವನ” ದಲ್ಲಿ ನಡೆದ ವಿಧಾನ ಚುನಾವಣೆಯಲ್ಲಿ ಅವಿರತ ಶ್ರಮಿಸಿದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಕೃತಜ್ಞತಾರ್ಪಣಾ ಸಭೆ”ಯಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ಜನರು ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿ ಪಕ್ಷವನ್ನು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ, ಕರಾವಳಿ ಭಾಗದಲ್ಲಿ ಅದಕ್ಕೆ ವ್ಯತಿರಿಕ್ತವಾದ ಫಲಿತಾಂಶ ಬಂದಿರುವುದು ನಿಜಕ್ಕೂ ಅಚ್ಚರಿ ಹಾಗೂ ಆಘಾತಕಾರಿಯಾಗಿದೆ.
ಚುನಾವಣಾ ಕಾರ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ನಿಷ್ಠೆ ಮತ್ತು ಅಭಿಮಾನದಿಂದ ಅವಿರತ ಶ್ರಮವಹಿಸಿದ್ದಾರೆ, ಆದರೆ ಮತದಾರರ ಮನ ಮುಟ್ಟುವಲ್ಲಿ ಸಂಪೂರ್ಣ ಯಶಸ್ಸು ಕಾಣಲು ವಿಫಲರಾಗಿರುವುದು ಹಾಗೂ ಪ್ರತಿಸ್ಪರ್ಧಿ ಅಭ್ಯರ್ಥಿಗಳಿಂದ ನಡೆದ ವ್ಯವಸ್ಥಿತ ಅಪಪ್ರಚಾರ ಹಾಗೂ ಹಣಬಲದ ಮುಂದೆ ನಮ್ಮ ಪ್ರಾಮಾಣಿಕ ಜನಸೇವೆ ಮಂಕಾಗಿ ಹೋಯಿತು.
ಸೋಲಾಯಿತೆಂದು ಕಾರ್ಯಕರ್ತರು ಯಾರೂ ವಿಚಲಿತರಾಗದೆ… ಯಾವುದೇ ಸಂದರ್ಭದಲ್ಲಿಯೂ ಎದೆಗುಂದಬೇಡಿ, ನಾನಂತೂ ನಿಮ್ಮೊಂದಿಗೆ ಈ ಹಿಂದೆ ಯಾವ ರೀತಿಯಲ್ಲಿ ನಿಮಗೆ ಸಹಕರಿಸಿ, ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಬೆಂಬಲಿಸುತ್ತಿದ್ದೇನೋ ಇನ್ನು ಅದಕ್ಕಿಂತಲೂ ಒಂದು ಪಟ್ಟು ಹೆಚ್ಚಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಅಭಯ ನೀಡಿದರು. ನಿಮ್ಮ ಸಹಕಾರ, ನನ್ನ ಮೇಲೆ ನೀವು ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ… ಪಕ್ಷದ ಕಾರ್ಯಕರ್ತರ ಜೊತೆಗೆ ನನಗಿರುವ ಅವಿನಾಭಾವ ಸಂಬಂಧವನ್ನು ನಾನು ಯಾವತ್ತಿಗೂ ಕಡಿದು ಕೊಳ್ಳುವುದಿಲ್ಲ, ಕಾರ್ಯಕರ್ತರ ಪ್ರೀತಿ-ಅಭಿಮಾನವೇ ನಾನು ರಾಜಕೀಯದಲ್ಲಿ ಸಂಪಾದಿಸಿರುವ ಬಹುದೊಡ್ಡ ಆಸ್ತಿ,
ಕಾಪು ಕ್ಷೇತ್ರದಲ್ಲಿ ನಮಗೆ ಸೋಲಾಗಿರಬಹುದು, ಆದರೆ ರಾಜ್ಯದ ಸರ್ಕಾರ ಕಾಂಗ್ರೆಸ್ ನದ್ದಾಗಿದೆ, ಹಾಗಾಗಿ ಅದರ ಪ್ರಯೋಜನವನ್ನು ಪಡೆದು ಅಭಿವೃದ್ಧಿಯ ದೃಷ್ಟಿಕೋಣ ದೊಂದಿಗೆ ಮುಂದೆ ಸಾಗೋಣ, ಸರ್ಕಾರದ ಸವಲತ್ತುಗಳನ್ನು ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಯತ್ನಿಸೋಣ ಈ ಮೂಲಕ ಮುಂಬರಲಿರುವ ತಾಲೂಕು ಪಂಚಾಯತ್/ ಜಿಲ್ಲಾಪಂಚಾಯತ್ ಹಾಗೂ 2024 ರ ಲೋಕಸಭಾ ಚುನಾವಣೆಗೆ ಸಜ್ಜಾಗೋಣ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಎಸ್. ಸುವರ್ಣ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕಾಂಗ್ರೆಸ್ ಮುಖಂಡ ರಾಜ್ ಶೇಖರ್ ಕೋಟ್ಯಾನ್ ಮುಂತಾದ ಪಕ್ಷದ ಪ್ರಮುಖರಿದ್ದರು.