ಕೋಲಿಗೆ ಕಟ್ಟಿದ ಗಜ್ಜರಿ ನಿಗಮ ಮಂಡಳಿ

ಕರ್ನಾಟಕದಲ್ಲಿ 34 ಶಾಸಕರನ್ನು ನಿಗಮ ಮಂಡಳಿಗಳಿಗೆ ನೇಮಿಸಿ ಆದೇಶ ಹೊರಡಿಸಲಾಗಿದೆ. ಅವರಿಗೆಲ್ಲ ಮಂತ್ರಿ ಸ್ಥಾನಮಾನ ನೀಡಲಾಗಿದೆ. ಮಂತ್ರಿ ಮಂಡಲದಲ್ಲಿ 34 ಮಂದಿ ಇದ್ದಾರೆ. ಕಾರ್ಯದರ್ಶಿಗಳನ್ನೂ ಸೇರಿ ರಾಜ್ಯದಲ್ಲಿ ಮಂತ್ರಿ ಸ್ಥಾನಮಾನ ಪಡೆದವರ ಸಂಖ್ಯೆ 74ಕ್ಕೆ ಏರಿತು. ಎಲ್ಲ 4ರ ಮಹಿಮೆ. 4ನೇ ತಿಂಗಳಿನಲ್ಲಿ ಲೋಕ ಸಭೆ ಚುನಾವಣೆಯ ಬಿರುಸು. ಅದಕ್ಕೆ ಮೊದಲು ಅಸಮಾಧಾನ ಮರೆಸಿ ತಯಾರಾಗುವುದು ಗುರಿ. ಅದೇ ರಾಜಕೀಯದ ಕಿರಿಕಿರಿ.

ರಾಜನಾದವನ ಕುತ್ತಿಗೆಯ ಮೇಲೆ ಸದಾ ತೂಗುಗತ್ತಿ ಇರುತ್ತದೆ. ಚುನಾಯಿತ ಸರಕಾರಕ್ಕೆ ಐದು ವರುಷ ಆಳಲು ಅವಕಾಶ ಇದ್ದರೂ ಬಿಜೆಪಿಯವರ ಖರೀದಿ ರಾಜಕೀಯ ಮತ್ತು ಸದಾ ಗೋಡೆಯ ಮೇಲಿನ ಬೆಕ್ಕಿನಂತೆ ಇರುವ ನಿತೀಶ್ ಕುಮಾರ್ ಮಾದರಿಯ ರಾಜಕಾರಣಿಗಳ ಕಾರಣಕ್ಕೆ ಯಾವುದೂ ಸ್ಥಿರವಲ್ಲ. ಮಹಾರಾಷ್ಟ್ರದಲ್ಲಿ ಶಿವಸೇನೆಯವರೆ ಶಿವಸೇನೆಯ ಮುಖ್ಯಮಂತ್ರಿಗೆ ಕೈಕೊಟ್ಟು ಬಿಜೆಪಿಗೆ ಅಧಿಕಾರ ಕೊಟ್ಟು, ತಾವು ಮಂತ್ರಿ ಮುಖ್ಯಮಂತ್ರಿಗಳಾಗಿ ಕುಳಿತರು. ಇತಿಹಾಸದಲ್ಲಿ ಜಗತ್ತಿನಲ್ಲೇ ಅತಿ ಕ್ರೂರ ಹಿಂಸೆಗೆ ಒಳಗಾಗಿ ಸತ್ತ ಅರಸು ಎಂದು ಇಂಗ್ಲೆಂಡಿನ ಎಡ್ಮಂಡ್‍ರನ್ನು ಹೇಳಲಾಗುತ್ತದೆ. ಕ್ರಿಸ್ತ ಶಕ 869ರಲ್ಲಿ ವೈಕಿಂಗ್ ದಾಳಿಕೋರರು ಕಿಂಗ್ ಎಡ್ಮಂಡರ ಬೆನ್ನು ಮೂಳೆ ಸೀಳಿ, ಉಪ್ಪು ಸುರಿದು ನಾನಾ ರೀತಿಯಲ್ಲಿ ಹಿಂಸಿಸಿ ಸಾಯಿಸಿದರು. 18ನೇ ಶತಮಾನದ ಫ್ರೆಂಚ್ ಕ್ರಾಂತಿಯ ವೇಳೆ ಗಿಲೊಟಿನ್ ಮೂಲಕ ಕ್ರಾಂತಿಕಾರಿಗಳನ್ನು ಕೊಲ್ಲಲಾಯಿತು. ಕ್ರಾಂತಿಯ ಬಳಿಕ ಲೂಯಿಸ್ ರಾಜ ಕುಟುಂಬದ ಬಹುತೇಕರ ತಲೆಯನ್ನು ಗಿಲೊಟಿನ್ ಮೂಲಕ ಕತ್ತರಿಸಲಾಯಿತು.

ಎರಡನೆಯ ಪುಲಕೇಶಿಯ ಕಾಲದಲ್ಲಿ ರಾಜ್ಯದಲ್ಲಿ ಕಿರೀಟದ ಜಗಳ ಆಗದಂತೆ ಪುಲಕೇಶಿಯು ತಮ್ಮ ಕುಬ್ಜ ವಿಷ್ಣುವನ್ನು ವೆಂಗಿಯ ಅರಸನಾಗಿ ಮಾಡಿದ. ರಾಜ ವಂಶಜರನ್ನು ಬೇರೆ ಬೇರೆ ಕಡೆ ಈ ಕಾರಣಕ್ಕೆ ನೇಮಿಸಲಾಗುತ್ತಿತ್ತು. ಆದರೂ ನೃಪತುಂಗನ ಮಗ ತಂದೆಯ ವಿರುದ್ಧ ದಂಗೆ ಎದ್ದ. ಔರಂಗಜೇಬನು ಅಣ್ಣಂದಿರನ್ನು ಕೊಂದು, ತಂದೆಯನ್ನು ಗೃಹ ಬಂಧನದಲ್ಲಿ ಇಟ್ಟ. ಪುರಾಣ ಪ್ರಕಾರ ತನ್ನ ಮಕ್ಕಳಿಗೆ ರಾಜ ಪಟ್ಟಕ್ಕೆ ತಡೆ ಆಗಬಾರದು ಎಂದು ಮತ್ಸ್ಯ ಗಂಧಿಯು ಭೀಷ್ಮನು ಮದುವೆಯಾಗದಂತೆ ಮಾತು ಪಡೆದಳು. ಪಾಂಡವರು ಕೌರವರಿಂದ ಕೊನೆಗೆ ಅಯ್ದು ಊರಾದರೂ ಪಡೆದು ಸಂಧಾನ ಮಾಡಿಕೊಳ್ಳಲು ಬಯಸಿದ್ದರು. ರಾವಣನು ತನ್ನ ಭಾರತದ ಗಡಿಯನ್ನು ತಂಗಿಗೆ ಬಿಟ್ಟಿದ್ದ. ಇವಕ್ಕೆಲ್ಲ ಕೊನೆ ಮೊದಲಿಲ್ಲ.

ಸಂವಿಧಾನದ ರೀತ್ಯಾ ಉಪ ಪ್ರಧಾನಿ ಇರಲಿ, ಉಪ ಮುಖ್ಯಮಂತ್ರಿ ಇರಲಿ ಅವರು ಮಂತ್ರಿ ಹೊರತು ಬೇರೇನೂ ಅಲ್ಲ. ಆದರೂ ಪ್ರಧಾನಿ, ಮುಖ್ಯಮಂತ್ರಿಗಳ ಬಳಿಕ ತಾನೇ ಎಂಬುದನ್ನು ತೋರಿಸಲು ಆ ಹುದ್ದೆಗೆ ಗಂಟು ಬೀಳುತ್ತಾರೆ. ಪಟೇಲ್, ಮೊರಾರ್ಜಿ ದೇಸಾಯಿ, ಚರಣ್ ಸಿಂಗ್, ಜಗಜೀವನರಾಂ ಎಂದು ಆ ಪಟ್ಟಿ ದೊಡ್ಡದು. ಕರ್ನಾಟಕದಲ್ಲೂ ಆ ಪರಂಪರೆ ಬಂದಿದೆ. ರಾಜೀವ್ ಗಾಂಧಿಯವರು ಪ್ರಧಾನಿ ಆಗಿದ್ದಾಗ ಒಂದು ಕಾನೂನು ಮಾಡಿದರು. ವಿಧಾನ ಸಭೆಯ ಬಲದ 15 ಶೇಕಡಾ ಬಲ ಮೀರಿ ಮಂತ್ರಿಗಳ ಸಂಖ್ಯೆ ಇರಬಾರದು ಎಂದು. ಸಣ್ಣ ರಾಜ್ಯಗಳಿಗೆ ವಿನಾಯಿತಿ ಇದೆ. ಈ ಕಾನೂನು ಬರುವುದಕ್ಕೆ ಮೊದಲು ಅತೃಪ್ತರನ್ನು ತೃಪ್ತಿ ಪಡಿಸಲು ಜಂಬೋ ಜೆಟ್ ಮಂತ್ರಿ ಮಂಡಲ ರಚನೆಯಾದ ಉದಾಹರಣೆ ಇದೆ. ಆಂಧ್ರ ಪ್ರದೇಶ, ಕರ್ನಾಟಕ ಮೊದಲಾದ ರಾಜ್ಯಗಳು ಆ ಸ್ಥಿತಿ ಕಂಡಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಒಡೆದಾಗ ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸು ಅವರು ಅರ್ಧ ಶತಕ ಬಲದ ಮಂತ್ರಿ ಮಂಡಲ ರಚಿಸಿದ್ದರು.

ಅರಸೀಕೆರೆ ಶಾಸಕ ಶಿವಲಿಂಗೇ ಗೌಡ, ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ, ಭದ್ರಾವತಿಯ ಸಂಗಮೇಶ್ವರ, ಚಾಮರಾಜನಗರದ ಪುಟ್ಟರಂಗಶೆಟ್ಟಿ, ಶಾಂತಿ ನಗರದ ಹ್ಯಾರಿಸ್, ಹೊಸದುರ್ಗದ ಗೋವಿಂದಪ್ಪ ಮಂತ್ರಿ ಆಗಲು ಒತ್ತಡ ಹಾಕಿದ್ದರು. ಆದರೆ ರಾಜ್ಯದಲ್ಲಿ 34 ಮಂದಿ ಗಾತ್ರದ ಮಂತ್ರಿ ಮಂಡಲ ಮಾತ್ರ ಸಾಧ್ಯ. ಅದು ಈಗಾಗಲೇ ಆಗಿದೆ. ಹಾಗಾಗಿ ಈ ಮಂತ್ರಿ ಆಕಾಂಕ್ಷಿಗಳಿಗೆಲ್ಲ ಮಂತ್ರಿ ಸ್ಥಾನಮಾನದ ನಿಗಮ ಮಂಡಳಿ ನೀಡಲಾಗಿದೆ. ಅಷ್ಟಕ್ಕೇ ಅವರು ತೃಪ್ತರಾದಾರೆಯೇ ಎಂಬ ಪ್ರಶ್ನೆ ಇದೆ. ಅಲ್ಲದೆ ಕೆಲವು ನಿಗಮ ಮಂಡಳಿಗಳು ಹುಲ್ಲುಗಾವಲಿನಂತೆ ಇದ್ದರೆ ಮತ್ತೆ ಕೆಲವು ಬರಡು. ಹಾಗಾಗಿ ಬರಡು ನಿಗಮ ಮಂಡಳಿ ಪಡೆದ ಕೆಲವರು ಈಗಾಗಲೇ ರಾಗ ಎಳೆಯುತ್ತಿದ್ದಾರೆ. ಕಾರವಾರದ ಸತೀಶ್ ಸೈಲ್, ಬಾಗೇಪಲ್ಲಿಯ ಸುಬ್ಬಾರೆಡ್ಡಿ ಹಾಗೆ ಅಪಸ್ವರ ಎಬ್ಬಿಸಿದ ಶಾಸಕರು ಎನ್ನಲಾಗಿದೆ.

ನಿಗಮ ಮಂಡಳಿಗೆ ನೇಮಿಸುವಾಗ ಎರಡು ವರುಷದವರೆಗೆ ಇಲ್ಲವೇ ಮುಂದಿನ ಆದೇಶದವರೆಗೆ ಹುದ್ದೆ ಎಂದು ಆದೇಶದಲ್ಲಿ ಇರುತ್ತದೆ. ಹಾಗಾಗಿ ಎರಡು ವರುಷದ ಬಳಿಕ ಮಂತ್ರಿ ಮಂಡಲ ಮರು ರಚನೆ ಆದಾಗ ನಮಗೆ ಅವಕಾಶ ಆದೀತು ಎಂದು ಕೆಲವರು ಅಂದುಕೊಳ್ಳಬಹುದು. ಮತ್ತೆ ಕೆಲವರು ನಿಗಮ ಮಂಡಲಿ ಒಪ್ಪಿದರೆ ಮಂತ್ರಿ ಸ್ಥಾನಕ್ಕೆ ಎಳ್ಳು ನೀರು ಬಿಟ್ಟಂತೆಯೇ ಎಂದು ಹಲುಬುವವರೂ ಇದ್ದಾರೆ. ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಖನೀಜ್ ಫಾತಿಮಾ ಈ ಪಟ್ಟಿಯಲ್ಲಿ ಇರುವ ಇಬ್ಬರು ಅಲ್ಪಸಂಖ್ಯಾಕರಲ್ಲಿ ಇವರೊಬ್ಬರು ಕ್ರಿಶ್ಚಿಯನ್ ಕೋಟಾ ಇಲ್ಲ. ಇವರಲ್ಲದೆ ಈ ಪಟ್ಟಿಯಲ್ಲಿ ಪಟ್ಟ ಪಡೆದ ಇನ್ನೊಬ್ಬ ಮಹಿಳೆ ಕೆಜಿಎಫ್‍ನ ಶ್ರೀಮತಿ ರೂಪಕಲಾ. ಇವರು ಹಿಂದಿನ ಸಂಸದ ಹಾಲಿ ಸಚಿವ ಕೆ. ಎಂ. ಮುನಿಯಪ್ಪರ ಮಗಳು.

ಮಂಗಳೂರು ಸಂಪರ್ಕದ ಎನ್. ಎ. ಹ್ಯಾರಿಸ್ ಹೊರತಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯಾರಿಗೂ ಸದ್ಯ ನಿಗಮ ಮಂಡಳಿ ಅಧ್ಯಕ್ಷತೆ ಸಿಕ್ಕಿಲ್ಲ. ಸಿದ್ದರಾಮಯ್ಯನವರು ತಮ್ಮ ಮಂತ್ರಿ ಮಂಡಲದಲ್ಲಿ ದಕ್ಷಿಣ ಕನ್ನಡ, ಉಡುಪಿಯ ಪ್ರಮುಖ ಜಾತಿಗಳಾದ ಬಿರುವ, ಬಂಟ, ಮೊಗವೀರರನ್ನು ಮಂತ್ರಿ ಮಾಡದೆ ಬುದ್ಧಿವಂತಿಕೆ ತೋರಿಸಿದ್ದಾರೆ. ಸದ್ಯ ನಿಗಮ ಮಂಡಳಿ ಅಧ್ಯಕ್ಷತೆಯಲ್ಲೂ ದೂರ ಇಟ್ಟಿದ್ದಾರೆ. ದೂರದಲ್ಲಿ ಬೇರೆ ಬರುತ್ತಿರಬಹುದು ಎಂದು ದೂರದ ಘಟ್ಟ ಇಣುಕಬಹುದು. ಬಂಟರು ಮಂತ್ರಿ ಆಗದಿದ್ದ ಸಂಪುಟ ಇರಲಿಲ್ಲ. ಈಗ ಇದೆ, ಬಂಟರ ಒದ್ದಾಟ ಹೇಳತೀರದು. ಹೈಕಮಾಂಡ್ ಜನ ಬಿ. ಕೆ. ಹರಿಪ್ರಸಾದ್ ಬಿರುವ ಕೋಟಾ ಎಂದು ಒಂದಷ್ಟು ಗದ್ದಲವಾದರೂ ಮಾಡಿದರು. ಬಂಟರಿಗೆ ಅದೂ ಸಾಧ್ಯವಾಗಿಲ್ಲ.

Related Posts

Leave a Reply

Your email address will not be published.