ಪಶ್ಚಿಮ ಘಟ್ಟ, ಮಾಳ ಪರಿಸರದಲ್ಲಿ ಅಧಿಕ ಮಳೆ – ನೀರಿನ ಹಾಹಾಕಾರಕ್ಕೆ ಸ್ವಲ್ಪ ಮಟ್ಟಿನ ಬ್ರೇಕ್

ಕಾರ್ಕಳ ತಾಲೂಕಿನಲ್ಲಿ ಕಳೆದೆರಡು ದಿನ ಸಂಜೆ ಸುಮಾರು ಒಂದು ತಾಸಿಗೂ ಅಧಿಕ ಹೊತ್ತು ಮಳೆಯಾಗಿದ್ದು ಪಶ್ಚಿಮ ಘಟ್ಟದ ತಪ್ಪಲಿನ ಮಾಳ ಪರಿಸರ ಸಹಿತ ಆಸುಪಾಸಿನಲ್ಲಿ ಅಧಿಕ ಮಳೆಯಾದ ಪರಿಣಾಮ ಮುಂಡ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆ ಕಂಡು ಬಂದಿದೆ.
ನೀರಿನ ಒಳಹರಿವು ತುಸು ಹೆಚ್ಚಾಗಿದ್ದು ದೊಡ್ಡ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ನಿರೀಕ್ಷಿತ ನೀರಿನ ಮಟ್ಟ ಏರಿಕೆಯಾಗದೆ ತಿಳಿ ಬಣ್ಣದಲ್ಲಿ ನೀರು ಹರಿಯುತ್ತಿದೆ. ಸುಮಾರು ಎರಡು ತಿಂಗಳಿಂದ ಮೂಡ್ಲಿಯಲ್ಲಿ ನೀರಿಲ್ಲದೆ ಮೂಡ್ಲಿ ಜಲಾಶಯವು ಬರಿದಾಗಿದ್ದು ಕೆಲವು ದಿನಗಳಿಂದ ಸಾಧಾರಣ ಮಟ್ಟಿಗೆ ಜಲಾಶಯ ತುಂಬಿದೆ.
ಮೂರು ನಾಲ್ಕು ದಿನಗಳಿಂದ ಇಲ್ಲಿನ ಪಂಪ್ ಹೌಸಿನಲ್ಲಿ ದಿನದ 24 ಗಂಟೆಯೂ ನೀರೆತ್ತುವ ಪಂಪುಗಳು ಚಾಲನೆಯಲ್ಲಿದ್ದು ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಹಾಹಾಕಾರಕ್ಕೆ ಸ್ವಲ್ಪ ಮಟ್ಟಿಗೆ ಬ್ರೇಕ್ ಬಿದ್ದಂತಾಗಿದೆ.
