ಕೆಪಿಟಿ : ಪ್ರತಿನಿತ್ಯ ಪಾರಿವಾಳಗಳಿಗೆ ಆಹಾರ ಧಾನ್ಯ ನೀಡುತ್ತಿರುವ ಪಕ್ಷಿಪ್ರೇಮಿ ಗಣೇಶ್ ಪೂಜಾರಿ
ಕೊರೊನಾ ಸಂದರ್ಭದಲ್ಲಿ ಪಕ್ಷಿಗಳಿಗೆ ಆಹಾರ ಹಾಕುವುದನ್ನು ಆರಂಭಿಸಿದ ಮಂಗಳೂರು ಕೆಪಿಟಿ ಪೆಟ್ರೊಲು ಪಂಪ್‍ನ ಉದ್ಯೋಗಿ ಗಣೇಶ್ ಪೂಜಾರಿ ಅವರು ನಂತರ ಅದನ್ನು ನಿತ್ಯದ ಅಭ್ಯಾಸವನ್ನಾಗಿಸಿಕೊಂಡಿದ್ದು ಇದೀಗ ಪ್ರತಿನಿತ್ಯ ನೂರಾರು ಪಾರಿವಾಳಗಳಿಗೆ ಆಹಾರದಾತರಾಗಿದ್ದಾರೆ. ಪ್ರತಿನಿತ್ಯ ಪಾರಿವಾಳಗಳಿಗೆ ಆಹಾರ ಹಾಕಿ ಪೋಷಿಸುವ ಇವರ ಪಕ್ಷಿಪ್ರೇಮ ಇದೀಗ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಕೊರೊನಾ ಸಂಕಷ್ಟದ ಕಾಲದಲ್ಲಿ ಅಂಗಡಿ-ಮುಗ್ಗಟ್ಟುಗಳು ಬಂದ್ ಇದ್ದದ್ದರಿಂದ ಪಾರಿವಾಳಗಳಿಗೂ ಆಹಾರ ಧಾನ್ಯಗಳು ಸಿಗುತ್ತಿರಲಿಲ್ಲ. ಆಗ ಪಾರಿವಾಳಗಳ ಹಸಿವಿನ ನೋವನ್ನು ಅರಿತ ಗಣೇಶ್ ಪೂಜಾರಿಯವರು ತಾನು ಉದ್ಯೋಗ ಮಾಡುತ್ತಿರುವ ಸ್ಥಳದಲ್ಲೇ ಆಹಾರಧಾನ್ಯಗಳನ್ನು ಹಾಕಲು ಆರಂಭಿಸಿದ್ದರು. ಆರಂಭದಲ್ಲಿ ಒಂದೆರೆಡು ಪಾರಿವಾಳಗಳು ಬಂದು ಆಹಾರ ಧಾನ್ಯಗಳನ್ನು ಹೆಕ್ಕಿ ತಿನ್ನುತ್ತಿತ್ತು.
ನಂತರ ದಿನಗಳಲ್ಲಿ ಇವರು ಆಹಾರ ಧಾನ್ಯಗಳನ್ನು ಹಾಕುವುದನ್ನು ಗಮನಿಸಿ ಮರದಲ್ಲಿ, ವಿದ್ಯುತ್ ಕಂಬದಲ್ಲಿ, ಮಾಡಿನಲ್ಲಿ ಕುಳಿತಿದ್ದ ಇತರ ಪಾರಿವಾಳಗಳು ಆಹಾರ ಧಾನ್ಯ ಹಾಕುವ ಅಂಗಳಕ್ಕೆ ಬರತೊಡಗಿತು.
ಇದೀಗ ನೂರರಿಂದ ಇನ್ನೂರು ಪಾರಿವಾಳಗಳು ಆಹಾರ ಧಾನ್ಯ ತಿನ್ನಲು ಬರುತ್ತಿದೆ. ಪ್ರತಿದಿನ ನಿರ್ದಿಷ್ಠ ಸಮಯಕ್ಕೆ ಪಾರಿವಾಳಗಳು ಅಂಗಳಕ್ಕೆ ಹಾರಿ ಬರುತ್ತವೆ. ಗಣೇಶ್ ಪೂಜಾರಿ ಅವರು ತನ್ನ ದುಡಿಮೆಯ ಒಂದಿಷ್ಟು ಹಣದಿಂದ ಅಕ್ಕಿ, ಜೋಳದ ಹುಡಿ ಸಹಿತ ಇತರ ಆಹಾರ ಧಾನ್ಯಗಳನ್ನು ಖರೀದಿಸಿ ಪಾರಿವಾಳಗಳಿಗೆ ಹಾಕುತ್ತಾರೆ.
ಪೆಟ್ರೊಲ್ ಪಂಪಿಗೆ ಬರುವ ಕೆಲವು ಗ್ರಾಹಕರು ಇವರ ಪಕ್ಷಿಪ್ರೇಮವನ್ನು ಅರಿತು ಇವರಿಗೆ ಅಕ್ಕಿ ಮತ್ತಿತರ ಧಾನ್ಯಗಳನ್ನು ನೀಡಿ ಸಹಕರಿಸುತ್ತಾರೆ. ಒಟ್ಟಿನಲ್ಲಿ ಪಕ್ಷಿಗಳಿಗೆ ಬಾಯಿ ಬಾರದಿದ್ದರೇನಂತೆ? ಆ ಪಕ್ಷಿಗಳ ಭಾವನೆಯನ್ನು ಅರಿತು ಅದಕ್ಕೆ ತುತ್ತು ನೀಡುವುದರಲ್ಲಿ ಗಣೇಶ್ ಪೂಜಾರಿ ಅವರು ಸಂತೋಷವನ್ನು ಅನುಭವಿಸುತ್ತಿದ್ದಾರೆ.