ಕಾಸರಗೋಡಿನಲ್ಲಿ ಬಿಸಿಯೇರುತ್ತಿರುವ ಲೋಕ ಸಭಾ ಚುನಾವಣಾ ಕಣ : ಪ್ರಚಾರದಲ್ಲಿ ಸಿಪಿಐ(ಎಂ) ಅಭ್ಯರ್ಥಿ ಮೇಲುಗೈ
ಕಾಸರಗೋಡು : ಕಾಸರಗೋಡು ಲೋಕ ಸಭಾ ಕ್ಷೇತ್ರದಲ್ಲಿ ಒಂದು ತಿಂಗಳ ಹಿಂದೆಯೇ ಪ್ರಚರಣಾ ರಂಗಕ್ಕಿಳಿದ ಸಿಪಿಎಂ ಅಭ್ಯರ್ಥಿ ಯ ಬೆನ್ನಲ್ಲೇ ಇದೀಗ ಬಿಜೆಪಿ ಯ ಮಹಿಳಾ ಅಭ್ಯರ್ಥಿ ಎಂ ಎಲ್ ಅಶ್ವಿನಿಯ ಅನಿರೀಕ್ಷಿತ ಎಂಟ್ರಿ.
ಅಭ್ಯರ್ಥಿ ಯಾರೆಂದು ಈ ತನಕ ಘೋಷಣೆ ಆಗದಿದ್ದರೂ ಯು ಡಿ ಎಫ್ ಅಭ್ಯರ್ಥಿ ನಾನೇ ಎಂಬ ಸ್ವಯಂ ಘೋಷಣೆಯೊಂದಿಗೆ ಸದ್ರಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕೂಡಾ ಪ್ರಮುಖರನ್ನು ಬೇಟಿಯಾಗಿ ಪ್ರಚರಣಾ ರಂಗಕ್ಕಿಳಿದಿದ್ದಾರೆ. ಅಭ್ಯರ್ಥಿ ಯಾರೆಂದು ಘೋಷಣೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಚಾಲನೆ ದೊರಕಿಲ್ಲ.
ಕಾಸರಗೋಡಿನ ಬಗ್ಗೆ ಅಷ್ಟೊಂದು ಪರಿಚಯವಿಲ್ಲದ ಮಹಿಳಾ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿರುವುದು ಯು ಡಿ ಎಫ್ ಗೆ ಲಾಭ ತರಲಿರುವುದಾಗಿ ನೇತಾರರು ಅಭಿಪ್ರಾಯ ವ್ಯಕ್ತಪಡಿಸುತಿದ್ದಾರೆ. ಬೆಂಗಳೂರು ನಿವಾಸಿಯಾಗಿರುವ ಅಶ್ವಿನಿ ಮಹಿಳಾ ಮೋರ್ಛಾ ರಾಷ್ಟ್ರೀಯ ಕೌನ್ಸಿಲ್ ಸದಸ್ಯೆ ಹಾಗೂ ಮಂಜೇಶ್ವರ ಬ್ಲಾಕ್ ಪಂ. ಸದಸ್ಯೆ ಕೂಡಾ ಆಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಪಿ ಕೆ ಕೃಷ್ಣದಾಸ್ ಕಾಸರಗೋಡು ಎನ್ ಡಿ ಎ ಅಭ್ಯರ್ಥಿ ಎಂಬುದಾಗಿ ಭಾರೀ ಪ್ರಚಾರವಿದ್ದರೂ ಅಂತಿಮವಾಗಿ ಅಶ್ವಿನಿ ಯ ಹೆಸರು ಘೋಷಣೆಯಾಗಿದೆ. ಇದು ನೇತಾರರಲ್ಲೂ ಕಾರ್ಯಕರ್ತತರಲ್ಲೂ ಭಾರೀ ಆಶ್ಚರ್ಯವನ್ನು ಮೂಡಿಸಿದೆ.
ಬಿಜೆಪಿ ಯಿಂದ ಕಾಸರಗೋಡಿನಿಂದ ಕಣಕ್ಕಿಳಿದ ಮೊದಲ ಮಹಿಳೆಯಾಗಿದ್ದಾಳೆ ಅಶ್ವಿನಿ. ಎಡರಂಗದ ಅಭ್ಯರ್ಥಿ ಬಾಲಕೃಷ್ಣ ಮಾಸ್ಟರ್ ಈ ಸಲ ಜಿಲ್ಲೆಗೆ ಪಾಠ ಮಾಡುವ ಸಿದ್ಧತೆಯಲ್ಲೇ ಒಂದು ಸುತ್ತಿನ ಪ್ರಚಾರವನ್ನು ಮುಗಿಸುವ ಹಂತದಲ್ಲಿದ್ದಾರೆ.