“ನಿಮ್ಮೆಲ್ಲರ ಆಶೀರ್ವಾದ” ಚಿತ್ರ ಇದೇ ಶುಕ್ರವಾರ ತೆರೆಗೆ!

ವರುಣ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಮೂಡಿಬಂದಿರುವ “ನಿಮ್ಮೆಲ್ಲರ ಆಶೀರ್ವಾದ” ಸಿನಿಮಾ ಇದೇ ಶುಕ್ರವಾರ ತೆರೆ ಕಾಣಲಿದೆ ಎಂದು ನಾಯಕ ನಟ ಪ್ರತೀಕ್ ಶೆಟ್ಟಿ ತಿಳಿಸಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದು ಹೊಸಬರ ವಿಭಿನ್ನ ಪ್ರಯತ್ನವಾಗಿದ್ದು ಒಳ್ಳೆಯ ಕತೆ ಸಿನಿಮಾದ ಜೀವಾಳವಾಗಿದೆ. ಚಿತ್ರತಂಡದಲ್ಲಿ ಬಹುತೇಕ ಹೊಸ ಕಲಾವಿದರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ನೀವೆಲ್ಲರೂ ಆಶೀರ್ವಾದ ಮಾಡಿದರೆ ನಾವು ಇನ್ನಷ್ಟು ಹೊಸ ಪ್ರಯತ್ನಗಳ ಮೂಲಕ ನಿಮ್ಮನ್ನು ರಂಜಿಸಲಿದ್ದೇವೆ ಎಂದರು.
ಬಳಿಕ ಮಾತಾಡಿದ ಹಿರಿಯ ರಂಗಭೂಮಿ ಕಲಾವಿದ ನಟ ಅರವಿಂದ್ ಬೋಳಾರ್ ಅವರು, ಈ ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಸರ್ವಧರ್ಮದ ಚಿತ್ರಪ್ರೇಮಿಗಳು ನಮ್ಮನ್ನು ಬೆಂಬಲಿಸಿ ಸಿನಿಮಾ ನೋಡಿ ಹರಸಬೇಕು. ಹೊಸಬರ ಹೊಸ ಪ್ರಯತ್ನ ಗೆಲ್ಲಬೇಕು ಎಂದರು.
ಮೈಮ್ ರಾಮದಾಸ್ ಮಾತನಾಡಿ, ಎಲ್ಲೂ ಉತ್ಪ್ರೇಕ್ಷೆ ಇಲ್ಲದೇ ಸಹಜವಾಗಿ ಸಿನಿಮಾ ಮೂಡಿಬಂದಿದೆ. ಕರಾವಳಿ ಸೊಗಡಿನ ಕಂಪನ್ನು ಸಿನಿಮಾದಲ್ಲಿ ಕಾಣಬಹುದು. ಸಿನಿಮಾ ತಂಡವನ್ನು ಪ್ರೇಕ್ಷಕರು ಗೆಲ್ಲಿಸುವ ಮೂಲಕ ಮುಂದೆ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುವಂತಾಗಬೇಕು ಎಂದರು.
ವಾಲ್ಟರ್ ನಂದಳಿಕೆ ಮಾತು ಮುಂದುವರಿಸಿ, ತುಳುನಾಡಿನ ಜನರು ಯಾವತ್ತೂ ಒಳ್ಳೆಯ ಸಿನಿಮಾಗಳನ್ನು ಸೋಲಲು ಬಿಟ್ಟಿಲ್ಲ. ನಿಮ್ಮೆಲ್ಲರ ಆಶೀರ್ವಾದ ಸಿನಿಮಾ ಥಿಯೇಟರ್ ಪ್ರೇಕ್ಷಕರಿಂದ ತುಂಬಲಿ ಎಂದು ಶುಭ ಹಾರೈಸಿದರು.

ಕನ್ನಡದ ಮೇರು ನಟಿ ಎಂ ಏನ್ ಲಕ್ಷ್ಮೀದೇವಿ, ಮೈಮ್ ರಾಮದಾಸ್, ಸ್ವಾತಿ ಗುರುದತ್ತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ, ಸದಾಶಿವ ಅಮೀನ್, ಖಳನಟನಾಗಿ ಕೆಜಿಎಫ್ ಖ್ಯಾತಿಯ ದಿನೇಶ್ ಮಂಗಳೂರು ಮಿಂಚಿದ್ದಾರೆ.
ವರುಣ್ ಸಿನಿ ಕ್ರಿಯೇಷನ್ ಲಾಂಛನದಲ್ಲಿ ವರುಣ್ ಹೆಗ್ಡೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ, ರವಿಕಿರಣ್ ಕತೆ- ನಿರ್ದೇಶನ, ಸರವಣನ್ ಜಿ ಏನ್ ಛಾಯಾಗ್ರಹಣ, ರಾಷ್ಟ್ರ ಪ್ರಶಸ್ತಿ ವಿಜೇತ ಸುರೇಶ್ ಆರುಮುಗಮ್ ಸಂಕಲನ, ಸುನಾದ್ ಗೌತಮ್ ಸಂಗೀತ, ವಿವೇಕ್ ಚಕ್ರವರ್ತಿ ಹಿನ್ನೆಲೆ ಸಂಗೀತ ಚಿತ್ರದಲ್ಲಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಸುಮಧುರ ಹಾಡುಗಳು ಎಲ್ಲರ ಮನಸೆಳೆದಿದೆ. ರಘು ದೀಕ್ಷಿತ್ ಹಾಡಿರುವ ‘ರಕ್ಷಕ ‘ ಹಾಡಿನ ಮುಖಾಂತರ ‘ನಿಮ್ಮೆಲ್ಲರ ಆಶೀರ್ವಾದ’ ಚಿತ್ರತಂಡ ಜನರಿಗಾಗಿ ಹಗಲಿರುಳು ದುಡಿಯುವ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದೆ. ಹಾಡುಗಳಿಗೆ ರಜತ್ ಹೆಗ್ಡೆ, ನಿನಾದ ನಾಯಕ್, ನಿಹಾಲ್ ತಾವ್ರೋ ಧ್ವನಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಉದಯ್ ಕುಮಾರ್ ಹೆಗ್ಡೆ, ವರುಣ್ ಹೆಗ್ಡೆ, ನಿರ್ದೇಶಕ ರವಿಕಿರಣ್, ಪುರುಷೋತ್ತಮ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
