ಕೋಟೇಶ್ವರ ಗ್ರಾ.ಪಂ. ಮುಂಭಾಗದ ನಿರುಪಯುಕ್ತ ಬೃಹತ್ ಟ್ಯಾಂಕ್ ತೆರವು

ಕುಂದಾಪುರ : ಕಳೆದ ಹದಿನೈದು ವರ್ಷಗಳಿಂದ ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್ ತೆರವುಗೊಳಿಸುವ ಕಾರ್ಯಾಚರಣೆ ಕೋಟೇಶ್ವರ ಗ್ರಾಪಂ ವತಿಯಿಂದ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಂಗಳವಾರ ನಡೆಯಿತು.

ಸತತ 9 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದಾಗಿ ಟ್ಯಾಂಕ್ ನೆಲಕ್ಕುರುಳಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.ಈ ಬೃಹತ್ ನೀರಿನ ಟ್ಯಾಂಕ್ ಇದ್ದು, 1986ರಲ್ಲಿ ನಿರ್ಮಾಣವಾದ 2 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಹೆಡ್ಟ್ಯಾಂಕ್ನಲ್ಲಿ ಸೋರಿಕೆ ಕಂಡುಬಂದಿದ್ದರಿಂದ ಕಳೆದ ಹದಿನೈದು ವರ್ಷಗಳಿಂದ ಯಾವುದೇ ಉಪಯೋಗವೂ ಇಲ್ಲದೇ ಇದು ನಿರುಪಯುಕ್ತವಾಗಿತ್ತು. ಟ್ಯಾಂಕ್ ಶಿಥಿಲಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಪಂ ಕಟ್ಟಡ ಸಹಿತ ಇತರೆ ಅಂಗಡಿಗಳಿಗೆ ಅಪಾಯ ಇದ್ದ ಕಾರಣ, ಈ ಟ್ಯಾಂಕ್ ತೆರವಿನ ಬಗ್ಗೆ ಗ್ರಾಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯಿಂದ ಸಾಮರ್ಥ್ಯ ವರದಿ ಪಡೆದು ಟ್ಯಾಂಕ್ ಕೆಡವಲು ಮಂಗಳವಾರ ದಿನ ನಿಗದಿ ಮಾಡಿದ್ದರು.ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳುಸಂಚಾರಿ ಠಾಣೆ, ಆರೋಗ್ಯ ಇಲಾಖೆ, ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಓವರ್ ಹೆಡ್ ಟ್ಯಾಂಕ್ ತೆರವು ಕಾರ್ಯಾಚರಣೆ ಸಾಂಗವಾಗಿ ನಡೆಯಿತು.
